ವರ್ತಕರು ಹೊಸ ಕಾಯ್ದೆಗೆ ಅನಿವಾರ್‍ಯವಾಗಿ ಹೊಂದಿಕೊಳ್ಳಬೇಕಿದೆ

411

ಶಿವಮೊಗ್ಗ : ಆದಾಯ ತೆರಿಗೆ ಕಾಯ್ದೆ ಯಲ್ಲಿ ಇತ್ತೀಚಿನ ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಹಿಂದಿನ ಆರ್ಥಿಕ ವರ್ಷದಲ್ಲಿ ೧೦ ಕೋಟಿಗೂ ಮಿಕ್ಕಿ ವಹಿವಾಟು ನಡೆಸಿದವರಿಗೆ ಹೊಸದಾಗಿ ೨೦೬ ಸಿ. (೧ಹೆಚ್) ಕಲಂ ಕಾಯ್ದೆ ಅನ್ವಯವಾಗುತ್ತಿದೆ. ಈ ಕಾಯ್ದೆ ಅ.೧ರಿಂದ ಜರಿಗೊಳ್ಳಲಿದೆ. ವರ್ತಕರು ವ್ಯಾಪಾರಿಗಳು ಈ ಕಾನೂನಿಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂದು ನಗರದ ಹಿರಿಯ ಚಾರ್ಟೆಡ್ ಅಕೌಂಟೆಂಟ್ ಸಿ ಎ ಲಕ್ಷ್ಮಣರಾವ್ ಹಾಗೂ ಸಿಎ ಎನ್. ರಾಮಚಂದ್ರ ಅವರು ಮಾಹಿತಿ ನೀಡಿದರು.
ಜಿಲ್ಲಾ ವಾಣಿಜ್ಯ ಸಂಘದಿಂದ ವರ್ತಕರಿಗೆ ಆದಾಯ ತೆರಿಗೆ ಪಾವತಿ ದಾರರಿಗೆ ಹಮ್ಮಿಕೊಂಡಿದ್ದ ಮಾಹಿತಿ ಕಾರ್‍ಯಾಗಾರದಲ್ಲಿ ಮಾತನಾಡಿದ ಅವರು, ಈ ಕಾನೂನಿನ ಪ್ರಕಾರ ಕರದಾತನು ತಾನು ಮಾರಿದ ಸರಕಿನ ಮೊತ್ತ ಒಬ್ಬ ವ್ಯಕ್ತಿಗೆ ೫೦ಲಕ್ಷ ರೂ.ಗಳಿಗಿಂತ ಅಧಿಕವಾಗಿದ್ದರೆ ಆ ವ್ಯಕ್ತಿಗೆ ಶೇ. ೧ ಆದಾಯ ತೆರಿಗೆಯನ್ನು ಟಿ.ಸಿ.ಎಸ್. ವಹಿವಾಟಿನ ಹಣ ಸಂದಾಯವಾಗುವ ಸಮಯದಲ್ಲಿ ಸಂಗ್ರಹಿಸಿ ಇಲಾಖೆಗೆ ತಪ್ಪದೆ ಪಾವತಿಸಬೇಕು ಎಂದರು.
ಕೋವಿಡ್ ಕಾರಣದಿಂದ ಅ. ೧ ರಿಂದ ೨೦೨೧ರ ಮಾ. ೩೧ರವರೆಗೆ ಶೇ. ೦.೭೫ ಟಿಸಿಎಸ್‌ನ್ನು ಮಾತ್ರ ಕಲಂನಲ್ಲಿ ಮೂಲದಲ್ಲಿ ತೆರಿಗೆ ಟಿಡಿಎಸ್ ಸಂಗ್ರಹವಾಗಿದ್ದರೆ, ಆ ವ್ಯವಹಾರಕ್ಕೆ ೨೦೬ ಸಿ (೧ ಹೆಚ್) ಕಲಂ ಅನ್ವಯವಾಗುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್ ಮಾತನಾಡಿ, ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಸಕಾಲದಲ್ಲಿ ಪಾವತಿಸಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ತೆರಿಗೆ ಸಲಹೆಗಾರರು ಮತ್ತು ತೆರಿಗೆ ಸಲಹಾ ಸಮಿತಿ ಛೇರ್‌ಮನ್ ಮಧುಸೂದನ್ ಐತಾಳ್, ಮಾಜಿ ಅಧ್ಯಕ್ಷ ಭಾರದ್ವಾಜ್, ಕಾರ್ಯದರ್ಶಿ ಗಳಾದ ಬಿ.ಆರ್. ಸಂತೋಷ್, ಗೋಪಿನಾಥ್, ಸಂಪರ್ಕಾಧಿಕಾರಿ ಜಿ. ವಿಜಯಕುಮಾರ್, ಲಕ್ಷ್ಮೀಕಾಂತ, ವಸಂತ್ ಹೋಬ್ಳಿದಾರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.