ಲಕ್ನೋಗೆ ತೆರಳಿ ಸಿಎಂ ಯೋಗಿ ಭೇಟಿಯಾದ ರೇಣುಕಾಚಾರ್ಯ

399

ಲಕ್ನೋ: ಹೊನ್ನಾಳಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಪಟ್ಟಣದ ಶ್ರೀಕ್ಷೇತ್ರ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಜೊತೆ ಲಕ್ನೋಗೆ ಭೇಟಿ ನೀಡಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾರಾಜ್ ಅವರನ್ನು ಸೆ.೨೭ರ ಭಾನುವಾರ ಭೇಟಿ ಮಾಡಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಅವರು ರೇಣುಕಾಚಾರ್ಯರ ಪರವಾಗಿ ಪ್ರಚಾರ ಸಭೆ ನೆಡೆಸಿ, ಅವರ ಗೆಲುವಿಗೆ ಕಾರಣರಾಗಿದ್ದರು.
ಲಿಂಗೈಕ್ಯ ಪರಮಪೂಜ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆ ಪ್ರಯುಕ್ತ ಕಳೆದ ಮಾರ್ಚ್ ೫,೬ ಮತ್ತು ೭ನೇ ತಾರೀಕಿನಂದು ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ರಾಜ್ಯಮಟ್ಟದ ಕೃಷಿಮೇಳ ಹಮ್ಮಿಕೊಂಡ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ರನ್ನ ಶ್ರೀ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಜೊತೆ ಯೋಗಿಜಿ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕಾರಣಾಂತರಗಳಿಂದ ಸಿಎಂ ಯೋಗಿ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೆ.೨೭ರ ಭಾನುವಾರ ಪೂಜ್ಯ ಶ್ರೀಗಳ ಜೊತೆ ಯೋಗಿಜಿ ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.
ಸಂಜೆ ೫ ಗಂಟೆಗೆ ಯೋಗಿಜಿ ಅವರನ್ನು ಪೂಜ್ಯ ಶ್ರೀಗಳ ಜೊತೆ ಭೇಟಿ ಮಾಡಿದ ಸಂದರ್ಭದಲ್ಲಿ ಸತತವಾಗಿ ಒಂದು ಗಂಟೆ ಕಾಲ ಯೋಗಿಜಿ ಅವರು ಕೋವಿಡ್೧೯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ಯೋಗಿಜಿ ಅವರ ಮುಖದಲ್ಲಿರುವ ತೇಜಸ್ಸು ಹಾಗು ಒಂದು ಗಂಟೆಗಳ ಕಾಲ ಯೋಗಿಜಿ ಜೊತೆ ಕಳೆದ ಅತ್ಯಮೂಲ್ಯ ಸಮಯ ನನ್ನ ಜೀವನದಲ್ಲಿ ನಾನು ಎಂದು ಮರೆಯಲು ಸಾಧ್ಯವಿಲ್ಲ, ಇದು ನನ್ನ ಸೌಭಾಗ್ಯವೇ ಸರಿ. ಇಂತಹ ಮಹಾನ್ ವ್ಯಕ್ತಿಗಳು ನಮ್ಮ ಪಕ್ಷಕ್ಕೆ ಹಾಗು ನನ್ನಂತಹ ಒಬ್ಬ ಸೇವಕನಿಗೆ ಆದರ್ಶ ಪ್ರೇರಕರಾಗಿದ್ದಾರೆ ಎಂದು ರೇಣುಕಾಚಾರ್ಯ ಅವರು ನುಡಿದರು.