ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅನುಷ್ಠಾನಗೊಳಿಸಲು ಒಕ್ಕೂಟದ ಆಗ್ರಹ…

512

ಶಿವಮೊಗ್ಗ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-೨೦೧೫ನ್ನು ಸರ್ಕಾರ ಸ್ವೀಕರಿಸಿ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ರಾಜು ಹಾಗೂ ಜಿಲ್ಲಾ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ, ಕರ್ನಾಟಕ ಸರ್ಕಾರ ೨೦೧೫ರಲ್ಲಿಯೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಅದು ಈಗ ಪೂರ್ಣಗೊಂಡೇ ೨-೩ ವರ್ಷಗಳಾಗಿವೆ. ಸರ್ಕಾರ ಅದನ್ನು ಇನ್ನು ಸ್ವೀಕರಿಸಿಲ್ಲ. ತಕ್ಷಣವೇ ಸ್ವೀಕರಿಸಬೇಕು ನಂತರ ಅನುಷ್ಟಾನಗೊಳಿಸಬೇಕು ಎಂದು ಆಗ್ರಹಿಸಿದರು.
ಸಮೀಕ್ಷೆ ಸಂವಿಧಾನಬದ್ದವಾಗಿದೆ. ಸಮೀಕ್ಷೆಗಾಗಿಯೇ ೨೦೦ಕೋಟಿ ರೂ.ಗಳ ಖರ್ಚು ಮಾಡಲಾಗಿದೆ. ವರದಿಯಲ್ಲಿ ಸುಮಾರು ೫೬ಕ್ಕೂ ಹೆಚ್ಚು ಅಂಶಗಳನ್ನೊಳಗೊಂಡ ಸಮೀಕ್ಷೆ ಇದೆ. ಎಲ್ಲ ಸಮುದಾಯಗಳ ಅಂಕಿಅಂಶವಿದೆ. ಅಲಕ್ಷಿತ ಸಮುದಾಯಗಳ ಮಾಹಿತಿ ಕೂಡ ಇದೆ. ಇದೊಂದು ಕೇವಲ ಜಾತಿ ಗಣಿತಿ ಅಲ್ಲ. ಒಂದು ಸಾಮಾಜಿಕ, ಶೈಕ್ಷಣಿಕ ಸಂಪೂರ್ಣ ಮಾಹಿತಿಯಾಗಿದೆ. ಈ ಮಾಹಿತಿಯ ಆಧಾರದಲ್ಲಿಯೇ ಸರ್ಕಾರ ಯೋಜನೆ ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು.
ಮಾಹಿತಿಯಲ್ಲಿ ಶಿಕ್ಷಣ, ಉದ್ಯೋಗ, ಭೂಮಿ, ಜನರು ಹೊಂದಿರುವ ಸವಲತ್ತುಗಳು, ಸರ್ಕಾರದ ಸೌಲಭ್ಯಗಳು, ಕುಟುಂಬಗಳ ವಿವರ, ರಾಜಕೀಯ ಸ್ಥಿತಿ, ಪಡಿತರ ಚೀಟಿ ಹೊಂದಿರುವವರ ಸಂಖ್ಯೆ, ವೈವಾಹಿಕ ಸ್ತಾನಮಾನ, ವಯಸ್ಸು, ಮಾತೃಭಾಷೆ, ಶಾಲೆ ಬಿಟ್ಟವರ ಸಂಖ್ಯೆ, ಉದ್ಯೋಗ, ಕೂಲಿ ಕಾರ್ಮಿಕರ ಸ್ಥಿತಿ, ಬ್ಯಾಂಕ್ ಖಾತೆ ಮಾಹಿತಿ ಹೀಗೆ ಅನೇಕ ವೈಜ್ಞಾನಿಕ ಸಮೀಕ್ಷೆ ವರದಿ ಇದಾಗಿದ್ದು, ಸುಮಾರು ೯೦ ವರ್ಷಗಳ ನಂತರ ಈ ವರದಿ ತಯಾರು ಆಗಿದೆ. ಸರ್ಕಾರ ಇದನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ. ಮುಖ್ಯಮಂತ್ರಿಗಳು ಇದಕ್ಕೆ ಸ್ಪಂದಿಸಿದ್ದಾರೆ. ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು. ಆದಷ್ಟು ಬೇಗ ಇದು ಜಾರಿಯಾಗಬೇಕು ಎಂದು ಆರ್.ಕೆ.ಸಿದ್ದರಾಮಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಟಿ.ರಾಜೇಶ್, ಕೆ.ಎಸ್.ಅರುಣ್ ಕುಮಾರ್, ವೈ.ಚಂದ್ರಶೇಖರ್, ಸಿ.ಹೊನ್ನಪ್ಪ, ಕೆ.ಪಿ.ಶ್ರೀನಿವಾಸ್, ಪ್ರಭಾಕರ್ ಮುಂತಾದವರಿದ್ದರು.