ರಾಜಕೀಯ ಪಕ್ಷಗಳು ವಿವಿಧ ಜನಪರ ಕಾರ್‍ಯಗಳಲ್ಲಿ ತೊಡಗಬೇಕಿದೆ

449

ಶಿಕಾರಿಪುರ: ರಾಜಕೀಯ ಪಕ್ಷಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತ ವಾಗದೆ ಪರಿಸರ ಕಾಳಜಿ ಜತೆಗೆ ವಿವಿಧ ಬಗೆಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಈ ದಿಸೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ಚನ್ನಕೇಶವ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ಯುವಮೋರ್ಚಾ ಶಿಕಾರಿಪುರ -ಮಂಡಲ ವತಿಯಿಂದ ನಡೆದ ವೃಕ್ಷಾರೋಪಣ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಕಾರ್ಯಕರ್ತರು ಹಮ್ಮಿಕೊಂಡಿದ್ದು, ಪರಿಸರಕ್ಕೆ ಪೂರಕವಾದ, ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಪ್ರಧಾನಿ ಮೋದಿ, ರಾಷ್ಟ್ರಾಧ್ಯಕ್ಷ , ಮುಖ್ಯಮಂತ್ರಿ ಯಡಿಯೂರಪ್ಪನವರ ಅಪೇಕ್ಷೆಯಾಗಿದೆ ಎಂದು ತಿಳಿಸಿದ ಅವರು, ರಾಜಕೀಯ ಪಕ್ಷ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ದಿಸೆಯಲ್ಲಿ ಜನತೆಗೆ ಆರೋಗ್ಯ ಕ್ಷೇತ್ರದ ಯೋಜನೆ ತಲುಪಿಸಲು,ಸರ್ಕಾರ ನೀಡಿದ ಹಲವು ಕಾರ್ಯಕ್ರಮ ಜನತೆಗೆ ತಲುಪಿಸುವ ಕಾರ್ಯ, ಕೊವಿಡ್ ಸಂದರ್ಭದಲ್ಲಿ ಅಧಿಕಾರಿಗಳಿಗೆ ಊಟೋಪಚಾರದ ಜತೆಗೆ ಪೂರಕವಾಗಿ ಸಹಕರಿಸಿದ ಹೆಮ್ಮೆಯನ್ನು ಕಾರ್ಯಕರ್ತರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಇತರೆ ಪಕ್ಷಗಳಿಗೆ ಭಿನ್ನವಾಗಿದ್ದಾರೆ ಎಂದು ಪ್ರಶಂಸಿಸಿದರು.
ವೃಕ್ಷಾಪರೋಣ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದ್ದು, ಕಷ್ಟಪಟ್ಟು ನೆಡುವ ಗಿಡಗಳನ್ನು ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಯಾಗುವ ಹಿನ್ನಲೆಯಲ್ಲಿ ತೆರವುಗೊಳಿಸಲಾಗುತ್ತಿದೆ ಈ ದಿಸೆಯಲ್ಲಿ ಶಾಶ್ವತವಾಗಿ ಗಿಡ ಮರವಾಗಿ ಬೆಳೆಯುವ ರೀತಿಯಲ್ಲಿ ಸೂಕ್ತ ಸ್ಥಳ ಗುರುತಿಸಿ ಶ್ರಮ ಸಾರ್ಥಕ ವಾಗುವಂತೆ ಗಮನ ಹರಿಸಬೇಕಾಗಿದೆ ಎಂದ ಅವರು, ಅರಣ್ಯ ಇಲಾಖೆ ಎಲ್ಲ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ನೆಟ್ಟ ಸಸಿಗಳನ್ನು ಸ್ಥಳೀಯರು ತೆರವು ಗೊಳಿಸುತ್ತಿದ್ದು ಈ ಬಗ್ಗೆ ಕಾರ್ಯಕರ್ತರು ಗಮನಿಸಿ ಜನತೆಯನ್ನು ಜಾಗೃತಗೊಳಿಸಿದಲ್ಲಿ ಇಲಾಖೆ ನೆಟ್ಟ ಸಸಿ ಸಾರ್ಥಕವಾಗಲಿದೆ ಜತೆಗೆ ಬಿಜೆಪಿ ಕಾರ್ಯಕರ್ತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾದ್ಯ ಎಂದು ತಿಳಿಸಿದರು.
ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಮಾತನಾಡಿ, ಸ್ವಚ್ಚ ಸುಂದರ ಪರಿಸರ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗ ಬೇಕು. ಪರಿಸರವನ್ನು ತಾಯಿ ರೀತಿ ಪ್ರೀತಿಸಬೇಕು ಪರಿಸರ ಪರವಾದ ಕಾರ್ಯಕ್ರಮಗಳು ಎಂದಿಗೂ ಸಾಂಕೇತಿಕವಾಗಿರದೆ ಶ್ರದ್ದೆಯಿಂದ ನಿರ್ವಹಿಸಬೇಕಾಗಿದೆ ಎಂದರು.
