ಸದಾ ಗರಿಗೆದರುತ್ತಲೇ ಇರುವ ಮಯೂರನ ನೆನಪುಗಳು…

473

ಹಾರೋಗೊಳಿಗೆ ಶಿವಮೊಗ್ಗ ಜಿ, ತೀರ್ಥಹಳ್ಳಿ ತಾಲೂಕಿನ ಪುಟ್ಟ ಗ್ರಾಮ. ಸುಮಾರು ೪೦ ಮನೆಗಳು ಹಾಗೂ ೩೦೦ರಷ್ಟಿರುವ ಜನಸಂಖ್ಯೆ. ಈ ಊರಿಗೆ ಕಳೆದೆರಡು ವರ್ಷಗಳ ಹಿಂದೆ ವಿಶೇಷ ಅತಿಥಿಯ ಆಗಮನವಾಗಿತ್ತು. ಆ ಅತಿಥಿಯೇ ನಮ್ಮ ರಾಷ್ಟ್ರಪಕ್ಷಿ ನವಿಲು.
ಪ್ರಾರಂಭದಲ್ಲಿ ಊರ ಅತಿಥಿಯಾಗಿದ್ದ ಈ ಪಕ್ಷಿ ದಿನಗಳೆದಂತೆ ಮನುಷ್ಯ ಸ್ನೇಹಿಯಾಗಿ ಪ್ರತಿ ಮನೆಯ ಅತಿಥಿಯಾಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಆಪ್ತಮಿತ್ರವಾಯಿತು.
ಬೀಸಣಿಕೆಯಾಕಾರದ ಹೊಳಪಿನ ಗರಿಗಳ ಪುಕ್ಕಹೊಂದಿರುವ ಬಾಲ, ಹೊಳೆಯುವ ನೀಲಿ ಬಣ್ಣದ ಎದೆ, ಕಣ್ಣ ಕೆಳಗೆ ಬಿಳಿ ಮಚ್ಚೆ, ಕಡು ನೀಲಿ ಬಣ್ಣದ ನಡುವೆ ಆಭರಣದಂತೆ ಹೊಳೆಯುವ ಹಳದಿ-ಕೆಂಪು ಕಣ್ಣು, ಉದ್ದವಾದ ತೆಳು ಕೊರಳು, ನೆತ್ತಿಯ ಮೇಲೆ ಕುಸುರಿ ಮಾಡಿದಂತಿರುವ ನೀಲಿ ಕಿರೀಟದ ಗುಚ್ಚ, ಬಿಂಕ-ಬಿನ್ನಾಣ, ರಾಜ ಗಾಂಭಿರ್ಯ ದಿಂದ ಭಾವೋತ್ಪಾದಕದ ಮೂಲಕ ಎಲ್ಲರ ಮನ ಸೆಳೆದಿತ್ತು.
ಮಲೆನಾಡಿಗರು ಅತಿಥಿ ಸಂತ್ಕಾರಕ್ಕೆ ಹೆಸರು ವಾಸಿ. ಅದರಲ್ಲೂ ವಿಶೇಷ ಅತಿಥಿಯಾಗಿ ಊರಿಗೆ ಆಗಮಿಸಿದ್ದ ನವಿಲನ್ನು ಸರಿಯಾಗಿ ಸತ್ಕರಿಸಿದ್ದರಿಂದ ಆ ಪಕ್ಷಿ ಕಾಡು ತೊರೆದು ಊರ ನೆಲೆಸಿತು. ಈ ನವಿಲು ಆಹಾರಕ್ಕಾಗಿ ಅಲೆದಾಡುವ ಅವಶ್ಯಕತೆಯೇ ಇರಲಿಲ್ಲ. ಯಾರದ್ದೇ ಮನೆಯ ಮುಂದೆ ಹಾರಿ ಹೋಗಿ ಕುಳಿತರೆ ಸಾಕು ಮನೆಯವರು ಅದಕ್ಕೆ ಆಹಾರ ನೀಡುತ್ತಿದ್ದರು.
