ಲಾಕ್‌ಡೌನ್: ಸಂಕಷ್ಟದಲ್ಲಿ ಕ್ಯಾಬ್ ಚಾಲಕರ ವಿಭಿನ್ನ ಪ್ರತಿಭಟನೆ

456

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಕ್ಯಾಬ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯ ಬಾಡಿಗೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಇವರ ಜೀವನ ಲಾಕ್‌ಡೌನ್‌ನಿಂದಾಗಿ ದುಸ್ತರವಾಗಿದೆ. ಸಾಲ ಮಾಡಿ ಖರೀದಿಸಿದ ವಾಹನದ ಬ್ಯಾಂಕ್ ಕಂತು ಪಾವತಿಸಲು ಸಾಧ್ಯವಾಗದೆ, ಕುಟುಂಬ ನಿರ್ವಹಣೆಗೂ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇದರಿಂದ ಕಂಗಾಲಾಗಿರುವ ಕ್ಯಾಬ್ ಚಾಲಕರು ಖಾಲಿ ಪಾತ್ರೆಗಳನ್ನು ಹಿಡಿದುಕೊಂಡು ಸೆಲ್ಫಿ ಫೋಟೋಗಳನ್ನು ಸಾಮಾಜಿಕ ಜಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಸಾಕಷ್ಟು ಮಂದಿ ಕ್ಯಾಬ್ ಚಾಲಕರು ಫೇಸ್ ಬುಕ್ ಹಾಗೂ ವಾಟ್ಸಪ್‌ಗಳಲ್ಲಿ ಖಾಲಿ ಪಾತ್ರೆ ಜೊತೆಗೆ ಫೋಟೋಗಳನ್ನು ಹಾಕಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ, ದಿನನಿತ್ಯದ ಜೀವನ ಸಾಗಿಸಲೂ ಪರದಾಡುತ್ತಿದ್ದೇವೆ ಎಂದು ಸಾಂಕೇತಿಕವಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕೊರೊನಾ ಲಾಕ್‌ಡೌನ್ ಅವಧಿ ಆರಂಭವಾದ ದಿನದಿಂದ ಕ್ಯಾಬ್ ಚಾಲಕರಿಗೆ ಬಾಡಿಗೆ ಇಲ್ಲ. ಬೆಂಗಳೂರು ನಗರದಲ್ಲಿರುವ ಕೆಲವು ಚಾಲಕರು ತಮ್ಮ ಊರುಗಳಿಗೆ ತೆರಳಿದ್ದರೆ ಮತ್ತೆ ಕೆಲವರು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಆದರೆ ಇವರ ಪರಿಸ್ಥಿತಿಯ ಕುರಿತಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕ್ಯಾಬ್ ಚಾಲಕರಿಗೆ ಸರ್ಕಾರ ಪರಿಹಾರವನ್ನು ನೀಡಬೇಕು ಎಂಬುವುದು ಚಾಲಕರ ಬೇಡಿಕೆಯಾಗಿದೆ. ಈ ಕುರಿತಾಗಿ ಚರ್ಚೆಯನ್ನು ನಡೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಓಲಾ, ಉಬರ್ ಕ್ಯಾಬ್ ಚಾಲಕ, ಮಾಲಕರ ಸಂಘದ ಪ್ರತಿನಿಧಿಗಳು ಭೇಟಿಯಾಗಿದ್ದಾರೆ. ನಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವೂ ಗಮನಹರಿಸಬೇಕಾಗಿದೆ.