ಸಿಎಂ ಬಿಎಸ್‌ವೈಗೆ ಕೊರೋನಾ ಪಾಸಿಟಿವ್ ಪುತ್ರಿ ಸೇರಿ ೬ ಮಂದಿಗೆ ಸೋಂಕು ದೃಢ

485

ಬೆಂಗಳೂರು: ಕೊರೊನಾ ಪಾಸಿಟಿವ್ ಕಂಡುಬಂದ ಕಾರಣ ಮಣಿಪಾಲ್ ಅಸ್ಪತ್ರೆಗೆ ದಾಖಲಾಗಿ ರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ನುರಿತ ತಜ್ಞರ ತಂಡ ಯಡಿಯೂರಪ್ಪನವರಿಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ. ಈಗಲೂ ಅವರು ಸದೃಢವಾಗಿದ್ದಾ ರೆಂದು ಮಣಿಪಾಲ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಡಿಯೂರಪ್ಪ ಆರೋಗ್ಯ ಕುರಿತಂತೆ ಆಸ್ಪತ್ರೆಯ ವೈದ್ಯರು ಕ್ಷಣ ಕ್ಷಣದ ಮಾಹಿತಿ ನೀಡಿದ್ದು, ಯಡಿಯೂರಪ್ಪ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ನಮ್ಮ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಐದನೇ ಮಹಡಿ ಯಲ್ಲಿರುವ ವಿಶೇಷ ಘಟಕದಲ್ಲಿ ಯಡಿಯೂರಪ್ಪನವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕಪಡುವ ಆಗತ್ಯವಿಲ್ಲ ಎಂದು ವೈದ್ಯರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಹಗಲುರಾತ್ರಿ ಶ್ರಮಿಸುತ್ತಿದ್ದ ಯಡಿಯೂರಪ್ಪ ಅವರು ಪ್ರತಿನಿತ್ಯ ಅನೇಕ ಸಚಿವರು, ಅಧಿಕಾರಿ ಗಳು, ವೈದ್ಯರು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಇತರೆ ಪ್ರಮುಖರೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ಪ್ರತಿ ವಾರವೂ ಅವರಿಗೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅವರಿಗೆ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಯಡಿಯೂರಪ್ಪ ಅವರು ಕೋವಿಡ್ ಸೋಂಕಿಗೆ ಒಳಗಾದ ದೇಶದ ೨ನೇ ಮುಖ್ಯಮಂತ್ರಿ ಯಾಗಿದ್ದಾರೆ. ಈ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಾಸಿಟಿವ್ ಬಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.
ಕಳೆದ ಎರಡು ದಿನಗಳ ಹಿಂದೆ ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ಈಗ ಪಾಸಿಟಿವ್ ಬಂದಿದೆ. ಆದರೆ ತಮಗೆ ಯಾವುದೇ ರೋಗ ಲಕ್ಷಣ ಗಳಿಲ್ಲ, ಆದರೂ ಆಸ್ಪತ್ರೆಗೆ ದಾಖಲಾ ಗುತ್ತಿರುವುದಾಗಿ ಸಿಎಂ ಹೇಳಿದ್ದಾರೆ.
