ಮಾರಕ ಕೊರೋನಾ ತಡೆಗೆ ಉಪವಿಭಾಗೀಯ ಆಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

547

ಸಾಗರ : ಮಾರಕ ಕೊರೋನಾ ತಡೆಗೆ ಉಪವಿಭಾಗೀಯ ಆಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಇತರೆ ಎಲ್ಲ ರೀತಿಯ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಯ ಒಂದು ಭಾಗದಲ್ಲಿ ಫ್ಲೂ ಕಾರ್ನರ್ ಪ್ರಾರಂಭಿಸಲಾಗಿದ್ದು, ಇಲ್ಲಿ ತಜ್ಞ ವೈದ್ಯರ ತಂಡ ಸಜ್ಜುಗೊಂಡಿದೆ. ಫ್ಲೂಕಾರ್ನರ್‌ನಲ್ಲಿ ಮೂರು ಬೆಡ್ ಹಾಕಲಾಗಿದ್ದು, ಪಾಳಿ ಪ್ರಕಾರ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಕೆ.ಆರ್. ಹೇಳಿದರು.

ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಂಗಳವಾರ ಕೊರೋನಾ ಕುರಿತು ತೆಗೆದುಕೊಂಡಿರುವ ಮುಂಜಾಗೃತಾ ಕ್ರಮದ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಫ್ಲೂಕಾರ್ನರ್‌ನಲ್ಲಿ ಜ್ವರಕ್ಕೆ ಸಂಬಂಧಪಟ್ಟ ರೋಗಿಯನ್ನು ತಪಾಸಣೆಗೆ ಒಳಪಡಿಸಿ ಮೊದಲ ಹಂತದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ನಂತರ ಸ್ಯಾಂಪಲ್ ಸಂಗ್ರಹಿಸಿ ಅದನ್ನು ಶಿವಮೊಗ್ಗ ಪರೀಕ್ಷಾ ಕೇಂದ್ರಕ್ಕೆ ಕಳಿಸಿ ಕೊಡಲಾಗುತ್ತದೆ. ಸಾಗರ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಬಂದಿಲ್ಲ. ಎರಡು ಜನ ರೋಗಿಗಳ ಸ್ಯಾಂಪಲ್ ಕಳಿಸಲಾಗಿತ್ತು. ಅದು ನೆಗೆಟೀವ್ ಬಂದಿದೆ ಎಂದು ಹೇಳಿದರು.

ಸ್ವಯಂನಿರ್ಬಂಧ ಹಾಕಿಕೊಂಡವರನ್ನು ಮಾನಸಿಕವಾಗಿ ಸಜ್ಜುಗೊಳಿಸಲು ಮಾನಸಿಕ ತಜ್ಞರೊಬ್ಬರ ಸೇವೆ ಕಲ್ಪಿಸುವಂತೆ ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜೊತೆಗೆ ಫ್ಲೂಕಾರ್ನರ್‌ನಲ್ಲಿ ಹೆಚ್ಚಿನ ಜನರು ಸೇರದಂತೆ ಬಂದೋಬಸ್ತು ಮಾಡಲು ಪೊಲೀಸ್ ಸಿಬ್ಬಂದಿ ನೇಮಕ ಮಾಡುವಂತೆ ಸಹ ಮನವಿ ಮಾಡಲಾಗಿದೆ. ಇದರ ಜೊತೆಗೆ ಬೇರೆಬೇರೆ ಸೌಲಭ್ಯಗಳನ್ನು ಕಲ್ಪಿಸಲು ವೈದ್ಯಸಿಬ್ಬಂದಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಡಾ. ಅರುಣ್ ಕುಮಾರ್ ಅವರನ್ನು ಕೊರೋನಾ ಮುಂಜಾಗೃತೆಗಾಗಿ ರಚಿಸಿಕೊಂಡಿರುವ ಟಾಸ್ಕ್‌ಫೋರ್ಸ್‌ನ ಸಂಚಾಲಕರಾಗಿ ನೇಮಕ ಮಾಡಲಾಗಿದ್ದು, ಪ್ರತಿದಿನ ಸಂಜೆ ಸಭೆ ಸೇರಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮದ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ತಗುಲಿದ್ದರೆ ಅವರ ಚಿಕಿತ್ಸೆಗಾಗಿ ೧೫ ಬೆಡ್‌ಗಳು ಇರುವ ವಿಶೇಷ ವಾರ್ಡ್ ಸಿದ್ದಪಡಿಸಲಾಗಿದೆ. ಜೊತೆಗೆ ಹೆಚ್ಚಿನ ಕೊರೋನಾ ಶಂಕಿತರು ತಪಾಸಣೆಗೆ ಬಂದಲ್ಲಿ ಅವರ ಚಿಕಿತ್ಸೆಗಾಗಿ ಒಂದು ವಿದ್ಯಾರ್ಥಿನಿಲಯ ಹಾಗೂ ಎರಡು ಸಭಾಭವನವನ್ನು ಗುರುತಿಸಲಾಗಿದೆ. ಸದ್ಯಕ್ಕೆ ಸಾಗರದಲ್ಲಿ ಅಂತಹ ಯಾವುದೇ ಸ್ಥಿತಿ ಇಲ್ಲ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು, ಮಾಸ್ಕ್, ಸ್ಯಾನಿಟೈಸರ್ ಸಂಗ್ರಹ ಇದೆ. ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಆಶ್ರಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಿದ್ದು, ಪ್ರತಿದಿನ ಕೊರೋನಾ ತಡೆ ಸಂಬಂಧ ರೂಪುರೇಷ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಡಾ. ಸಿದ್ದನಗೌಡ ಪಾಟೀಲ್, ಡಾ. ಪರಪ್ಪ, ಡಾ. ಹರೀಶ್, ಡಾ. ಗಜೇಂದ್ರ, ಡಾ. ವಿಕ್ರಮ್ ಇನ್ನಿತರರು ಹಾಜರಿದ್ದರು.