ಸ್ತನ ಕ್ಯಾನ್ಸರ್ : ಕಾರಣ -ಲಕ್ಷಣ -ಪರೀಕ್ಷೆ -ತಡೆ- ನಿರ್ಮೂಲನೆ

480

ಕ್ಯಾನ್ಸರ್ ವಿಶ್ವವನ್ನು ಕಾಡುತ್ತಿರುವ ಅತಿ ಭೀಕರ ಕಾಯಿಲೆ. ಕ್ಯಾನ್ಸರ್ ಧೃಡ ಪಟ್ಟಿತೆಂದರೆ ಸಾವು ನಿಶ್ಚಿತ ಎಂಬ ಮನೋಭಾವ ಸಾಮಾನ್ಯವಾಗಿದೆ. ಈಗಾಗಲೇ ಕ್ಯಾನ್ಸರ್ ವಿರುದ್ಧ ವೈದ್ಯಕೀಯ ಲೋಕ ಸೆಣಸುತ್ತಲೇ ಬಂದಿದೆ. ಭಾರತದಲ್ಲಿ ಈ ಹಿಂದೆ ಮಹಿಳೆಯರು ಗರ್ಭಕೋಶದ ಕ್ಯಾನ್ಸರ್‌ನಿಂದ ಅತಿ ಹೆಚ್ಚಾಗಿ ಸಾವು ಕಾಣುತ್ತಿದ್ದರು. ಆದರೆ ಬದಲಾದ ಜೀವನ ಶೈಲಿ, ಆಹಾರ ಪದ್ದತಿ ಮತ್ತಿತರೆ ಕಾರಣಗಳಿಂದಾಗಿ ಸ್ತನ ಕ್ಯಾನ್ಸರ್ ಮೊದಲ ಸ್ಥಾನ ಪಡೆದಿದೆ.
ಸ್ತನದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ನಿರ್ಲಕ್ಷಿಸಿದ್ದಲ್ಲಿ ಅದು ಮಾರಣಾಂತಿಕವಾಗಿರುತ್ತದೆ. ಸಂಶೋಧನೆ ಹಾಗೂ ರೋಗಿಗಳ ಮಾಹಿತಿ ಅನುಸಾರ ಭಾರತದಲ್ಲಿ ಪ್ರತಿ ೮ ನಿಮಿಷಕ್ಕೆ ಓರ್ವ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿzರೆ.
ಅಮೆರಿಕದಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯ ಕನಿಷ್ಠ ಜೀವಿತಾವಧಿ ೫ ರಿಂದ ೨೦ ವರ್ಷದವರೆಗೆ ಇದೆ. ಆದರೆ ಆಘಾತಕಾರಿ ಸಂಗತಿಯಂದರೆ, ಭಾರತದಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಬಳಿಕ ಮಹಿಳೆಯ ಜೀವಿತಾವಧಿ ೫ ವರ್ಷಕ್ಕಿಂತ ಕಡಿಮೆ ಇದೆ. ಇದಕ್ಕೆ ಕಾರಣ ಸ್ತನ ಕ್ಯಾನ್ಸರ್‌ನ ಪತ್ತೆಯಾಗುವಷ್ಟರಲ್ಲಿ ಶರೀರದ ಬಹುತೇಕ ಅಂಗಗಳಿಗೆ ಅದು ವ್ಯಾಪಿಸಿರುತ್ತದೆ. ಈ ಕಾರಣದಿಂದಾಗಿ ಅವರ ಜೀವ ಉಳಿಸುವ ಸಾಧ್ಯತೆಗಳು ಬಹುತೇಕ ಕ್ಷೀಣಿಸುತ್ತವೆ.
ಬ್ರೆಸ್ಟ್ ಕ್ಯಾನ್ಸರ್ ಇಂಡಿಯಾದ ಮಾಹಿತಿ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಮಹಿಳೆಯರು ೨೦೦೮ರವರೆಗೆ ಗರ್ಭಾಶಯ ಕ್ಯಾನ್ಸರ್‌ನಿಂದ ಮರಣ ಹೊಂದುತ್ತಿದ್ದರು. ಆದರೀಗ ಚಿತ್ರಣ ಬದಲಾಗಿ ೨೦೦೮ರ ನಂತರ ದೇಶದಲ್ಲಿ ಮಹಿಳೆ ಯರು ಅತಿ ಹೆಚ್ಚು ಸಾವು ಹೊಂದಲು ಕಾರಣ ಸ್ತನದ ಕ್ಯಾನ್ಸರ್ ಎಂಬ ಸಂಗತಿ. ಈ ವ್ಯಾಧಿಯನ್ನು ತಡೆಯಲು ಪರಿಣಾಮಕಾರಿ ಕಾರ್ಯಕ್ರಮಗಳ ಅವಶ್ಯಕತೆಯನ್ನು ಸಾರಿ ಹೇಳುತ್ತಿವೆ.
