ಮೆಡಿಸಿನ್ ಲಾರಿ ಹತ್ತಿ ತವರಿಗೆ ಹೊರಟಿದ್ದ ೨೫ ಮಂದಿ ಕ್ವಾರಂಟೈನ್‌ಗೆ ಶಿಫ್ಟ್

529

ಶಿವಮೊಗ್ಗ: ನಗರದಲ್ಲಿ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ನೀಡಿದ ಹಿನ್ನಲೆಯಲ್ಲಿ ಅದ್ಯಾವ್ಯಾವ ಇಲಾಖೆಗಳಿಗೆ ತಲೆನೋವು ತಂದಿದೆಯೋ ತಿಳಿಯದು. ಆದರೆ ಪೊಲೀಸ್‌ರಿಗೆ ಮಾತ್ರ ಇದು ನಿದ್ದೆಗೆಡಿಸಿದೆ. ಕೊರೋನ ವಿರುದ್ಧ ಹೋರಾಡುವ ಜೊತೆಗೆ ಕಾನೂನು ವ್ಯವಸ್ಥೆಯನ್ನೂ ಕಾಪಾಡುವ ಹೊಣೆಗಾರಿಕೆ ಇಲಾಖೆಯದ್ದಾಗಿದೆ.
ಹೊರ ರಾಜ್ಯದಿಂದ ಕೂಲಿ ಕಾರ್ಮಿಕರು ಸೇರಿದಂತೆ ಇತರರು ಶಿವಮೊಗ್ಗಕ್ಕೆ ಬಂದಿದ್ದವರು ತಿಂಗಳಾನುಗಟ್ಟಲೆ ಇಲ್ಲೇ ಇದ್ದಿದ್ದರ ಪರಿಣಾಮ ಇದೀಗ ತುರ್ತು ವಾಹನಗಳನ್ನ ದುರ್ಬಳಕೆ ಮಾಡಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳಲು ದುಂಬಾಲು ಬಿದ್ದಿದ್ದಾರೆ. ಕೋವಿಡ್-೧೯ ಕುರಿತು ಅರ್ಥ ಮಾಡಿಕೊಳ್ಳದೆ ತಮ್ಮ ಕ್ಷೇಮವನ್ನಷ್ಟೇ ನೋಡಿಕೊಳ್ಳುತ್ತಿದ್ದಾರೆ.
ಇಂತಹ ಕೆಲವರು ರಾಜಸ್ಥಾನದ ಲಾರಿಗಳಲ್ಲಿ ತಮ್ಮ ತಮ್ಮ ಊರಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ.
ಇದೀಗ ರಾಜಸ್ಥಾನ್‌ಗೆ ಲಾರಿಯೊಂದರಲ್ಲಿ ಹೊರಟಿದ್ದ ಸುಮಾರು ೨೫-೩೦ ಮಂದಿಯನ್ನು ತಡೆದು ತಪಾಸಣೆ ನಡೆಸಿದ ಪೇಟೆ ಪೊಲೀಸರು ಖುದ್ದು ಬೆಚ್ಚಿಬಿದ್ದಿದ್ದಾರೆ.
ನಿನ್ನೆ ರಾತ್ರಿ ದೊಡ್ಡ ಪೇಟೆ ಪೊಲೀಸ್ ಠಾಣೆಗೆ ದೂರವಾಣಿ ಕರೆಬಂದ ಹಿನ್ನಲೆಯಲ್ಲಿ ಮಂಜುನಾಥ ಬಡಾವಣೆಯ ಕೆಎಸ್‌ಆರ್‌ಟಿಸಿ ಡಿಪೋ ಪಕ್ಕದಲ್ಲಿ ಒಂದು ಲಾರಿಯನ್ನ ನಿಲ್ಲಿಸಿಕೊಂಡು ಅದರಲ್ಲಿ ೨೫-೩೦ ಜನರನ್ನ ತುಂಬಿಸಿಕೊಳ್ಳಲಾಗುತ್ತಿದೆ. ಬೇರೆಡೆ ಇವರುಗಳು ಹೋಗುವ ತಯಾರಿಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ಖಚಿತ ಮಾಹಿತಿಯನ್ನಾಧರಿಸಿ ಪಿಎಸ್‌ಐ ಶಂಕರ್ಮೂರ್ತಿಯವರು ಸ್ಥಳಪರಿಶೀಲನೆ ನಡೆಸಿದಾಗ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವು ಕ್ಷೇತ್ರಕ್ಕೆ ರಿಯಾಯ್ತಿ ನೀಡಿದರೂ ಸಹ ಸಾರಿಗೆಗೆ ಅನುಮತಿ ಇರುವುದಿಲ್ಲ. ಸರ್ಕಾರದ ನಿಯಮಗಳನ್ನ ಉಲ್ಲಂಘನೆ ಮಾಡಿ ಆರ್ ಜೆ ೨೩-ಜಿಎ-೩೭೩೦ ಕ್ರಮಸಂಖ್ಯೆಯ ಲಾರಿಯಲ್ಲಿ ತಮ್ಮ ಊರುಗಳಿಗೆ ತೆರಳಲು ಪ್ರಯತ್ನಿಸುತ್ತಿರುವುದು ಖಾತರಿಯಾಗಿದೆ.
ಈ ಲಾರಿಯು ರಾಜಸ್ಥಾನದಿಂದ ಮೆಡಿಸಿನ್ ಹೊತ್ತು ವ್ಯಾಪಾರಕ್ಕಾಗಿ ಶಿವಮೊಗ್ಗಕ್ಕೆ ಬಂದಿದ್ದು ಇಲ್ಲಿ ಅನ್ ಲೋಡ್ ಮಾಡಿ ವಾಪಾಸು ರಾಜಸ್ಥಾನ್‌ಕ್ಕೆ ಹೋಗುವಾಗ ರಾಜಸ್ಥಾನ್ ಮತ್ತು ಗುಜರಾತ್ ನಿವಾಸಿಗಳನ್ನು ಕರೆದೊಯ್ಯಲು ಪ್ರಯತ್ನಿಸಿರುವುದು ತಿಳಿದುಬಂದಿದೆ.
ಲಾರಿಯ ಹಿಂದಿನ ಲಗೇಜ್ ಹಾಕುವ ಬಾಗಿಲು ಸಹ ಊರಬಾಗಿಲಿಗಿಂತ ದೊಡ್ಡದಾಗಿದ್ದು ಇದರಲ್ಲಿ ಒಮ್ಮೆ ಕುಳಿತು ಬಾಗಿಲು ಹಾಕಿಕೊಂಡರೆ ಒಳಗಿನದ್ದು ಹೊರಗಡೆಯಿಂದ ಗೊತ್ತಾಗುವುದಿಲ್ಲ ಆ ರೀತಿ ನಿರ್ಮಿಸಲಾಗಿದೆ.
ತಕ್ಷಣವೇ ಲಾರಿಯನ್ನು ಸೀಜ್ ಮಾಡಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಸುಮಾರು ೨೫ ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿರಿಸಲಾಗಿದೆ.
ಸದರಿ ಪ್ರಕರಣದಲ್ಲಿ ಲಾರಿ ಚಾಲಕ ಫೈರೋಜ್(೩೨) ಹಾಗೂ ಮಾಲೀಕ ಇಸ್ಮಾನ್ ಉದ್ದೀನ್(೨೩), ಕ್ಲೀನರ್ ಸೈಜದ್ (೧೯) ಎಂಬ ಮೂವರನ್ನ ಬಂಧಿಸಿ, ಲಾರಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.