ಮೌಲ್ಯಯುತ ಜೀವನವೇ ಸಾಧನೆಗೆ ರಹದಾರಿ ಅಭಿನಂದನಾ ಸಮಾರಂಭದಲ್ಲಿ ಫಾ| ಜೇಕಬ್

445

ಶಿವಮೊಗ್ಗ: ನಗರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಗುರು ಗಳಾದ ರೆ|ಫಾ| ಗಿಲ್ಬರ್ಟ್ ಲೋಬೋ ಅವರ ಆಶೀರ್ವಾದದೊಂದಿಗೆ ಲೀಜನ್ ಆಫ್ ಮೇರಿ ಘಟಕದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತೆ ರಿಯಾ ಡಿಸೋಜ ಅವರನ್ನು ಅವರ ಮನೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಲೀಜನ್ ಆಫ್ ಮೇರಿ ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ ರೆ|ಫಾ| ಜೇಕಬ್ ಅವರು ಮಾತನಾಡಿ, ಬಹುತೇಕ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ, ಮೌಲ್ಯಯುತ ಜೀವನ ನಡೆಸುವುದು ಹೇಗೆ ಎಂಬುದನ್ನೇ ಕಲಿಸುವುದನ್ನು ಮರೆತುಬಿಡುತ್ತಾರೆ.
ಪೋಷಕರ ಅತಿಯಾದ ಪ್ರೀತಿ ಮತ್ತು ಅವಲಂಬನೆಯಿಂದಾಗಿ ಮಕ್ಕಳು ಹಠಮಾರಿಗಳಾಗಿ, ವಿದ್ಯೆಯಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಎಚ್ಚರಿಸಿದರಲ್ಲದೇ, ರಿಯಾಳ ಪೋಷಕರು ಈಕೆಗೆ ನೀಡಿದ ಮೌಲ್ಯಯುತವಾದ ಸಂಸ್ಕಾರ- ಸಂಸ್ಕೃತಿ ಕಲಿಸಿ, ಉತ್ತಮ ಮಾರ್ಗದಲ್ಲಿ ಮುನ್ನಡೆಸಿರುದು ಹಾಗೂ ಅವಳ ಶ್ರದ್ಧೆ ಮತ್ತು ಗುರಿ ಈ ಸಾಧನೆಗೆ ಮುಖ್ಯ ಕಾರಣ ಎಂದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳು ೩ಜಿ, ೪ಜಿ ದಾಸರಾಗುತ್ತಿದ್ದಾರೆ. ಒಂದು ಕ್ಷಣ ಮೊಬೈಲ್ ಇಲ್ಲದಿದ್ದರೆ ಪ್ರಪಂಚವೇ ಮುಳುಗಿದ ಹಾಗೆ ಆಡುತ್ತಾರೆ. ಈ ಮೊಬೈಲ್‌ಗಳನ್ನು ಕೇವಲ ವಿಡಿಯೋ ಗೇಮ್ಸ್ ಆಡಲು ಅಥವಾ ಸೆಲ್ಫಿ ಸೇರಿದಂತೆ ಇನ್ನಿತರ ಅನವಶ್ಯಕ ಕೆಲಸಗಳಿಗೆ ಬಳಸದೆ ಶೈಕ್ಷಣಿಕ ವಿಚಾರ ವಿನಿಮಯಕ್ಕೆ ಬಳಸಿರಿ ಎಂದಲ್ಲದೇ, ಮನುಕುಲದ ಆರಂಭದಿಂದಲೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ೩ಜಿ ಗಳು ಸದಾ ಶ್ರಮಿಸುತ್ತಿದ್ದರು. ಅವರೆಂದರೆ ಮಾತಾಜಿ-ಪಿತಾಜಿ ಮತ್ತು ಗುರೂಜಿ. ಪ್ರತಿಯೊಂದು ಮಗುವೂ ಈ ಮೂರು ಜಿಗಳ ಮಾರ್ಗದರ್ಶನ ಪಡೆದು ಮುನ್ನಡೆದರೆ ಜೀವನ ಉಜ್ವಲವಾಗಿರುತ್ತದೆ ಎಂದರು.
ಮಕ್ಕಳು ಕೇವಲ ಅಂಕ ಗಳಿಕೆಯನ್ನಷ್ಟೇ ಗುರಿಯನ್ನಾಗಿಸದೇ ಮೌಲ್ಯಾಧಾರಿತ ಜೀವನ ನಡೆಸುವುದನ್ನು ಕಲಿಯಬೇಕು. ಈ ಮೂಲಕ ಇತರರಿಗೆ ಮಾದರಿಯಾಗ ಬೇಕೆಂದು ಸಲಹೆ ನೀಡಿದರು.
ಸಂಘಟನೆಯ ಪ್ರಮುಖರಾದ ಜಾನ್ ಬ್ಯಾಪ್ಟಿಸ್ಟ್ ಅವರು ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರುವ ಮೂಲಕ ರಿಯಾ ಇಡೀ ಕ್ರೈಸ್ತ ಸಮಾಜಕ್ಕೆ ಕೀರ್ತಿ ತಂದಿರುವುದಲ್ಲದೇ, ನಮ್ಮ ಸಮಾಜದ ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದಾಳೆ ಎಂದರಲ್ಲರೇ, ಜೀವನದುದ್ದಕ್ಕೂ ಇನ್ನೂ ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸಿದರು.
ಪ್ರಮುಖರಾದ ಆಲ್ಬಿನ್ ಕ್ವಾಡ್ರಸ್, ಇರುದಯರಾಜ್, ಆರೋಕ್ಯನಾಥನ್, ವಿಲಿಯಂ, ಸಂದೀಪ್, ಕ್ರಿಸ್ಟೀನಾ, ಇರುದಯ ಮೇರಿ, ಬೇಬಿ, ಕ್ಲೊಟಿಲ್ಡಾ ರೇಗೋ, ಸ್ಟೀವನ್ ಗೋನ್ಸಾಲ್ವಿಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.