ಶಿವಮೊಗ್ಗ: ರಿಂಗ್‌ರೋಡ್-ಸೇತುವೆ ನಿರ್ಮಾಣಕ್ಕೆ ಚಾಲನೆ…

76

ಶಿವಮೊಗ್ಗ: ರಸ್ತೆ, ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿ, ನೀರಾವರಿ, ಕೈಗಾರಿಕೆಗಳಿಗೆ ಅವಕಾಶ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ಶಿವಮೊಗ್ಗ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೩೪ಕಿ.ಮೀ. ಉದ್ದದ ವರ್ತುಲರಸ್ತೆ ಹಾಗೂ ತುಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ವಹಿಸಲಾಗುತ್ತಿರುವ ತುಮಕೂರು-ಶಿವಮೊಗ್ಗ ರಸ್ತೆ ನಿರ್ಮಾಣದ ಭಾಗವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಪ್ರಸ್ತುತ ಎಂ.ಆರ್.ಎಸ್ ಸರ್ಕಲ್‌ನಿಂದ ಶ್ರೀರಾಂಪುರದವರೆಗಿನ ೧೫ಕಿ.ಮೀ. ಹಾಗೂ ಹೊಳೆಹೊನ್ನೂರು ರಸ್ತೆ (ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಹಿಂಭಾಗ)ಯಿಂದ ಎಂ.ಆರ್.ಎಸ್. ವರೆಗಿನ ೪ಕಿ.ಮೀ.ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ದೊರೆತಿದೆ. ಉಳಿದಂತೆ ಶ್ರೀರಾಮಪುರದಿಂದ ಹೊಳೆಹೊನ್ನೂರುವರೆಗಿನ ೧೫ಕಿ.ಮೀ. ವರ್ತುಲ ರಸ್ತೆಯ ಕಾಮಗಾರಿಯ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದರು.
ರಾಜ್ಯ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ತುಮಕೂರು ೨೧೬ಕಿ.ಮೀ.ಗಳ ಚತುಷ್ಪಥ ರಸ್ತೆ ಕಾಮಗಾರಿಯು ೪೪೨೫ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಭದ್ರಾವತಿ-ಶಿವಮೊಗ್ಗ ನಡುವಿನ ನಾಲ್ಕನೇ ಹಂತದ ಕಾಮಗಾರಿಯು ಆರಂಭಗೊಳಿಸುವಲ್ಲಿ ಇರಬಹುದಾದ ತಾಂತ್ರಿಕ ಸಮಸ್ಯೆ, ಭೂಸ್ವಾದೀನ ಪ್ರಕ್ರಿಯೆ, ಅರಣ್ಯ ಇಲಾಖೆ, ರಸ್ತೆ ಬದಿಯ ಮರಕಡಿತಲೆ ಮುಂತಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಆರಂಭಿಸಿ, ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದ ಅವರು ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಶ್ರಮ ಮಹತ್ವದ್ದಾಗಿದೆ ಎಂದರು.
ಏತ ನೀರಾವರಿ ಯೋಜನೆಗಳಿಗೆ
೧೫೫೦ಕೋಟಿ ಮಂಜೂರು :
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಆಯನೂರು-ಕುಂಸಿ-ತಮ್ಮಡಿಹಳ್ಳಿ ಸೇರಿದಂತೆ ನೂರಾರು ಗ್ರಾಮಗಳಿಗೆ ನೀರು ಒದಗಿಸುವ ಹೊಸಳ್ಳಿ ಏತ ನೀರಾವರಿ ಯೋಜನೆಗೆ ತುಂಗಾನದಿ ತೀರದಲ್ಲಿ ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿ ಮಾತನಾಡಿದರು.
ಇದರೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ಜೊತೆಜೊತೆಗೆ ಸಾಗಿದ್ದು, ಮುಂದಿನ ಬೇಸಿಗೆ ಅವಧಿಯೊಳಗಾಗಿ ಕೈಗೊಂಡ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಶಿಕಾರಿಪುರ ತಾಲೂಕಿನ ೩ಹೋಬಳಿಗಳ ೨೨೫ಕೆರೆಗಳಿಗೆ ನೀರು ಒದಗಿಸುವ ೮೫೦ಕೋಟಿ ರೂ.ಗಳ ವೆಚ್ಚದ ಪುರದಕೆರೆ ಏತ ನೀರಾವರಿ, ಸೊರಬ ತಾಲೂಕಿನ ಮೂಗೂರು ಮತ್ತು ಮೂಡಿ ಏತ ನೀರಾವರಿ ಯೋಜನೆಗಳು ಸೇರಿದಂತೆ ಒಟ್ಟು ೧೫೫೦ಕೋಟಿ ರೂ.ಗಳನ್ನು ಸರ್ಕಾರ ಈಗಾಗಲೇ ಅನುದಾನ ಮಂಜೂರು ಮಾಡಿದ್ದು, ಈ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಕೊರೋನ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಅಭಿವೃದ್ಧಿ ಕಾiಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಪ್ರಸ್ತುತ ಶಿವಮೆಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ೪೨೩ಕೋ. ರೂ.ಗಳ ವೆಚ್ಚದ ಸಿಗಂದೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿರ್ಮಿಸಲಾಗುತ್ತಿರುವ ಈ ಸೇತುವೆಯು ದೇಶದ ಕೆಲವೇ ಮಾದರಿ ಸೇತುವೆಗಳಲ್ಲೊಂದಾಗಲಿದೆ ಎಂದರು.
ಶಿವಮೊಗ್ಗ-ಚಿತ್ರದುರ್ಗದ ಬಾಕಿ ರಸ್ತೆ ಕಾಮಗಾರಿಗೆ ೫೨೮ ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗ ವಿದ್ಯಾನಗರದ ಬಳಿ ರಾ.ಹೆ.೧೩ರಲ್ಲಿ ಬರುವ ಎಲ್.ಸಿ.೪೬ಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ ೪೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಶಿವಮೆಗ್ಗದ ಮಹಾನಗರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯು ದೇಶದಲ್ಲಿ ೩೫ನೇ ಹಾಗೂ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಲಾಗುತ್ತಿದೆ. ಈ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳು ಸೀಮಿತ ಅವಧಿಯೊಳಗಾಗಿ ಪೂರ್ಣಗೊಳ್ಳಲಿವೆ ಎಂದರು.
ಜಿಲ್ಲೆಯಲ್ಲಿ ಟೆಲಿಪೋನ್ ತರಂಗಾಂತರಗಳನ್ನು ವಿಸ್ತರಿಸುವ ಸಂಬಂಧ ಖಾಸಗಿ ವಲಯದ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಜಿಯೋ ಸಂಸ್ಥೆಯು ನಿರ್ಮಿಸಬೇಕಾಗಿದ್ದ ೬೩ ಟವರ್‌ಗಳ ಪೈಕಿ ೩೭ಟವರ್‌ಗಳನ್ನು, ಏರ್‌ಟೆಲ್ ಸಂಸ್ಥೆಯು ೬೧ರ ಪೈಕಿ ೨೫ ಸ್ಥಾವರಗಳನ್ನು ಈಗಾಗಲೆ ನಿರ್ಮಿಸಿದ್ದು, ಉಳಿದವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದವರು ನುಡಿದರು.
ಅಲ್ಲದೇ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ೧೦.೦೦ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಜೋಗ ಅಭಿವೃದ್ಧಿಗೆ ೧೦ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಜಿಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಪೀರ್‌ಪಾಶ, ಬಿಜೆಪಿ ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ದತ್ತಾತ್ರಿ, ಬಳ್ಳೆಕೆರೆ ಸಂತೋಷ್, ದಿವಾಕರ ಶೆಟ್ಟಿ, ಮಾಲತೇಶ್, ಕಾಮತ್ ಮುಂತಾದವರು ಉಪಸ್ಥಿತರಿದ್ದರು.