ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಾದವರಿಂದಲೇ ಎಡವಟ್ಟು ಸಾಮಾಜಿಕ ಅಂತರ- ಮಾಸ್ಕ್ ಮರೆತ ರಾಘವೇಂದ್ರ – ಅಶೋಕ್‌ನಾಯ್ಕ

465

ಶಿವಮೆಗ್ಗ: ಪಕ್ಷದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಕೋವಿಡ್ ನಿಯಮ ಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಶಿಕಾರಿಪುರ ಪುರಸಭೆಯ ಇಬ್ಬರು ಕಾಂಗ್ರೆಸ್ ಸದಸ್ಯರು ಸದಸ್ಯತ್ವ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ ಮೂವರು ಪಕ್ಷೇತರ ಸದಸ್ಯರು ಸಹ ಬಿಜೆಪಿಗೆ ಸೇರ್ಪಡೆಯಾದರು. ಆದರೆ ಈ ವೇಳೆ ಸಾರ್ವಜನಿಕರಿಗೆ ಬುದ್ದಿ ಹೇಳಬೇಕಾದ ಸಂಸದರೇ ಈ ರೀತಿ ಕೊರೊನಾ ನಿಯಮ ಉಲ್ಲಂಘಿಸಿದರೆ ಇನ್ನು ಬೇರೆಯವರಿಗೆ ಏನು ಹೇಳಲು ಸಾಧ್ಯ ಎಂದು ಸಾರ್ವಜನಿಕರು ಚರ್ಚಿಸುವಂತಾಗಿದೆ.
ಇತ್ತೀಚೆಗೆ ಶಿಕಾರಿಪುರದಲ್ಲೂ ಸಹ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮತ್ತೊಂದೆಡೆ ಗ್ರಾಮಾಂತರ ಶಾಸಕ ಅಶೊಕ್ ನಾಯ್ಕ್ ಸಾಮಾಜಿಕ ಅಂತರ ಮರೆತಿದ್ದಲ್ಲದೇ ಮಾಸ್ಕ್ ಧರಿಸಿದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸರಕಾರ ಸೂಚನೆ ನೀಡುತ್ತಲೇ ಇದೆ. ಆದರೆ ಶಿವಮೆಗ್ಗ ಗ್ರಾಮಾಂತರ ಶಾಸಕರು ಹಾಗೂ ಸಂಸದರು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲವೇನೋ ಎಂಬಂತಿದ್ದಾರೆ.
ಶಿವಮೆಗ್ಗ ತಾಲೂಕಿನ ಹಾರನಹಳ್ಳಿ ಜಿಪಂ ವ್ಯಾಪ್ತಿಯ ಕೊನಗನಹಳ್ಳಿ ಗ್ರಾಮದಲ್ಲಿ ಇಂದು ಶಾಸಕ ಅಶೋಕ್ ನಾಯ್ಕ್ ೨೫ ಲಕ್ಷ ಮೊತ್ತದ ಸಿಸಿ ರಸ್ತೆಗೆ ಚಾಲನೆ ನೀಡಿದರು. ಈ ವೇಳೆ ನೂರಾರು ಮಂದಿ ಸ್ಥಳೀಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರ ಬೆಂಬಲಿಗರು ಭಾಗವಹಿಸಿದ್ದರು. ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಾದ ಶಾಸಕರೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೆಲ್ಲಾ ನೋಡಿದರೆ ಸರ್ಕಾರದ ಸೂಚನೆ, ಆದೇಶ ಕೇವಲ ಸಾರ್ವಜನಿಕರಿಗೆ ಮಾತ್ರ ತಮಗಲ್ಲ ಎಂಬುವಂತಾಗಿದೆ ಜನಪ್ರತಿನಿಧಿಗಳ ವರ್ತನೆ.