ಅಲ್ಲದೆ ಕಳೆದ ಎರಡು ದಿನಗಳಿಂದ ಯಾವುದೆ ಸಭೆ, ಸಮಾರಂಭ ನಡೆಸದಿದ್ದರೂ ಜು.೩೧ರಂದು ಕಸ್ತೂರಿ ರಂಗನ್ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಅಂದು ಸಂಜೆ ತಮ್ಮ ನಿವಾಸದಲ್ಲಿ ಕೆಲವು ಸಚಿವರು, ಶಾಸಕರ ಜೊತೆ ಸಭೆ ನಡೆಸಿದ್ದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಅವರ ತಂದೆ ಕೂಡ ಮಣಿಪಾಲ್ ಆಸ್ಪತ್ರೆಯಲ್ಲೇ ದಾಖಲಾಗಿ, ಬೇಗ ಗುಣಮುಖ ರಾಗಿದ್ದರಿಂದ ಅವರ ಸಲಹೆಯ ಮೇರೆಗೆ ಸಿಎಂ ಯಡಿಯೂರಪ್ಪ ನವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಆರೋಗ್ಯದ ಸ್ಥಿತಿಗತಿ ಬಗ್ಗೆ ಪ್ರತಿ ೨ ಗಂಟೆಗಳಿಗೊಮ್ಮೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲು ಮಣಿಪಾಲ್ ಆಸ್ಪತ್ರೆ ನಿರ್ಧರಿಸಿದೆ.
ಆಸ್ಪತ್ರೆಗೆ ದಾಖಲಾಗಿರುವ ಯಡಿಯೂರಪ್ಪನವರಿಗೆ ಮನೆ ಯಿಂದಲೇ ಊಟ, ತಿಂಡಿ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ. ಬೆಳಗ್ಗೆ ಅವರ ಆಪ್ತ ಸಹಾಯಕರು ವೈದ್ಯರ ಸೂಚನೆ ಮೇರೆಗೆ ಇಡ್ಲಿ, ವಡೆ, ದೋಸೆ ಹಾಗೂ ಕಷಾಯವನ್ನು ನೀಡಿದ್ದಾರೆ.
ಯಡಿಯೂರಪ್ಪನವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಪುತ್ರಿಯರು ಮತ್ತು ಸಂಬಂಧಿಕರು ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕ್ಷಣ ಕ್ಷಣಕ್ಕೂ ತಮ್ಮ ತಂದೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಬಿಎಸ್‌ವೈ ಪುತ್ರಿ ಪದ್ಮಾವತಿ ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೋಂ ಕ್ವಾರಂಟೈನ್:
ಬಿಎಸ್‌ವೈಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಪುತ್ರ ವಿಜಯೇಂದ್ರ, ಪುತ್ರಿಯರಾದ ಅರುಣಾದೇವಿ, ಉಮಾದೇವಿ ಸೇರಿದಂತೆ ಕುಟುಂಬ ದವರು ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.
ಗಣ್ಯರ ಹಾರೈಕೆ :
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವ ವರದಿ ತಿಳಿಯುತ್ತಿ ದ್ದಂತೆಯೇ ಹಲವು ಗಣ್ಯರು ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗ ಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರ ಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಡಾ| ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ| ಅಶ್ವತ್ಥ ನಾರಾಯಣ, ಸಚಿವರಾದ ಡಾ| ಕೆ.ಸುಧಾಕರ್ ಇನ್ನಿತರ ಸಚಿವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರು ಶೀಘ್ರ ಗುಣಮುಖ ರಾಗಲಿ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿ ಹಾರೈಸಿದ್ದಾರೆ.
ಇನ್ನು ರಾಜ್ಯದ ಅನೇಕ ಕಡೆ ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪನವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಶೀಘ್ರ ಗುಣಮುಖರಾಗಲಿ ಎಂದು ಪೂಜೆ, ಹೋಮಹವನ ನಡೆಸಿದ್ದಾರೆ.
ಬಿಗಿಭದ್ರತೆ: ಮಣಿಪಾಲ್ ಆಸ್ಪತ್ರೆಯ ಬಳಿ ಭಾರೀ ಪೊಲೀಸ್ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಯಡಿಯೂರಪ್ಪನವರ ಆರೋಗ್ಯ ವಿಚಾರಿಸಲು ಯಾರೊಬ್ಬರೂ ಆಸ್ಪತ್ರೆ ಬಳಿ ಬಾರದಂತೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆಸ್ಪತ್ರೆ ಬಳಿ ಮೊಕ್ಕಾಂ ಹೂಡಿದ್ದು, ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.