ಅದರಲ್ಲೂ ನವಿಲು ಸಾಮಾಜಿಕ ಹೋರಾಟಗಾರರಾಗಿರುವ ನೆಂಪೆ ದೇವರಾಜ್ ಅವರ ಕುಟುಂಬದವರೊಂದಿಗೆ ಆಪ್ತತೆ ಬೆಳೆಸಿಕೊಂಡಿತ್ತು. ದೇವರಾಜ್ ಅವರ ಪತ್ನಿ, ಹೆಬ್ರಿಯ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಆಗಿರುವ ವೈ.ಎಂ. ಸುಧಾ ಅವರಿಗೆ ಬಹು ಆತ್ಮೀಯ ವಾಗಿತ್ತು. ಅವರ ಕುಟುಂಬದ ಸದಸ್ಯರಬ್ಬರಂತಾಗಿತ್ತು.
ಸುಧಾ ಅವರು ಮೊನ್ನೆ ಬೆಳಂಬೆಳಿಗ್ಗೆ ಬಾಗಿಲಿಗೆ ನೀರು ಹಾಕಲೆಂದು ಮನೆ ಮುಂಬಾಗಿಲು ತೆರೆದಾಗ ಆಘಾತಕಾರಿ ದೃಶ್ಯವೊಂದು ಕಂಡು ಬಂತು. ಇವರ ಕುಟುಂಬದ ಹಾಗೂ ಊರಿನವರ ಆಪ್ತಮಿತ್ರನಾಗಿದ್ದ ನವಿಲು ಅವರ ಮನೆ ಮುಂದಿನ ತುಳಸಿ ಗಿಡದ ಬುಡದಲ್ಲಿ ಸತ್ತು ಬಿದ್ದಿತ್ತು. ಅರೆ ನಿzಯಲ್ಲಿದ್ದ ದೇವರಾಜ್ ಅವರನ್ನು ಎಬ್ಬಿಸಿದ್ದು ಅವರ ಹೆಂಡತಿಯ ಅಳು. ಇದನ್ನು ಕೇಳಿ ಗಾಬರಿಯಿಂದ ದೇವರಾಜ್ ಎದ್ದು ಬಂದಾಗ ತುಳಸಿ ಕಟ್ಟೆಯ ಹತ್ತಿರ ಬಿದ್ದಿದ್ದ ನವಿಲಿನ ಶವ ಕಂಡು ಕನಲಿ ಹೋದರು.
ಪ್ರತಿ ದಿನ ನಿಗದಿತ ಸಮಯಕ್ಕೆ ಬಂದು ಹೋಗುತ್ತಿದ್ದ ನವಿಲಿಗೆ ದೇವರಾಜ್ ಅವರ ಮನೆಯಲ್ಲಿ ಪ್ರತಿ ದಿನ ನೀಡುತ್ತಿದ್ದ ಅಕ್ಕಿಯ ಮೇಲೆ ಬಹು ವ್ಯಾಮೋಹ. ಇವರ ತಾಯಿ ಚಂದ್ರಮ್ಮ, ಹೆಂಡತಿ ಸುಧಾ ಹಾಗೂ ದೇವರಾಜ್ ಅವರನ್ನು ಈ ನವಿಲು ಬಗೆಬಗೆಯಲ್ಲಿ ಸಮೆಹನಗೊಳಿತ್ತು.