ಮತ್ತೊಂದು ದುರದೃಷ್ಟಕರ ಸಂಗತಿಯಂದರೆ, ೨೫ ರಿಂದ ೪೦ ವಯೋಮಾನದ ಸ್ತ್ರೀಯರು ನಗರ ಹಾಗೂ ಗ್ರಾಮೀಣ ಭಾಗದವರು ಕೂಡ ಸಮ ಪ್ರಮಾಣದಲ್ಲಿ ಅತಿ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಿzರೆ. ಆದ್ದರಿಂದ ಸ್ತ್ರೀಯರು ಇದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ತಮ್ಮ ಸುತ್ತಮುತ್ತಲಿನ ಸ್ತ್ರೀಯರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು.
ಸ್ತನದಲ್ಲಿ ಸಮಸ್ಯೆ- ಏನಿದು?
ಸ್ತನದಲ್ಲಿ ಅನೇಕ ಬಗೆಯ ವ್ಯಾಧಿಗಳು ಉಂಟಾಗುತ್ತವೆ. ಅದರಲ್ಲಿ ಕೆಲವು ವ್ಯಾಧಿಗಳೇ ಅಲ್ಲ, ಅವು ಕೇವಲ ಸ್ತ್ರೀ ಶರೀರದಲ್ಲಿ ಕ್ರಿಯಾತ್ಮಕವಾಗಿ ಆಗುವ ಬದಲಾವಣೆಗಳು. ಉದಾಹರಣೆಗೆ ಋತುಚಕ್ರದ ಸಮಯದಲ್ಲಿ ಅನೇಕ ಮಹಿಳೆಯರಿಗೆ ಉಂಟಾಗುವ ಸ್ತನದ ಬದಲಾವಣೆಯನ್ನು ಅನೇಕರು ಸ್ತನರೋಗ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಋತುಚಕ್ರಕ್ಕೆ ಅನುಸಾರವಾಗಿ ಸ್ತನದಲ್ಲಿ ರಚನಾತ್ಮಕ ಹಾಗೂ ಕ್ರಿಯಾತ್ಮಕ ಪರಿವರ್ತನೆಗಳನ್ನು ಪ್ರತಿಯೊಬ್ಬ ಸ್ತ್ರೀಯರೂ ಗಮನಿಸಿರುತ್ತಾರೆ. ಇದನ್ನು ವಿವರಿಸಲು ವೈದ್ಯಕೀಯ ಶಾಸ್ತ್ರದಲ್ಲಿ ಅನೇಕ ಸಿದ್ಧಾಂತಗಳನ್ನು ವಿವರಿಸಲಾಗಿದೆ.
ಪ್ರೌಢಾವಸ್ಥೆಯಲ್ಲಿ ಅಂದರೆ ಋತುಚಕ್ರ ಶುರುವಾದಾಗಿನಿಂದ ಅಂದಾಜು ೧೪ನೇ ವಯಸ್ಸಿನಿಂದ ಸರಿ ಸುಮಾರು ೩೦ ವಯೋಮಾನ ದವರೆಗಿನ ಸ್ತ್ರೀಯರಲ್ಲಿ ಸ್ತನದಲ್ಲಿ ವೇದನೆ ಹಾಗೂ ಸ್ತನದ ಗಾತ್ರ ವೃದ್ಧಿಸುವುದು ಹಾಗೂ ಸ್ತನದಲ್ಲಿ ಒಂದು ಭಾಗ ಊತ ಅಥವಾ ಗಡ್ಡೆ ರೂಪದಲ್ಲಿ ಇರುವ ಹಾಗೆ ಕಾಣಸಿಗುತ್ತದೆ. ಇದನ್ನು ಸೈಕ್ಲಿಕಲ್ ಮಾಸ್ಟಾಲ್ಜಿಯಾ ಎಂದು ವೈದ್ಯರು ಗುರುತಿಸು ತ್ತಾರೆ. ಇದಕ್ಕೆ ಕಾರಣ ಶರೀರದಲ್ಲಿನ ಹಾಮೆನ್‌ಗಳ ಬದಲಾವಣೆಯಷ್ಟೇ. ಈ ಲಕ್ಷಣಕ್ಕೆ ಆಶ್ವಾಸನೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಮಾಡಿದರೆ ಸಾಕು. ವಿಶೇಷ ಚಿಕಿತ್ಸೆಯ ಅವಶ್ಯಕತೆ ಬಹುತೇಕ ಪ್ರಕರಣದಲ್ಲಿ ಇರುವುದಿಲ್ಲ.
