ಸಂಜೀವಿನಿ ಆಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ

508

ಭದ್ರಾವತಿ: ಎಂ.ಪಿ.ಎಂ. ನ್ಯೂ ಲೇಔಟ್‌ನಲ್ಲಿರುವ ಸಂಜೀವಿನಿ ಹಿರಿಯ ನಾಗರೀಕರ ಆಶ್ರಮಕ್ಕೆ ಅಗತ್ಯವಿದ್ದ ಆಹಾರ ಸಾಮಾಗ್ರಿಗಳನ್ನು ಬಾರಂದೂರು ನಿವಾಸಿ ಸಾಮಾಜಿಕ ಕಾರ್ಯಕರ್ತ, ಕಡೂರಿನ ಕೊಟಾಕ್ ಮಹೇಂದ್ರ ಬ್ಯಾಂಕ್ ನೌಕರ ಡಾ. ಸಿ. ರಾಮಾಚಾರಿ ಒದಗಿಸಿಕೊಟ್ಟಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಬಿಎಸ್‌ಎನ್‌ಎಲ್ ಉದ್ಯೋಗಿ ಸವಿತಾ, ಕಾಂತ ನಾಗರಾಜು ಸೇರಿದಂತೆ ಕೆಲವು ಮಹಿಳೆಯರು ತಮ್ಮ ಸ್ವಂತ ಹಣದಲ್ಲೇ ಈ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರಿಗೂ ಹಣದ ಮುಗ್ಗಟ್ಟು ಉಂಟಾಗಿದ್ದು, ಆಶ್ರಮದಲ್ಲಿದ್ದ ದಿನಸಿಯೆಲ್ಲಾ ಮುಗಿದುಹೋಗಿತ್ತು. ತಮ್ಮನ್ನೇ ನಂಬಿಕೊಂಡಿರುವ ಹಿರಿಯ ನಾಗರೀಕರಿಗೆ ಊಟದ ವ್ಯವಸ್ಥೆ ಹೇಗೆ ಮಾಡಬೇಕೆಂಬ ಯೋಚನೆಯಲ್ಲಿ ಸವಿತಾರವರಿಗೆ ನೆನಪಾಗಿದ್ದು, ಡಾ. ಸಿ. ರಾಮಾಚಾರಿ. ನಿನ್ನೆ ಸಂಜೆ ಆಶ್ರಮದ ಪರಿಸ್ಥಿತಿಯನ್ನು ರಾಮಾಚಾರಿಯವರಿಗೆ ಸವಿತಾರವರು ವಿವರಿಸಿದ್ದಾರೆ.
ತಕ್ಷಣ ಇದಕ್ಕೆ ಸ್ಪಂದಿಸಿದ ರಾಮಾಚಾರಿಯವರು, ಭದ್ರಾವತಿ ಸಿಎನ್ ರಸ್ತೆಯಲ್ಲಿರುವ ಗುಲಾಬ್ ಜ್ಯುವೆಲ್ಲರಿ ವರ್ಕ್ಸ್‌ನ ಮಾಲೀಕರ ಸಹಕಾರದಿಂದ ಆಶ್ರಮಕ್ಕೆ ಒಂದೆರಡು ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ, ಗೋಧಿ ಹಿಟ್ಟು, ತರಕಾರಿ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಜೀವಿನಿ ಆಶ್ರಮದ ಅಧ್ಯಕ್ಷೆ ಸವಿತಾ, ಟ್ರಸ್ಟಿ ಕಾಂತ ನಾಗರಾಜ್, ಆಶ್ರಮದ ವಾಸಿಗಳು, ಸಿಬ್ಬಂದಿ, ಈಶ್ವರಮ್ಮ ಬೆಟ್ಟಾಚಾರ್, ರಾಮಾಚಾರಿಯವರ ಪುತ್ರರಾದ ಆರ್. ಮೋಕ್ಷಿತ್, ವಿ. ಹೇಮಂತ್ ಮೆದಲಾದವರಿದ್ದರು.