ಬಹುತೇಕ ಪ್ರತಿದಿನ ದೇವರಾಜ್ ಅವರ ಮನೆ ಎದುರಿನ ಗೇಟಿನ ಮೇಲೆ ವಿರಾಜಮಾನವಾಗಿ ನಿಂತು ಸದ್ದು ಮಾಡಿ ಎಚ್ಚರಿಸುತ್ತಿತ್ತು. ಕೂಡಲೇ ಅಕ್ಕಿಯನ್ನು ಬಟ್ಟಲಿನಲ್ಲಿ ತಂದಿಟ್ಟಾಗ ಒಮ್ಮೆ ತನ್ನ ಗರಿಗಳನ್ನೆಲ್ಲ ಕೊಡವಿ ಸುತ್ತಲೊಮ್ಮೆ ಪರಾಂಬರಿಸಿ ನೋಡಿ ಗೇಟಿನಿಂದ ದೊಪ್ಪನೆ ಹಾರಿ ಬಂದು ಅಕ್ಕಿ ತಿನ್ನುತ್ತಿತ್ತು. ಅರ್ಧಂಬರ್ಧ ಅಕ್ಕಿ ತಿಂದು ಒಂದಿಷ್ಟನ್ನು ಚೆಲ್ಲಿ ಹಿಂದಿರುಗುತಿತ್ತು. ಈ ಕುಟುಂದವರಿಗೆ ನವಿಲು ಪೂರಾ ತಿಂದು ಹೋಗುತ್ತಿಲ್ಲವೆಂಬ ಬೇಸರ. ಹಿಂದಿರುಗಿ ಬರಲೆಂದು ಬಾ.. ಬಾ.. ಎಂದು ಕರೆದರೂ ಓಗೊಡದೆ ರಾಜ ಗಾಂಭೀರ್ಯದಿಂದ ಹೋಗುತ್ತಿತ್ತು.
ಕತ್ತಲಾಗುತ್ತಿದ್ದಂತೆಯೇ ಊರಿನ ಸೊಸೈಟಿಯ ಆವರಣದಲ್ಲಿರುವ ತೆಂಗಿನ ಮರವೇರಿ ರಾತ್ರಿ ಕಳೆಯುತ್ತಿದ್ದ ಈ ನವಿಲು ಬೆಳಗಾಗುತ್ತಲೇ ಮರದಿಂದ ಇಳಿದು ಅವರಿವರ ಮನೆಯಲ್ಲಿ ಟಿಫಿನ್ ಮುಗಿಸಿ ಮಕ್ಕಳು- ಮರಿಗಳನನ್ನು ರಂಜಿಸುತ್ತಾ ಅವರೊಂದಿಗೆ ಒಡನಾಡುತ್ತಾ ಕಾಲ ಕಳೆಯುತ್ತಿತ್ತು. ಹೊಟ್ಟೆ ಹಸಿವಾಗುತ್ತಲೇ ಮತ್ಯಾರz ಮನೆಗೆ ಧಾಂಗುಡಿ ಇಡುತ್ತಿತ್ತು. ಅದರೆ ಈ ನವಿಲು ನೆಂಪೆ ದೇವರಾಜ್ ಅವರ ಮನೆಯವರೊಂದಿಗೆ ಹೆಚ್ಚಿನ ಸಲುಗೆ ಹಾಗೂ ನಂಟು ಬೆಳೆಸಿಕೊಂಡಿತ್ತು.
ಕಳೆದ ವರ್ಷ ದೇವರಾಜ್ ಅವರ ಮನೆ ತಾರಸಿಯ ಮೇಲೆ ಈ ನವಿಲು ಸುಧಾ ಅವರ ತಾಳಕ್ಕೆ ತಕ್ಕಂತೆ ಮನೆಯವರ ಸಮ್ಮುಖದ ಗರಿಬಿಚ್ಚಿ ಕುಣಿದು ರಂಜಿಸಿತ್ತು. ಈ ವಿಡಿಯೋ ವೈರಲ್ ಆಗಿ ಸಾವಿರಾರು ಮಂದಿಯ ಮೆಚ್ಚುಗೆ ಗಳಿಸಿತ್ತು.
