ಮಾರಣಾಂತಿಕ ಹಲ್ಲೆಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಗಾಂಧಿ ಬಜಾರ್ ಬಂದ್ ಬಜರಂಗದಳದಿಂದ ಪ್ರತಿಭಟನೆ

388

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಇಂದು ಬೆಳಿಗ್ಗೆ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನೆಹರೂ ಕ್ರೀಡಾಂಗಣಕ್ಕೆ ವಾಕಿಂಗ್‌ಗಾಗಿ ಬೆಳಿಗ್ಗೆ ೬.೩೦ಕ್ಕೆ ಅಶೋಕ ರಸ್ತೆಯ ತಮ್ಮ ಮನೆಯಿಂದ ಸ್ಕೂಟರ್‌ನಲ್ಲಿ ದೀಪಕ್ ಪೆಟ್ರೋಲ್‌ಬಂಕ್ ಬಳಿ ಬರುತ್ತಿದ್ದಾಗ ಇವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದು, ಮೂಗು ಹಾಗೂ ತಲೆಗೆ ಭಾರೀ ಪೆಟ್ಟು ಬಿದ್ದಿದೆ. ಸದ್ಯಕ್ಕೆ ನಾಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗೇಶ್ ಗೋವುಗಳ ರಕ್ಷಣೆ ಹಾಗೂ ಹಿಂದೂ ಸಂಘಟನೆಯ ಕೆಲಸದಲ್ಲಿ ಮುಂಚೂಣಿಯಲ್ಲಿದ್ದರು. ಇದಕ್ಕಾಗಿಯೇ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.
ಪ್ರತಿಭಟನೆ: ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು ಬಜರಂಗದಳದ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳ ಯುವಕರು ನಗರ ಗಾಂಧಿ ಬಜಾರ್‌ನ ಅಂಗಡಿಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.
ಉದ್ದೇಶ ಪೂರ್ವಕವಾಗಿ ನಾಗೇಶ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಇದಕ್ಕೆ ಕಾರಣರಾದ ವರನ್ನು ತಕ್ಷಣ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ಉಂಟಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ ಪೊಲೀಸರು ಸ್ಥಳದಲ್ಲಿದವರನ್ನು ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಬಜಾರ್ ಹಾಗೂ ಲಷ್ಕರ್ ಮೊಹಲ್ಲಾ ದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.
ಗಾಂಧಿಬಜಾರ್‌ನಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಅನೇಕ ಅಂಗಡಿಗಳ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಹಾಕಿದ್ದು, ಜನ, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಹಲ್ಲೆ ಪ್ರಕರಣ ಕುರಿತಾಗಿ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಂಸದರ ಭೇಟಿ: ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ಹಲ್ಲೆಗೊಳಗಾಗಿ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್‌ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಒಂದು ತಿಂಗಳ ಹಿಂದೆ ನಗರದಲ್ಲಿ ಕೆಲ ದುಷ್ಕರ್ಮಿಗಳಿಂದ ಹಲ್ಲೆಗಳು ನಡೆದಿದ್ದವು, ಆಗ ಪೊಲೀಸರು ಸಮರ್ಥವಾಗಿ ಎಲ್ಲವನ್ನು ನಿಭಾಯಿಸಿದ್ದರು. ಈಗ ಮತ್ತೆ ಹಲ್ಲೆಗಳು ನಡೆದಿವೆ. ಇದಕ್ಕೆ ಕಾರಣರಾದವರನ್ನು ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸ ತಮಗಿದೆ ಎಂದರು.
ನಾಗೇಶ್ ಮೇಲೆ ಹಲ್ಲೆ ನಡೆಸುವ ಮುನ್ನಾ ದುಷ್ಕರ್ಮಿಗಳು ಒಂದು ವಾರದಿಂದ ಹೊಂಚು ಹಾಕಿ ನಾಗೇಶ್ ಓಡಾಡುವ ಮಾರ್ಗ ಪರಿಶೀಲಿಸಿ ವ್ಯವಸ್ಥಿತವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆಕೋರರಿಂದ ತಪ್ಪಿಸಿಕೊಂಡು ನಾಗೇಶ್ ಮುಖ್ಯ ರಸ್ತೆಗೆ ಬಂದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ಕುರಿತಾಗಿ ಚರ್ಚೆ ಯಾಗುತ್ತಿದೆ. ಇವು ಯಾವುದೇ ಧರ್ಮ, ಜಾತಿಗೆ ಸೀಮಿತ ವಿಚಾರ ವಲ್ಲ. ರಾಜ್ಯದಲ್ಲಿ ಶೀಘ್ರವೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಬಜರಂಗದಳ ಕಾರ್ಯಕರ್ತರು ನಿನ್ನೆಯಷ್ಟೇ ಮನವಿ ಮಾಡಿದ್ದರು. ಈ ಹಲ್ಲೆಯ ಹಿಂದೆ ಅದು ಕಾರಣವಿರ ಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದರು.