ಸೂಕ್ಷ್ಮ ಸಂವೇದನಾಶೀಲತೆ ಪಾಟೀಲರ ಸಾಹಿತ್ಯ ಕೃತಿಗಳಿಗೆ ಪ್ರೇರಣೆ: ಡಾ| ಜಿ.ಎಸ್. ಭಟ್

499

ಸಾಗರ: ಸೂಕ್ಷ್ಮವಾದ ಸಂವೇದನಾಶೀಲತೆ, ಸಾಹಿತ್ಯ ಬರವಣಿಗೆ ಕುರಿತು ಇರುವ ನಿಷ್ಟೆ, ನಿರಂತರತೆ ಹನುಮಂತ ಅನಂತ ಪಾಟೀಲರ ಸಾಹಿತ್ಯ ಕೃತಿಗಳಿಗೆ ಪ್ರೇರಣೆ ಎಂದು ಲೇಖಕ ಡಾ| ಜಿ.ಎಸ್.ಭಟ್ ಹೇಳಿದರು.
ಇಲ್ಲಿನ ಭೂಮಿ ರಂಗಮನೆಯಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹನುಮಂತ ಅನಂತ ಪಾಟೀಲ ಅವರ ಕವನ ಸಂಕಲನ `ಚಾರಣ, `ನಯೊಂದಿಗೆ ಅನುಸಂಧಾನ, ಕಥಾ ಸಂಕಲನ `ಅಪರಿಚಿತ ಲೇಖನಗಳ ಸಂಗ್ರಹದ ಕತಿ `ಸಾವೆಂಬ ಬದುಕಿನ ಚರಮಗೀತೆಯ ಸುತ್ತ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ದಿನನಿತ್ಯದ ಬದುಕಿನ ಸೂಕ್ಷ್ಮ ಸಂಗತಿಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಕಲ್ಪನೆ, ಭಾವನೆಗಳ ಹದವಾದ ಮಿಶ್ರಣ ಮಾಡುವ ಬರಹದ ಶೈಲಿ ಪಾಟೀಲರಿಗೆ ಸಿದ್ದಿಸಿದೆ. ಬಹುಮುಖಿ ಅಧ್ಯಯನದ ಜೊತೆಗೆ ಅವರ ಬರಹಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಮನಶಾಸ್ತ್ರೀಯ ನೆಲೆಗಟ್ಟು ಕಾಣಬಹುದಾಗಿದೆ ಎಂದು ತಿಳಿಸಿದರು.
ಪಾಟೀಲರ ಹಲವು ಬರಹಗಳಲ್ಲಿ ಅವರಿಗಿರುವ ಸಾಂಸ್ಕೃತಿಕ ಕಾಳಜಿ ಅತ್ಯಂತ ದಟ್ಟವಾಗಿ ವ್ಯಕ್ತವಾಗಿದೆ. ಕವನಗಳಲ್ಲಿ ರೂಪಕಗಳನ್ನು ಪರಿಣಾಮ ಕಾರಿಯಾಗಿ ಬಳಸಿಕೊಂಡಿರುವ ಅವರ ಕತೆಗಳ ರಚನೆ ವೇಳೆ ವೈವಿಧ್ಯ ತಂತ್ರಗಳ ಮೂಲಕ ಓದುರಿಗೆ ಆಪ್ತವಾಗುತ್ತಾರೆ ಎಂದು ಹೇಳಿದರು.
ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಪೊಲೀಸ್ ಇಲಾಖೆಯ ಉದ್ಯೋಗಿಯಾಗಿದ್ದ ಪಾಟೀಲರು ಸಾಹಿತ್ಯದ ಜೊತೆ ಸಂಗೀತ, ಸಿನಿಮಾ ಹೀಗೆ ಹತ್ತುಹಲವು ಆಸಕ್ತಿ ಹೊಂದಿ ರುವ ಕಾರಣಕ್ಕೆ ವಿಭಿನ್ನ ಸ್ವರೂಪದ ಕತಿಗಳನ್ನು ರಚಿಸಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಡಾ. ನಾ. ಡಿಸೋಜ, ಪಾಟೀಲರು ಮನುಷ್ಯ ಬದುಕಿನ ಸಾರ್ಥಕತೆಯ ಮಾದರಿಗಳ ಕುರಿತು ತಮ್ಮ ಕತಿಗಳ ಮೂಲಕ ಚಿಂತಿಸಿರುವ ಬಗೆ ವಿಶಿಷ್ಟವಾದದ್ದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲೇಖಕ ಹನುಮಂತ ಅನಂತ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಗಂಗಮ್ಮ ಪ್ರಾರ್ಥಿಸಿದರು. ತ.ಮ.ನರಸಿಂಹ ವಂದಿಸಿದರು. ಎಸ್.ಎಂ.ಗಣಪತಿ ನಿರೂಪಿಸಿದರು.