ಇಂತಹ ಸರ್ವಗುಣ ಸಂಪನ್ನ ಮನಮೋಹಕ ಪಕ್ಷಿಯು ಜುಲೈ ಮಾಸಾಂತ್ಯದಲ್ಲಿ ರಾತ್ರಿ ಎಂದಿನಂತೆ ಮರವೇರಿ ಕುಳಿತಿzಗ ಬಹುತೇಕ ಗುಮ್ಮ ಅಥವಾ ಮತ್ಯಾವುದೋ ನಿಶಾಚರಿ ಪ್ರಾಣಿ ಅಥವಾ ಪಕ್ಷಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಮರದಿಂದ ಹಾರಿದೆ. ರಾತ್ರಿ ವೇಳೆ ನವಿಲಿಗೆ ಕಣ್ಣು ಕಾಣಿಸುವುದಿಲ್ಲ. ಹೀಗಾಗಿ ಮರದ ಬಳಿ ಇದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ಸಿಲುಕಿ ದುರಂತ ಸಾವು ಕಂಡಿದೆ.
ಊರ ತುಂಬ ಮಕ್ಕಳು ದೊಡ್ಡವರೆನ್ನದೆ ಎಲ್ಲರನ್ನೂ ಅಕರ್ಷಿಸುತ್ತಾ ಹಾರಾಡಿಕೊಂಡಿದ್ದ, ಮೊನ್ನೆ ಶುಕ್ರವಾರ (೩೧-೦೭-೨೦೨೦ರಂದು) ರಾತ್ರಿ ಮೃತಪಟ್ಟ ನವಿಲಿನ ಧಾದಾರುಣ ಸಾವನ್ನು ನೋಡಿ ದುಃಖಿಸದವರೇ ಇಲ್ಲ. ಊರಿನವರು ಮೃತ ನವಿಲಿಗೆ ಶನಿವಾರ ಬೆಳಿಗ್ಗೆ (೦೧-೦೮-೨೦೨೦ ರಂದು) ಅರಿಸಿಣ-ಕುಂಕುಮ ಹಚ್ಚಿ, ಪುಷ್ಪ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ನವಿಲನ್ನು ಬಿಳಿಯ ವಸ್ತ್ರದಲ್ಲಿ ಸುತ್ತಿ ಅರಣ್ಯ ಇಲಾಖೆಯವರ ವಶಕ್ಕೆ ಒಪ್ಪಿಸಲಾಯಿತು. ಅರಣ್ಯಾಧಿಕಾರಿ ಎಲ್ಲಪ್ಪ ಮತ್ತು ತಂಡದವರು ಇಲಾಖೆಯ ವಾಹನಕ್ಕೆ ಮೃತ ಪಕ್ಷಿಯನ್ನು ಎತ್ತಿಕೊಂಡು ಹೋಗುತ್ತಿzಗ ದೇವರಾಜ್ ಅವರ ತಾಯಿ ಸೇರಿದಂತೆ ಕೆಲವರು ಮಿಡಿದ ಕಂಬನಿ ಅಲ್ಲಿದ್ದವರ ಮನ ಕಲುಕಿತು. ಅಲ್ಲದೆ ನವಿಲಿನ ಮೇಲೆ ಇವರಿಟ್ಟಿದ್ದ ಪ್ರೀತಿಗೆ ಕಣ್ಣೀರು ಸಾಕ್ಷಿಯಾಗಿತ್ತು.
ಸರ್ಕಾರ ಕೋವಿಡ್-೧೯ರಿಂದ ಮೃತ ಪಟ್ಟವರ ದೇಹಗಳನ್ನೇ ನಾಯಿ- ನರಿಯಂತೆ ಹೇಗೆ ಬೇಕೋ ಹಾಗೆ ಶವಕ್ಕೆ ಕನಿಷ್ಟ ಗೌರವವನ್ನೂ ನೀಡದೆ ಅಂತ್ಯ ಸಂಸ್ಕಾರ ಮಾಡಿದ ಘಟನೆಗಳನ್ನು ನೋಡಿದ್ದೇವೆ.
