ಸದೃಢ ಸಮಾಜ ನಿರ್ಮಾಣಕ್ಕೆ ಬಹು ಮಹತ್ವದ ಸಂಕಲ್ಪ…

383

ಶಿಕಾರಿಪುರ: ಸಮಾಜದಲ್ಲಿನ ಆರ್ಥಿಕ ದುರ್ಬಲರಿಗೆ ಚೈತನ್ಯ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ರೀತಿಯಲ್ಲಿ ಪ್ರೋತ್ಸಾಹಿಸುವುದು ಸಹಕಾರಿ ಸಂಘಗಳ ಮೂಲ ಉದ್ದೇಶ ವಾಗಿದ್ದು ಈ ದಿಸೆಯಲ್ಲಿ ರಾಣಿ ಚನ್ನಮ್ಮ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ಆರ್ಥಿಕ ಚಟುವಟಿಕೆ ಜತೆಗೆ ವಿವಿಧ ತರಬೇತಿ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಬಹು ಮಹತ್ವದ ಸಂಕಲ್ಪವನ್ನು ಕೈಗೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ ಶ್ಲಾಸಿದರು.
ರಾಣಿ ಚನ್ನಮ್ಮ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ೧೬ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಮಾದಲ್ಲಿನ ಕಟ್ಟಕಡೆಯ ವ್ಯಕ್ತಿಯನ್ನು ಸಹ ಆರ್ಥಿಕವಾಗಿ ಸಬಲರಾಗಿಸು ವುದು ಪ್ರತಿ ಸಹಕಾರಿ ಸಂಘದ ಮೂಲ ಉದ್ದೇಶವಾಗಿದೆ ಎಂದ ಅವರು ಕುರಿಕಾಯುವ ಕುರುಬ ಸಣ್ಣರಾಮನ ಸಿದ್ದನಗೌಡ ಸಮಾಜದಲ್ಲಿನ ಆರ್ಥಿಕ ದುಸ್ಥಿತಿಯನ್ನು ಅರಿತು ಆರಂಭಿಸಿದ ಸಹಕಾರ ಸಂಘ ಇದೀಗ ಸಮಾಜದ ಎಲ್ಲ ವರ್ಗದ ಜನತೆಗೆ ಆರ್ಥಿಕ ಸದೃಡತೆಯನ್ನು ಕಲ್ಪಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಗ್ರಾಮೀಣ ಜನತೆಯಲ್ಲಿ ಹಣಕಾಸಿನ ಬಗ್ಗೆ ಜಾಗೃತಿಯನ್ನು ಮೂಡಿಸಿ ಅತಿ ಹೆಚ್ಚು ಆರ್ಥಿಕ ವಹಿವಾಟಿಗೆ ಸಹಕಾರಿ ಸಂಘಗಳು ಕಾರಣವಾಗಿದೆ ಎಂದ ಅವರು ಪಟ್ಟಣದ ಏಕೈಕ ಮಹಿಳಾ ಸಹಕಾರಿ ಸಂಘ ಎಂಬ ಹಿರಿಮೆಯನ್ನು ಹೊಂದಿರುವ ರಾಣಿ ಚನ್ನಮ್ಮ ಸಹಕಾರ ಸಂಘ ಕೇವಲ ಆರ್ಥಿಕ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಬಡಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದರು.
