ಶಿವಮೊಗ್ಗ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಸಚಿವ ಈಶ್ವರಪ್ಪ

565

ಶಿವಮೊಗ್ಗ : ಕರೋನಾ ವೈರಸ್ ಜಿಲ್ಲೆಗೆ ಕಾಲಿಡದಂತೆ ತಡೆಯಲು ಜಿಲ್ಲಾಡಳಿತ ಈಗಾಗಲೇ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮನವಿ ಮಾಡಿದರು.

ಅವರು ಇಂದು ಡಿಸಿ ಕಚೇರಿ ನೂತನ ಸಭಾಂಗಣದಲ್ಲಿ ಕರೋನಾ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸಮಾಲೋಚಿಸಲು ಕರೆದಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಲಭ್ಯತೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ತರಕಾರಿ, ದಿನಸಿ ಇತ್ಯಾದಿ ಸಾಗಾಟಕ್ಕೆ ಸುಗಮ ವ್ಯವಸ್ಥೆ ಮಾಡುವ ಮೂಲಕ ಅಗತ್ಯ ಸೇವೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇಡೀ ನಗರಕ್ಕೆ ಕ್ರಿಮಿನಾಶಕ ಸಿಂಪಡಿಕೆಯನ್ನು ನಿಗದಿತವಾಗಿ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಖಾಸಗಿ ವೈದ್ಯರು ಎಲ್ಲಾ ಸಹಕಾರವನ್ನು ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು ಹಾಗೂ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಯಾವುದೇ ಗ್ರಾಮಸ್ಥರು, ತಮ್ಮ ಗ್ರಾಮಗಳಿಗೆ ಬೇರೆ ಜನರು ಪ್ರವೇಶಿಸದಂತೆ ರಸ್ತೆ ತಡೆ ನಡೆಸಲು ಅವಕಾಶವಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ಅಧಿಕಾರಿಗಳಿಗೆ ಸೂಚನೆ: ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ಸಾಗಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಬಾರದು. ಹಳ್ಳಿಗಳಲ್ಲಿ ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಪ್ರತಿ ತಾಲೂಕಿನಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ನೆರೆಯ ಜಿಲ್ಲೆಯಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕೋಳಿ ಹಾಗೂ ಮೊಟ್ಟೆ ಮಾರಾಟ ನಿರ್ಬಂಧಿಸಿರುವುದರ ಬಗ್ಗೆ ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಬೇಕು. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಸಂಸದ ಬಿ.ಆರ್.ರಾಘವೇಂದ್ರ ಅವರು ಮಾತನಾಡಿ, ಶಿವಮೊಗ್ಗ ನಗರದಲ್ಲಿ ತಾಂತ್ರಿಕ ಕಾರಣದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಆದಷ್ಟು ಬೇಗನೆ ಅದನ್ನು ಸರಿಪಡಿಸುವಂತೆ ಕೆಪಿಟಿಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ಸೂಚನೆ ನೀಡಲಾಗಿದೆ  ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.  ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಆರ್. ಪ್ರಸನ್ನಕುಮಾರ್, ಎಸ್.ರುದ್ರೇಗೌಡ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಪಂ ಸಿಇಓ ಎಂ.ಎಲ್.ವೈಶಾಲಿ ಮತ್ತಿತರ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ತಿತರಿದ್ದರು.

ಶಾಂತರಾಜ್, ಜಿಪಂ ಸಿಇಓ ವೈಶಾಲಿ ಮತ್ತಿತರರಿದ್ದರು.