ಇಂತಹ ಸಂದರ್ಭದಲ್ಲಿ ಕಾಡಿನ ಸತ್ತು ಮಣ್ಣಾಗಲಿದ್ದ ರಾಷ್ಟ್ರಪಕ್ಷಿ ನವಿಲಿಗೆ ಹಾರೋಗೊಳಿಗೆಯ ಹಳ್ಳಿಗರು ಗೌರವಯುತ ಅಂತಿಮ ಸಂಸ್ಕಾರ ನೀಡಿದ್ದು ಮೆಚ್ಚಗೆಗೆ ಪಾತ್ರವಾಗಿದೆ.
ಪೇಟೆಯ ತಿರುಗಾಟ ದಿಂದಲೋ, ತೋಟದಿಂದಲೋ ಸುಸ್ತಾಗಿ ಬಂದು ದಿಕ್ಕುಗಳನ್ನು ಅರಸುತ್ತಾ ಮನೆ ಎದುರು ನಿಂತಾಗ ನವಿಲು ತನ್ನ ಇರುವಿಕೆಯನ್ನು ಒಮೆಮ್ಮೆ ಸಾಬೀತುಗೊಳಿಸುತ್ತಿತ್ತು. ಆ ಕಡು ನೀಲಿ, ಕಗ್ಗಸಿರು, ಕಾಡಿಗೆಯ ಕಪ್ಪಿನ ಗರಿಗಳನ್ನು ದೇವರು ಕಲಾತ್ಮಕವಾಗಿ ಜೋಡಿಸಿಟ್ಟಿದ್ದನ್ನು ನೋಡುತ್ತಾ ಮೈಮರೆತ ದಿನಗಳಿಗೆ ಲೆಕ್ಕವಿಲ್ಲ.
ಆಧುನಿಕತೆಯ ನಟ್ಟ ನಡುವಿಗೆ ಲಗ್ಗೆಯಿಟ್ಟ ನವಿಲನ್ನು ನೋಡುತ್ತಾ ಹೊಸ ಲೋಕವೊಂದರಲ್ಲಿ ಧ್ಯಾನಸ್ಥನಾಗಿ ನೆಮ್ಮದಿ ಪಡೆಯುತ್ತಿz. ಇನ್ನು ಮುಂದೆ ಇದರ ನೆನಪಿನ ಪೋಟೋಗಳು ಮಾತ್ರ ನಮ್ಮ ಬಳಿ ಇದೆ. ನನ್ನಾಕೆ, ನನ್ನಮ್ಮ ನವಿಲು ಮನೆಯ ಹತ್ತಿರ ಬಂದಾಕ್ಷಣ ಲಗುಬಗೆಯಿಂದ ಅಡುಗೆ ಮನೆಗೆ ಓಡೋಡಿ ಮೇವು ತರುತ್ತಿದ್ದದ್ದು ಕೂಡಾ ಇನ್ನು ನೆನಪು ಮಾತ್ರ ಎಂದು ನೆಂಪೆ ದೇವರಾಜ್ ಅವರು ತಮ್ಮ ಫೇಸ್ ಬುಕ್ ಅಕೌಂಟ್‌ನಲ್ಲಿ ಬರೆದುಕೊಂಡಿzರೆ. (ನೆಂಪೆ ದೇವರಾಜ್ ಅವರ ಪೋಟೋ ಲಗತ್ತಿಸಿದೆ.)
ಇದು ಅವರೊಬ್ಬರ ಅನುಭವ ಹಾಗೂ ಅಭಿಪ್ರಾಯವಲ್ಲ, ಹಾರೋಗೊಳಿಗೆಯ ಆಪ್ತಮಿತ್ರನಾಗಿದ್ದ ನವಿಲಿನೊಂದಿಗೆ ಒಡನಾಟ ಹೊಂದಿದ್ದ ಊರಿನವರ ಮನದಲ್ಲಿ ನವಿಲಿನ ನೆನಪು ಸದಾ ಗರಿಬಿಚ್ಚುತ್ತಲೇ ಇರುತ್ತದೆ.