ಶ್ರದ್ಧಾ ಭಕ್ತಿಯಿಂದ ಜರುಗಿದ ಕುಂದೂರು ಶ್ರೀ ಆಂಜನೇಯಸ್ವಾಮಿ ಮುಳ್ಳೋತ್ಸವ

459

ಹೊನ್ನಾಳಿ: ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಮುಳ್ಳೋತ್ಸವ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬುಧವಾರ ಭಕ್ತಾದಿಗಳ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು.
ಅಂದು ಸಂಜೆ ೪.೩೦ರಿಂದ ೪.೫೦ರವರೆಗೆ ಕೇವಲ ಇಪ್ಪತ್ತು ನಿಮಿಷಗಳ ಕಾಲ ಶ್ರೀ ಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ನಡೆಯಿತು. ದೇವಾಲಯದ ಪಕ್ಕದ ಅಗಸೆ ಬಾಗಿಲಿಗೆ ಹೊಂದಿಕೊಂಡಂತೆ ಎತ್ತರದ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಲಾಗಿತ್ತು. ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಆರಂಭದಲ್ಲಿ ದಾಸಪ್ಪನವರು ಮುಳ್ಳುಗದ್ದುಗೆ ಏರುವ ಮೂಲಕ ವಿದ್ಯುಕ್ತವಾಗಿ ಈ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಧಾರ್ಮಿಕ ವಿಧಿ-ವಿಧಾನ ದಿಂದ ದೇವರು ಪಲ್ಲಕ್ಕಿ ಏರಿದ ನಂತರ ಕಾರ್ಣಿಕ ನುಡಿಯುವ ದಾಸಪ್ಪನವರ ದೇವವಾಣಿ ಮೊಳಗಿತು.
ಈ ಬಾರಿಯ ಕಾರ್ಣಿಕ ನುಡಿ ಇಂತಿದೆ:
ಚಿನ್ನದ ತೊಟ್ಟಿಲು ತೂಗೀತು,
ಮುತ್ತಿನ ರಾಶಿ ಸುರಿದೀತು,
ಸಂಪು, ಪರಾಕ್
ಬಡವ-ಬಲ್ಲಿದ, ಜತಿ-ಮತ ಭೇದವಿಲ್ಲದೆ, ಹರಕೆ ಹೊತ್ತ ಸಮಸ್ತ ಭಕ್ತಾದಿಗಳು ಸಾಮೂಹಿಕವಾಗಿ ಗದ್ದುಗೆ ಏರಿ ಮುಳ್ಳು ತುಳಿಯುವ ದೃಶ್ಯ ಭಯಾನಕವಾಗಿದ್ದರೂ ಭಕ್ತಿಯ ಪರಾಕಾಷ್ಟೆಯಿಂದ ಇವೆಲ್ಲವೂ ಗೌಣವಾಗುತ್ತವೆ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತಿತರ ಜಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಮುಳ್ಳೋತ್ಸವ ದಲ್ಲಿ ಪಾಲ್ಗೊಂಡು ತಮ್ಮ ಹರಕೆ, ಕಾಣಿಕೆ ಸಮರ್ಪಿಸಿ ಪುನೀತರಾದರು.
ಮುಳ್ಳೋತ್ಸವದ ಮೊದಲು ಜವುಳ, ಬಾಯಿ ಬೀಗ, ಮುದ್ರಾಧಾರಣೆ ಮುಂತಾದ ಭಕ್ತರ ಹರಕೆ-ಸೇವೆಗಳು ನಡೆದವು.
ಕುಂದೂರು ಶ್ರೀ ಆಂಜನೇಯ ಸ್ವಾಮಿ ಮುಳ್ಳೋತ್ಸವ ಪ್ರತಿ ವರ್ಷ ರಥೋತ್ಸವದ ಮರುದಿನ ಸಾಮಾನ್ಯವಾಗಿ ಮಧ್ಯಾಹ್ನ ೩ರಿಂದ ಸಂಜೆ ೬.೩೦ರವರೆಗೆ ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ತಡೆಗಟ್ಟುವಿಕೆ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳಿಂದಾಗಿ ಕುಂದೂರು ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಜಿಧಿಕಾರಿ ಮಹಾಂತೇಶ ಬೀಳಗಿ ಮತ್ತು ತಹಸೀಲ್ದಾರ್ ಬಸನಗೌಡ ಕೋಟೂರ ನೀಡಿದ ನಿರ್ದೇಶನದ ಮೇರೆಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀಕಾಂತ್ ಪತ್ರಿಕಾ ಪ್ರಕಟಣೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಈ ಬಾರಿ ಕುಂದೂರು ಶ್ರೀ ಆಂಜನೇಯ ಸ್ವಾಮಿ ಮುಳ್ಳೋತ್ಸವಕ್ಕೆ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮುಳ್ಳೋತ್ಸವ ಬುಧವಾರ ಸಂಜೆ ೪.೩೦ರಿಂದ ೪.೫೦ರವರೆಗೆ ಕೇವಲ ಇಪ್ಪತ್ತು ನಿಮಿಷಗಳ ಕಾಲ ನೆರವೇರಿತು.