ಲಾಕ್‌ಡೌನ್ ಸಂದರ್ಭದಲ್ಲಿ ಪತ್ರಕರ್ತರ ಸೇವೆ ಪ್ರಶಂಸನೀಯ…

444

ಸೊರಬ: ದೇಶದಲ್ಲಿ ಈಗಾಗಲೇ ಎರಡನೇ ಬಾರಿಗೆ ಲಾಕ್‌ಡೌನ್ ಜಾರಿಯಾಗಿದ್ದು, ಕೊರೋನಾ ಯೋಧರಾಗಿ ಪತ್ರಕರ್ತರೂ ಕೂಡ ತಮ್ಮ ಜೀವದ ಹಂಗು ತೊರೆದು ಕ್ಷಣ ಕ್ಷಣದ ಮಾಹಿತಿಯನ್ನು ಜನತೆಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ವಿಧಾನ ಮಂಡಳದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ನುಡಿದರು.
ಇಲ್ಲಿನ ಶಾಸಕರ ಭವನದ ಆವರಣದಲ್ಲಿ ಚಂದ್ರಹಾಸ ಟ್ರಸ್ಟ್ ವತಿಯಿಂದ ತಾಲ್ಲೂಕು ಕಾರ್ಯನಿರತ ಪತ್ರಕರ್ತರಿಗೆ ಇಂದು ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಮತ್ತು ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಪತ್ರಕರ್ತರು ಹಗಲಿರುಳು ಕೊರೋನಾ ಯೋಧರಾಗಿ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರಲ್ಲದೆ, ಪತ್ರಕರ್ತರ ಸೇವೆಯನ್ನು ಪರಿಗಣಿಸಿ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಪತ್ರಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಸರ್ಕಾರ ಸದಾ ನಿಮ್ಮದೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಯು.ಎಂ. ನಟರಾಜ್ ಮಾತನಾಡಿ, ಕೊರೋನಾ ಮಹಾಮಾರಿಗೆ ತಾಲೂಕಿನ ಜಗತೆ ಸ್ಥಬ್ದವಾಗಿದೆ. ಪತ್ರಕರ್ತರ ಸ್ಥಿತಿಯೂ ಹೊರತಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರ ಕಾರ್ಯವನ್ನು ಗುರುತಿಸಿ ಚಂದ್ರಹಾಸ ಟ್ರಸ್ಟ್‌ನ ಅಧ್ಯಕ್ಷರೂ ಆದ ಶಾಸಕ ಕುಮಾರ್ ಬಂಗಾರಪ್ಪನವರು ಆಹಾರದ ಕಿಟ್ ವಿತರಿಸಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅರ್ಜುನ್ ಕುಮಾರ್ ಬಂಗಾರಪ್ಪ, ಎಂ.ಡಿ. ಉಮೇಶ್, ವೀರೇಶ್ ಮೇಸ್ತ್ರೀ, ಮಧುರಾಯ್ ಜಿ. ಶೇಟ್, ಪ್ರಭು ಮೇಸ್ತ್ರಿ, ಯು.ಎನ್. ನಟರಾಜ್, ವಿಜಯಲಕ್ಷ್ಮೀ, ಬೋಗೇಶ್ ಶಿಗ್ಗಾದ್, ಟಿ.ಆರ್. ಸುರೇಶ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.