ಸಾಮಾಹಿಕ ಪ್ರಾರ್ಥನೆ ನಿರ್ಬಂಧ : ಮನೆಯಲ್ಲೇ ಪ್ರಾರ್ಥಿಸಲು ಮನವಿ

514

ದಾವಣಗೆರೆ: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರೆಸ್ ಕೋವಿಡ್-19 ಪಿಡುಗು ಹರಡದಂತೆ ತೆಗಟ್ಟಲು ದೇಶದಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್ ಹಿನ್ನಲೆಯಲ್ಲಿ ದೇಶದ ಹಾಗೂ ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಪವಿತ್ರ ರಂಜಾನ್ ತಿಂಗಳಿನ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆಯ ಜೊತೆಗೆ ತರಾವೀಹ್ ನಮಾಜ್‍ನ್ನು ಮಸೀದಿಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದ್ದು ಮನೆಯಲ್ಲಿಯೇ ಇದ್ದು ಎಲ್ಲಾ ರೀತಿಯ ಪ್ರಾರ್ಥನೆ ಮಾಡುವುದು.
ಪ್ರವಾದಿ ಮಹಮ್ಮದ್ ಪೈಗಂಬರ್‍ರವರು ಯಾವುದೇ ಸಾಂಕ್ರಮಿಕ ರೋಗ ಉಲ್ಬಣಗೊಂಡಾಗ ಪ್ರತಿಯೊಬ್ಬರೂ ಯಾವುದೇ ಪ್ರದೇಶಗಳಿಗೆ ತೆರಳದೇ ಮನೆಯಲ್ಲಿಯೇ ಪ್ರಾರ್ಥನೆ/ನಮಾಜ್ ಮಾಡುವುದರ ಕುರಿತು ಉಪದೇಶಿಸಿರುವುದರಿಂದ ಮನೆಯಲ್ಲಿಯೇ ಇದ್ದುಕೊಂಡು ಉಪವಾಸ ಆಚರಣೆ ಮಾಡಬೇಕು. ಇದೇ ಮಾಹೆಯ ಅಂತಿಮ ಘಟ್ಟದಲ್ಲಿ ಶಬ್-ಎ-ಖದ್ರ್ ಪವಿತ್ರ ಶುಭರಾತ್ರಿಯಲ್ಲಿ ಸಕಲ ಮಾನವ ಕುಲದ ಒಳಿತಿಗಾಗಿ ಹಾಗೂ ಕೋವಿಡ್ 19 ಸೋಂಕಿನ ನಿವಾರಣೆಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸುವುದು.
ಪವಿತ್ರ ರಂಜಾನ್ ಆಚರಣೆಗೆ ಸಂಬಂಧಿಸಿದಂತೆ ಇಫ್ತಾರ್ ಕೂಟ ಏರ್ಪಡಿಸುವುದಾಗಲೀ, ಮಸೀದಿಯ ಸುತ್ತಮುತ್ತ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯುವುದಾಗಲೀ ಮತ್ತು ಯುವಕರು ರಾತ್ರಿ ವೇಳೆಯಲ್ಲಿ ರಸ್ತೆ, ಬೀದಿ, ಮೊಹಲ್ಲಾ ಹಾಗೂ ವೃತ್ತಗಳಲ್ಲಿ ಸವಾರಿಯೊಂದಿಗೆ ಅನಾವಶ್ಯಕವಾಗಿ ಓಡಾಡುವುದಾಗಲೀ ಮಾಡಬಾರದು.
ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದ ಹಿತದೃಷ್ಟಿಯಿಂದ ಶಾಂತಿ ಕಾಪಾಡುವ ಮೂಲಕ ಪವಿತ್ರ ರಂಜಾನ್ ಮಾಸಾಚಾರಣೆಯನ್ನು ಮಾಡಬೇಕು.
ಜಿಲ್ಲಾಯಾದ್ಯಂತ ಬರುವ ಎಲ್ಲಾ ಮಸೀದಿ/ದರ್ಗಾಗಳ ವ್ಯವಸ್ಥಾಪನಾ ಕಮಿಟಿಯವರು ಈ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪವಿತ್ರ ರಂಜಾನ್ ಮಾಸಾಚರಣೆಯನ್ನು ಅತ್ಯಂತ ಶಾಂತಿಯಿಂದ ಆಚರಿಸಲು ದಾವಣಗೆರೆ ಜಿಲ್ಲಾ ವಕ್ಫ್ ಅಧಿಕಾರಿಯಾದ ಸೈಯದ್ ಮೊಅಜಂ ಪಾಷ ತಿಳಿಸಿದ್ದಾರೆ.