ಸ್ತನದಲ್ಲಿ ಗಡ್ಡೆ:
ಸ್ತನದಲ್ಲಿ ಯಾವುದೇ ತರಹದ ಊತ ಅಥವಾ ಗ್ರಂಥಿ ರೂಪದ ಗಡ್ಡೆ ಕಾಣಿಸಿಕೊಂಡರೆ ತಕ್ಷಣ ತಜ್ಞ ವೈದ್ಯರ ತಪಾಸಣೆ ಹಾಗೂ ಸಲಹೆ ಪಡೆಯುವುದು ಸೂಕ್ತ. ಹಲವಾರು ಸ್ತನದ ಗಡ್ಡೆಗಳು ನೋವಿಲ್ಲದೆ ಶುರುವಾಗುತ್ತದೆ, ಆದರೆ ಇದನ್ನು ನಿರ್ಲಕ್ಷಿಸಬಾರದು. ಏಕೆಂದರೆ, ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಸರ್ಜರಿಯಲ್ಲಿ ಈ ಸೂಕ್ತಿಯನ್ನು ಹಲವಾರು ಬಾರಿ ರೋಗಿಗಳಿಗೆ ಹಾಗೂ ನಾಗರೀಕರಿಗೆ ರೋಗದ ಗಂಭೀರತೆ ವಿವರಿಸಲು ಉಪಯೋಗಿಸುತ್ತೇವೆ.
ಶರೀರದ ಯಾವುದೇ ಭಾಗದಲ್ಲಿ ನೋವಿಲ್ಲದೆ ವೇಗವಾಗಿ ಬೆಳೆಯುತ್ತಿರುವ ಗಡ್ಡೆಗಳು ಸಾಮಾನ್ಯವಾಗಿ ಜೀವಾಘಾತಕಕಾರಿಯಾಗಿರುತ್ತವೆ. ಅವುಗಳಲ್ಲಿ ಅನೇಕ ಅರ್ಬುದ ಕ್ಯಾನ್ಸರ್ ರೂಪ ಅಥವಾ ಅದರ ಪ್ರಕಾರವಾಗಿರುತ್ತದೆ. ಸ್ತ್ರೀಯರು ಅವರ ಸ್ತನದಲ್ಲಿ ಯಾವುದೇ ರೀತಿಯ ಗಡ್ಡೆಗಳು ಬೆಳೆದಿದ್ದರೆ ತಕ್ಷಣ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯ.
ಸ್ತನದಲ್ಲಿ ಸಾಮಾನ್ಯವಾಗಿ ಫೈಬ್ರೋ ಅಡಿನೋಮಾ ಎಂಬ ಗಡ್ಡೆ ೧೬ರಿಂದ ೩೫ ವಯೋಮಾನದ ಸ್ತ್ರೀಯರಲ್ಲಿ ಕಾಣಸಿಗುತ್ತದೆ. ಇದು ಕ್ಯಾನ್ಸರ್ ಅಲ್ಲ. ಇದು ಅನುಪಯುಕ್ತವಾಗಿ ಸ್ತನದಲ್ಲಿ ಬೆಳೆದುಕೊಂಡಿರುವ ಗಡ್ಡೆ, ಇದರ ಲಕ್ಷಣಗಳು ಋತುಚಕ್ರದ ಸಮಯದಲ್ಲಿ ಹೆಚ್ಚಾಗಿ ಕಾಣಸಿಗಬಹುದು.