ಪರಿಸರ ಸಂರಕ್ಷಣೆಗಾಗಿ ಬಿಜೆಪಿ ಹಾಗೂ ಸಂಘ ಪರಿವಾರ ಪೂರ್ಣಾವಧಿ ಕಾರ್ಯಕರ್ತರನ್ನು ನೀಡಿದೆ ಎಂದು ತಿಳಿಸಿದ ಅವರು ಶಿವಮೊಗ್ಗ ಜಿಲ್ಲೆ ಮಲೆನಾಡಿನ ಹೆಬ್ಬಾಗಿಲಾಗಿದ್ದು ಒಡಲಿನಲ್ಲಿ ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಮಲೆನಾಡಿನ ಕಾಡಿನಲ್ಲಿ ಅಕೇಶಿಯಾ ಗಿಡ ಬೆಳೆಸದಂತೆ ಸಂಘ ಪರಿವಾರದ ಹಿರಿಯರು ವೃಕ್ಷ ರಕ್ಷ ಯೋಜನೆಯಡಿ ಸಾಗರದಲ್ಲಿ ಆರಂಭಿಸಿದ ಆಂದೋಲನ ಇದೀಗ ಪಶ್ಚಿಮ ಘಟ್ಟ ಉಳಿಸಿ ಎಂಬ ಹೋರಾಟಕ್ಕೆ ನಾಂದಿಯಾಗಿದೆ ಎಂದು ತಿಳಿಸಿದರು.
ಪರಿಸರ ನಾಶ ಹಲವು ಮಾರಕ ಕಾಯಿಲೆಗಳಿಗೆ ಮೂಲವಾಗಿದ್ದು ಕೊರೋನಾದಂತಹ ಭಯಾನಕ ಸೋಂಕು ಸಮುದಾಯವನ್ನು ವ್ಯಾಪಿಸಲು ಪರಿಸರದ ಮೇಲಿನ ದಬ್ಬಾಳಿಕೆ ವಿಪರೀತವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪರಿಸರ ನಾಶದಿಂದ ಹಲವು ಕಾಯಿಲೆ ಆವರಿಸಲಿದೆ ಎಂದ ಅವರು, ಜಗತ್ತು ಕೊರೋನಾದಿಂದ ನರಳುತ್ತಿದ್ದು ಭಾರತದಲ್ಲಿ ಮಾತ್ರ ಆಯುರ್ವೇದಿಕ್ ಔಷಧದಿಂದ ಹಲವರು ಗುಣಮುಖ ರಾಗಿದ್ದಾರೆ. ಪೂರ್ವಿಕರು ಪರಿಸರದಲ್ಲಿ ಆಯುರ್ವೇದಿಕ್ ಗಿಡ ಮರಗಳನ್ನು ಬೆಳೆಸಿ ಸಮುದಾಯಕ್ಕೆ ಪರಿಸರದಲ್ಲಿನ ಔಷಧೀಯ ಮಹಿಮೆಯನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಮಾತನಾಡಿ, ಅನಾದಿ ಕಾಲದಿಂದ ಭಾರತೀಯ ಪರಂಪರೆ ಯಲ್ಲಿ ಪರಿಸರವನ್ನು ಪೂಜಿಸುವ ಸಂಪ್ರದಾಯ ಚಾಲ್ತಿಯಲ್ಲಿದ್ದು ಅಶ್ವಗಂಧ, ತುಳಸಿ, ಬನ್ನಿ ಮತ್ತಿತರ ನೂರಾರು ಔಷಧೀಯ ಗುಣಗಳ ಮರಗಿಡಗಳನ್ನು ಬೆಳೆಸಿ ಪೋಷಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲಾಗುತ್ತಿದ್ದು ಇದೀಗ ಪಾಶ್ಚಾತ್ಯರ ಜೀವನ ಶೈಲಿ ಅನುಕರಣೆ ಯಿಂದ ಸಂಪ್ರದಾಯ ಕಣ್ಮರೆಯಾಗಿ ರೋಗರುಜಿನ ಸಮಾಜವನ್ನು ಕಾಡುತಿತಿದೆ ಎಂದು ವಿಷಾದಿಸಿದರು.
ಪ್ರಮುಖರಾದ ಚಿನ್ಮಯ್, ಧ್ರುವಕುಮಾರ್, ಶರತ್‌ಕಲ್ಯಾಣಿ, ಪ್ರಶಾಂತ್ ಜೀನಳ್ಳಿ, ರವೀಂದ್ರ ದೂಪದಹಳ್ಳಿ, ಪರಶುರಾಮ ಚಾರ್ಗಲ್ಲಿ, ಶುಭ ರಘು, ವೀರನಗೌಡ, ಪ್ರವೀಣ ಬೆಣ್ಣೆ,ವಿನಯ್,ಗುರುರಾಜ ಜಗತಾಪ್ ಮತ್ತಿತರರಿದ್ದರು.