ಸರ್ಕಾರದಿಂದ ಸಾಕಷ್ಟು ಅನುದಾನ: ದೀಪಾ

457

ಹೊನ್ನಾಳಿ: ದೇವಸ್ಥಾನಗಳು, ಸಮುದಾಯ ಭವನಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ನೀಡಿದೆ ಎಂದು ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಹೇಳಿದರು.
ತಾಂಡಾ ಅಭಿವೃದ್ಧಿ ಯೋಜನೆ ಯಡಿ ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಕುರುವ ತಾಂಡಾದ ಸೇವಾಲಾಲ್ ಸಮುದಾಯ ಭವನದ ಆವರಣದಲ್ಲಿ ಸಿಸಿ ಪ್ಲ್ಯಾಟ್‌ಫಾರಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೂರದರ್ಶಿತ್ವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾ ಚಾರ್ಯ ಅವರ ಅಭಿವೃದ್ಧಿ ಪರ ಚಿಂತನೆಗಳ ಪರಿಣಾಮ ಎ ಗ್ರಾಮ ಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ತಮ್ಮ ಗುರಿಯಾಗಿದೆ ಎಂದು ಹೇಳಿದರು.
ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ಸ್ಯಾನಿಟೈಸರ್ ಬಳಸೋಣ, ಮಾಸ್ಕ್ ಧರಿಸೋಣ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ, ೬೦ ವರ್ಷ ಮೇಲ್ಪಟ್ಟವರು ಹಾಗೂ ೧೦ ವರ್ಷಗಳೊಳಗಿನವರನ್ನು ಮನೆಯಿಂದ ಹೊರಗೆ ಹೋಗದಂತೆ ನೋಡಿ ಕೊಳ್ಳೋಣ. ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಂಗನವಾಡಿ-ಆಶಾ ಕಾರ್ಯಕರ್ತೆಯರನ್ನು ಗೌರವಿಸೋಣ ಎಂದು ವಿವರಿಸಿದರು.
ತಾಪಂ ಅಧ್ಯಕ್ಷ ಕುಳಗಟ್ಟೆ ಕೆ.ಎಲ್. ರಂಗನಾಥ್, ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಸದಸ್ಯೆ ಛಾಯಾ ದೇವರಾಜ್ ಅರಸ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ದೊಡ್ಡೇರಿ ಡಿ.ಜಿ. ರಾಜಪ್ಪ, ಮುಖಂಡರಾದ ಮಂಜನಾಯ್ಕ, ಗೋಪಿಚಂದ್, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.