ಶಿಕಾರಿಪುರ: ವಿಹಿಂಪದಿಂದ ಸಂಭ್ರಮಾಚರಣೆ

464

ಶಿಕಾರಿಪುರ: ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಎಲ್ಲ ೩೨ ಆರೋಪಿಗಳನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ನೀಡಿದ ತೀರ್ಪನ್ನು ಸ್ವಾಗತಿಸಿ ಶಿಕಾರಿಪುರದ ವಿಶ್ವ ಹಿಂದೂ ಪರಿಷತ್‌ನಿಂದ ಕ್ಷೇತ್ರದ ಆರಾಧ್ಯದೈವ ಶ್ರೀ ಹುಚ್ಚುರಾಯಸ್ವಾಮಿ ದೇವಾಲಯದ ಬಳಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಿಹಿಂಪ ಉಪಾಧ್ಯಕ್ಷ ಪ್ರಕಾಶ್ ಜಿನ್ನು ಮಾತನಾಡಿ, ರಾಮಜನ್ಮಭೂಮಿ ಸಮಸ್ತ ಹಿಂದೂಗಳ ಸಹಿತ ಎಲ್ಲ ವರ್ಗದ ಜನತೆಗೆ ಶ್ರದ್ದಾಕೇಂದ್ರವಾಗಿದ್ದು ಇಂತಹ ಸ್ಥಳದಲ್ಲಿ ಮಸೀದಿ ನಿರ್ಮಾಣ ದಿಂದ ಕೋಮು ಸೌಹಾರ್ಧಕ್ಕೆ ಧಕ್ಕೆಯಾಗಿತ್ತು. ಕರಸೇವಕರು ವಿವಾದಿತ ಮಸೀದಿ ತೆರವುಗೊಳಿಸಿ ಪ್ರಕರಣಕ್ಕೆ ತಿಲಾಂಜಲಿ ಹಾಡಿದ್ದು ಘಟನೆಗೆ ಸಂಬಂದಿಸಿದಂತೆ ನ್ಯಾಯಾಲಯದಲ್ಲಿ ಸುದೀರ್ಘ ೨೮ ವರ್ಷ ಕಾಲ ೩೨ ಆರೋಪಿಗಳ ವಿರುದ್ದ ದೂರು ದಾಖಲಾಗಿ ಇದೀಗ ನ್ಯಾಯಾಲಯದ ತೀರ್ಪಿನ ಮೂಲಕ ಎಲ್ಲರನ್ನು ನಿರ್ದೋಷಿಯಾಗಿಸಿರುವುದು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.
ಮನುಷ್ಯ ಧರ್ಮ ರಕ್ಷಿಸಿದಲ್ಲಿ ಧರ್ಮ ಮನುಷ್ಯನನ್ನು ರಕ್ಷಿಸಲಿದೆ ಎಂಬ ಪ್ರತೀತಿಯಂತೆ ಕರಸೇವಕರು ಧರ್ಮ ರಕ್ಷಿಸಿದ ಹಿನ್ನಲೆಯಲ್ಲಿ ಕರಸೇವಕರನ್ನು ಧರ್ಮ ರಕ್ಷಿಸಿದ್ದು ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ ಎಂದು ತಿಳಿಸಿದ ಅವರು, ನ್ಯಾಯಾಲಯದ ತೀರ್ಪು ಸಮಸ್ತ ದೇಶಭಕ್ತ ಎಲ್ಲ ಭಾರತೀಯರಿಗೆ ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮರಾಠ ಸಮಾಜದ ಪ್ರ.ಕಾ. ಗಿರೀಶರಾವ್ ಘೋರ್ಪಡೆ, ವಿಹಿಂಪ ಮುಖಂಡ ಪ್ರಕಾಶ್ ಹೋತನಕಟ್ಟೆ,ವಸಂತ ಮಿರಜಕರ್, ನಟರಾಜ್, ಮಹೇಶ್ ಯಾಧವ್, ನವೀನ ಮತ್ತಿತರರು ಹಾಜರಿದ್ದರು.