ವಿಶೇಷ ಚೇತನರ ನೋಡಲ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ

443

ಶಿವಮೆಗ್ಗ: ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು ವಿಶೇಷ ಚೇತನರ ಯೋಜನೆಗಳ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ ಅಧಿಸೂಚನೆಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ವಿಕಲಚೇತನರ ಹಾಗೂ ವಿವಿಧೊದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಘಟಕದಿಂದ ಇಂದು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಧಿಸೂಚನೆ ಹೊರಡಿ ಸಿದ್ದು ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಭಾರತ ಸರ್ಕಾರ ಕೇಂದ್ರ ವಲಯ ವಿಕಲಚೇತನರಿಗೆ ಪುನರ್ವಸತಿ ಸೇವೆ ಒದಗಿಸುವ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಎಂಬ ಹೆಸರಲ್ಲಿ ಜರಿ ಗೊಳಿಸಿದೆ. ವಿಕಲಚೇತನರ ಸಮಸ್ಯೆ ಮತ್ತು ಅಗತ್ಯತೆಗಳನ್ನು ವಿಕಲಚೇತನರೇ ಅರಿತು ಕ್ರಮ ಕೈಗೊಳ್ಳುವುದರಿಂದ ವಿವಿಧ ಇಲಾಖೆಯ ಸೌಲಭ್ಯಗಳು ಸಕಾಲಕ್ಕೆ ಅರ್ಹರಿಗೆ ತಲುಪುತ್ತವೆ ಎನ್ನುವ ಉದ್ಧೇಶದಿಂದ ಜಾರಿಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ೬೦೨೨ ಗ್ರಾಪಂಗಳ ಪೈಕಿ ೪೯೦೬ ಅರ್ಹ ಎಸ್‌ಎಸ್‌ಎಲ್‌ಸಿ ಪಾಸಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರನ್ನಾಗಿ, ೧೬೯ ತಾಪಂಗಳಿಗೆ ಪದವೀಧರ ವಿಕಲಚೇತನರನ್ನು ವಿವಿದೊದ್ದೇಶ ಪುನರ್ವಸತಿ ಕಾರ್ಯ ಕರ್ತರನ್ನಾಗಿ ನೇಮಿಸಲಾಗಿದೆ. ೭೫ ನಗರ ಪಟ್ಟಣ ಪುನರ್ವಸತಿ ಕಾರ್ಯ ಕರ್ತರನ್ನು ನೇಮಿಸಿದ್ದು, ೫,೧೫೦ ಮಂದಿ ೧೩ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇವರಿಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಈಗ ಎಸಿಡಿಪಿಓ ಅವರನ್ನು ನೊಡಲ್ ಅಧಿಕಾರಿಯಾಗಿ ನೇಮಕ ಮಾಡಿರು ವುದು ಖಂಡನೀಯ. ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರಿಗೆ ಅನುಕೂಲ ಕಲ್ಪಿಸಬೇಕು. ವಿಕಲಚೇತನರ ಯೋಜನೆಗಳ ತಾಲ್ಲೂಕು ನೋಡಲ್ ಅಧಿಕಾರಿಗಳನ್ನಾಗಿ ಎಸಿಡಿಪಿಓ ಅವರನ್ನು ನೇಮಿಸಿರುವ ಆದೇಶ ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ವಿವಿದ್ದೊದ್ಧೇಶ ನಗರ ಪುನರ್ವಸತಿ ಕಾರ್ಯಕರ್ತರ ಅಧಿನಿಯಮ ಜರಿಗೊಳಿಸಿ ಖಾಯಂ ಗೊಳಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಆರ್. ದಿವಾಕರ್, ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ, ಪ್ರಕಾಶ್, ಮಹಾಂತೇಶ್, ಮಲ್ಲಿಕಾರ್ಜುನ, ಹುಚ್ಚರಾಯಪ್ಪ, ಶ್ಯಾಮ್, ರವಿಕುಮಾರ್, ಲತಾ, ಶಾರದಮ್ಮ, ರೇಖಾ, ಸವಿತ ಇನ್ನಿತರರು ಭಾಗವಹಿಸಿದ್ದರು.