ಸಂಘ ಹೆಚ್ಚು ಬಲಿಷ್ಠಗೊಳ್ಳಲು ಸದಸ್ಯರ ಸಂಖ್ಯೆಯನ್ನು ಹೆಚ್ಚಳಗೊಳಿಸು ವಂತೆ ತಿಳಿಸಿದ ಅವರು ಸದಸ್ಯರು ಕಡ್ಡಾಯವಾಗಿ ಆರ್ಥಿಕ ಚಟುವಟಿಕೆ ಯನ್ನು ಸಂಘದ ಮೂಲಕ ಕೈಗೊಂಡು ಪಡೆಯುವ ಸಾಲಸೌಲಭ್ಯವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘ ಹೆಚ್ಚು ಸದೃಡಗೊಳಿಸುವಂತೆ ತಿಳಿಸಿದರು. ಡಿಸಿಸಿ ಬ್ಯಾಂಕ್‌ನಿಂದ ಸಂಘಕ್ಕೆ ದೊರೆಯಬಹುದಾದ ಸೌಲಭ್ಯವನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ದಂತ ವೈದ್ಯೆ ಡಾ| ಸೌಮ್ಯ ಪ್ರಶಾಂತ್ ಮಾತನಾಡಿ, ಮಹಿಳೆಯ ರಿಂದ ಮಹಿಳೆಯರಿಗಾಗಿ ಮಹಿಳೆಯರಿ ಗೋಸ್ಕರ ಆರಂಭವಾದ ರಾಣಿ ಚನ್ನಮ್ಮ ಸಹಕಾರ ಸಂಘ ಮಹಿಳೆಯರ ಜತೆಗೆ ಹಲವು ಸಮಾಜಮುಖಿ ಕಾರ್ಯ ದಿಂದ ಪಟ್ಟಣದಲ್ಲಿ ಜನಪ್ರಿಯವಾಗಿದ್ದು ಸಂಘದ ಎಲ್ಲ ಕಾರ್ಯದಲ್ಲಿ ಸದಸ್ಯರು ಕಡ್ಡಾಯವಾಗಿ ಪಾಲ್ಗೊಂಡು ಸಲಹೆ ಸೂಚನೆ ಮೂಲಕ ಸಂಘದ ಸರ್ವತೋಮುಖ ಅಭಿವೃದ್ದಿಗೆ ಕಾರಣಕರ್ತರಾಗುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೇಣುಗೋಪಾಲ್ ಮಾತನಾಡಿ, ಸಂಘದ ಲೆಕ್ಕಪತ್ರ ಪರಿಶೀಲಿಸಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರು ಬಿ ಶ್ರೇಣಿಯಲ್ಲಿ ವರ್ಗೀಕರಿಸಿದ್ದು ಸಮಸ್ತ ಸದಸ್ಯರಿಗೆ ಸಲ್ಲುವ ಗೌರವವಾಗಿದೆ ಉನ್ನತ ಸಾಧನೆಗೆ ಸದಸ್ಯರು ಆಡಳಿತ ಮಂಡಳಿಯ ಜತೆ ಕೈಜೋಡಿಸುವಂತೆ ಮನವಿ ಮಾಡಿದರು.
೨೧೮ ಸದಸ್ಯರಿಂದ ೨.೮೧ ಲಕ್ಷ ಮೂಲ ಬಂಡವಾಳದಿಂದ ಆರಂಭ ವಾದ ಸಂಘ ೧.೪೦ ಕೋಟಿ ವಹಿವಾಟು ನಡೆಸಿದೆ ರೂ.೧೧.೫೮ ಲಕ್ಷ ಕಟ್ಟಡ ನಿಧಿಯನ್ನು ಹೊಂದಿರುವ ಸಂಘ ಇದೀಗ ೪೨೪ ಸದಸ್ಯರನ್ನು ಹೊಂದಿದೆ ಪ್ರಸಕ್ತ ಸಾಲಿನಲ್ಲಿ ರೂ.೮೨.೮ ಸಾವಿರ ನಿವ್ವಳ ಲಾಭಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಸಹಿತ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಪ್ರಧಾನ ಸಲಹೆಗಾರ ಬಿ.ಸಿ ವೇಣುಗೋಪಾಲ್, ಉಪಾಧ್ಯಕ್ಷೆ ಕಲಾವತಿ, ನಿರ್ದೇಶಕರಾದ ಗೌರಮ್ಮ, ಮಂಜಮ್ಮ, ಅನಿಲಮ್ಮ, ಸುಮಿತ್ರಮ್ಮ, ಪರಸನ್‌ಬಾಯಿ, ಕಾರ್ಯದರ್ಶಿ ಬೀರಲಿಂಗ, ಪಿಗ್ಮಿ ಸಂಗ್ರಹಕಾರ ಸಂದೀಪ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.