ಇಂದು ಸೂಕ್ಷ್ಮತೆಯೂ ಇದೆ. ಅದೇನೆಂದರೆ, ನಾಚಿಕೆ ಮತ್ತು ಮುಜುಗರ. ಸ್ತನ ಪರೀಕ್ಷೆಗೆ ಒಳಪಡಿಸಲು ಇಚ್ಛೆಯಿರದ ಸ್ತ್ರೀಯರು ಹಾಗೂ ಹಲವಾರು ಪ್ರಕರಣಗಳಲ್ಲಿ ತಪಾಸಣೆಗೆ ವ್ಯಯಿಸಬೇಕಾದ ಖರ್ಚಿನಿಂದ ತಪ್ಪಿಸಿಕೊಳ್ಳಲು ಸ್ತನದ ಗಡ್ಡೆಯನ್ನು ಅಲಕ್ಷಿಸುತ್ತಾರೆ. ಇದು ಸಲ್ಲದು, ಈ ಸೂಕ್ಷ್ಮತೆಯನ್ನು ಪರಿಗಣಿಸಿ ವಿಶ್ವದ ಅನೇಕ ವೈದ್ಯಕೀಯ ತಜ್ಞರು ಒಗ್ಗೂಡಿ ಅನೇಕ ಪ್ರಕಾರದ ಪರಿಹಾರಗಳನ್ನು ಕಂಡುಹಿಡಿದಿರುತ್ತಾರೆ. ಇದನ್ನು ಸ್ತನದ ಸ್ವ ಪರೀಕ್ಷೆ ಎನ್ನಲಾಗುತ್ತದೆ. ಇದರಲ್ಲಿ ಸಾಧನವೊಂದನ್ನು ಸ್ತನ ಕ್ಯಾನ್ಸರನ್ನು ಜೀವಕ್ಕೆ ಹಾನಿ ಉಂಟು ಮಾಡುವ ಮುನ್ನ ಗುರುತಿಸಲು ಹಾಗೂ ಅದರಿಂದಾಗುವ ಜೀವಹಾನಿಯನ್ನು ತಡೆಯಲು ಯಶಸ್ವಿಯಾಗಿ ಬಳಸಲಾಗುತ್ತಿದೆ.
ಏನಿದು ಸ್ತನದ ಸ್ವ ಪರೀಕ್ಷೆ ?
೧೪ರಿಂದ ೫೫-೬೦ ವಯೋಮಾನದ ಪ್ರತಿಯೊಬ್ಬ ಸ್ತ್ರೀ ೬ ತಿಂಗಳಿಗೊಮ್ಮೆ ತಮ್ಮ ಸ್ತನವನ್ನು ತಾವೇ ಪರೀಕ್ಷಿಸಿಕೊಳ್ಳಬೇಕು. ಪರೀಕ್ಷೆಯ ವಿಧಾನ ಇಂತಿದೆ. ತಿಂಗಳಿನ ಒಂದು ದಿನ ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳೂ ಅದೇ ದಿನ ಪರೀಕ್ಷೆ ಮಾಡಿ ಕೊಳ್ಳಿ. ಮುಟ್ಟಾಗುವ ಪ್ರಾಯದವರಾದರೆ ಮುಟ್ಟು ಶುರುವಾಗಿ ಒಂದು ವಾರದ ನಂತರ ನಿಮ್ಮ ಸ್ತನದ ಊತ ಮತ್ತು ಸೂಕ್ಷ್ಮತೆ ಕಡಿಮೆ ಆದ ಮೇಲೆ ಪರೀಕ್ಷೆ ಮಾಡಿಕೊಳ್ಳಿ. ಕನ್ನಡಿಯ ಮುಂದೆ ನಿಂತು ನಿಮ್ಮ ಸ್ತನಗಳಲ್ಲಿ ಏನಾದರೂ ಸೂಚನೆಗಳು ಬದಲಾವಣೆಗಳೂ ಇದೆಯೋ ಅಂತ ಪರೀಕ್ಷೆ ಮಾಡಿಕೊಳ್ಳಿ.
ಸ್ತನ ಅಥವಾ ಸ್ತನದ ತೊಟ್ಟುಗಳನ್ನು ಎಚ್ಚರಿಕೆಯಿಂದ ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಕೈ ಬೆರಳುಗಳ ಸಹಾಯದಿಂದ ಸ್ತನದ ಸುತ್ತ ಮುತ್ತಲೂ ಮೆತ್ತಗೆ ಒತ್ತಿಕೊಂಡು ಗಡ್ಡೆಗಳು ಇದೆಯಾ ಅಂತ ಪರೀಕ್ಷೆ ಮಾಡಿಕೊಳ್ಳಿ. ಇದೇ ಕ್ರಮವನ್ನು ಹಾಸಿಗೆಯ ಮೇಲೆ ಮಲಗಿಕೊಂಡು ಮತ್ತೆ ಪರೀಕ್ಷಿಸಿಕೊಳ್ಳಬೇಕು.
ಗಮನಿಸಬೇಕಾದ ಸೂಚನೆಗಳು
ಅಥವಾ ಬದಲಾವಣೆಗಳು:
ಗಡ್ಡೆ ಅಥವಾ ಗಂಟುಗಳು ಇಲ್ಲದಿದ್ದರೂ ಇಡಿಯ ಸ್ತನ ಅಥವಾ ಸ್ತನದ ಭಾಗಗಳಲ್ಲಿ ಊತ, ಚರ್ಮದ ಕೆರೆತ ಅಥವಾ ಗುಳಿಗಳು (ಕೆಲವೊಮ್ಮೆ ಕಿತ್ತಲೆ ಹಣ್ಣಿನ ಸಿಪ್ಪೆಯ ಹಾಗೆ ಕಾಣಬಹುದು), ಸ್ತನ ಅಥವಾ ಸ್ತನದ ತೊಟ್ಟುಗಳಲ್ಲಿ ನೋವು, ತೊಟ್ಟುಗಳು ಒಳಗಡೆ ತಿರುಗುವುದು, ಸ್ತನದ ಚರ್ಮ ಕೆಂಪಾಗುವುದು, ಪೊರೆ ಬರುವುದು, ಅಥವಾ ಸ್ತನದ ತೊಟ್ಟು ಅಥವಾ ಸ್ತನದ ಚರ್ಮ ದಪ್ಪ ಆಗುವುದು, ಸ್ತನದ ತೊಟ್ಟುಗಳಿಂದ ಹಾಲಿನ ವಿಸರ್ಜನೆ ಬಿಟ್ಟು ಬೇರೆ ದ್ರವರೂಪದ ಸ್ರಾವವಾಗುವುದು.
ಹೀಗೆ ಎ ಮಹಿಳೆಯರು ೬ ತಿಂಗಳಿಗೊಮ್ಮೆ ಪರೀಕ್ಷೆ ಮಾಡಿದ್ದೇ ಆದಲ್ಲಿ ಸ್ತನದ ಕ್ಯಾನ್ಸರನ್ನು ಪತ್ತೆ ಹಚ್ಚಲು ಹಾಗೂ ಅದರಿಂದಾಗುವ ನಷ್ಟವನ್ನು ತಡೆಯಲು ಉಪಕಾರಿಯಾಗಿರುತ್ತದೆ. ಈ ರೀತಿ ಪರೀಕ್ಷೆ ಮಾಡಿದಾಗ ಏನಾದರೂ ಅಸಾಮಾನ್ಯ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ತಪಾಸಣೆಗೊಳಗಾಗುವುದು ಸೂಕ್ತ.
ಸ್ತನದಲ್ಲಿ ಉದ್ಭವಿಸುವ ಶೇ.೮೦ ಪ್ರತಿಶತ ಗಡ್ಡೆಗಳು ಕ್ಯಾನ್ಸರ್ ಆಗಿರುವುದಿಲ್ಲ. ಅವುಗಳಲ್ಲಿ ಬಹುತೇಕ ಕ್ಯಾನ್ಸರ್ ಅಲ್ಲದ ಗಡ್ಡೆಗಳಾಗಿರುತ್ತವೆ. ಅವುಗಳಿಗೆ ಔಷಧೋಪಾಚಾರ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಿ ಸಂಪೂರ್ಣ ಗುಣಮುಖರಾಗಬಹುದು.

ಜಿ. ಹಿರೇಮಠ್,
ಆಡಳಿತಾಧಿಕಾರಿಗಳು,
ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ನಿದಿಗೆ (ಅಂಚೆ)