ಮದ್ಯ ಪ್ರಿಯರಿಗೆ ಇಂದೂ ಸಿಗದ ಗುಡ್ ನ್ಯೂಸ್ ಲಾಕ್‌ಡೌನ್-೩: ಮೇ೩ರ ನಂತರ ತೀರ್ಮಾನ

539

ಬೆಂಗಳೂರು: ಸದ್ಯಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ಕ್ರೂಢೀಕರಣಕ್ಕಾಗಿ ಕೈಗಾರಿಕೆಗಳ ಆರಂಭ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇದರ ಹೊರತಾಗಿ ಮದ್ಯ ಮಾರಾಟದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಈ ಬಗ್ಗೆ ಮೇ೩ರ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಮೂಲಕ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಬಿಗ್ ಶಾಕ್ ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯದಲ್ಲಿ ಆರ್ಥಿಕ ಸಂಪತ್ತಿನ ಕ್ರೂಢೀಕರಣಕ್ಕಾಗಿ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಂತರ ರಾಜ್ಯ ಸಾರಿಗೆ ಸಂಪರ್ಕಕ್ಕೆ ಅವಕಾಶ ನೀಡಲಾಗುತ್ತಿದೆ. ಕೈಗಾರಿಕೆಗಳ ಆರಂಭಕ್ಕೂ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.
ಇನ್ನೂ ಮುಂದುವರೆದು ಮದ್ಯ ಮಾರಾಟಕ್ಕೆ ಯಾವಾಗ ಅವಕಾಶ ನೀಡಲಾಗುತ್ತದೆ ಎನ್ನುವ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಆರ್ಥಿಕ ಸಂಪತ್ತಿನ ಕ್ರೂಢೀಕರಣಕ್ಕಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇದರ ಹೊರತಾಗಿ ಸದ್ಯಕ್ಕೆ ಮದ್ಯ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಮೇ೩ರ ಲಾಕ್ ಡೌನ್ ನಂತರ ಪ್ರಧಾನಿ ನರೇಂದ್ರ ಮೋದಿಯವರ ತೀರ್ಮಾನದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಮೇ ೩ರ ಬಳಿಕ ಲಾಕ್‌ಡೌನ್ ಸಡಿಲಿಕೆ ಕುರಿತಂತೆ ಮಾಹಿತಿ ಸಿಕ್ಕಿದೆ. ಆದರೆ, ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಮಾತ್ರ ಲಾಕ್ ಡೌನ್ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್-೧೯ ಪ್ರಕರಣಗಳು ಇಳಿಮುಖ ವಾಗಿವೆ. ಇದು ಹೀಗೆ ಮುಂದುವರೆದರೆ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲೂ ಕೈಗಾರಿಕೆ ಕಾರ್ಯ ನಿರ್ವಹಿಸುವ ಸಂಬಂಧ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ, ಮಾಧ್ಯಮಗಳ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ ಸಿಎಂ, ಕೊರೊನಾ ರೋಗದಿಂದ ಗುಣಮುಖರಾದವರ ಬಗ್ಗೆ ಕೊರೊನಾ ವಾರಿಯರ್ಸ್ ಬಗ್ಗೆ ಸಕಾರಾತ್ಮಕ ವಿಷಯಗಳನ್ನು ಬಿತ್ತರಿಸುವಂತೆ ಮನವಿ ಮಾಡಿದರು. ಅಲ್ಲದೇ, ವಿಷಮ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಸೇವೆಯನ್ನು ಸಿಎಂ ಶ್ಲಾಘಿಸಿದರು.
ಇನ್ನು ಕೊರೊನಾ ಸೋಂಕು ಇನ್ನು ಮೂರ್ನಾಲ್ಕು ತಿಂಗಳು ಮುಂದುವರೆದರೂ ಆಶ್ಚರ್ಯವಿಲ್ಲ, ಒಂದೆಡೆ ಕೊರೊನಾ ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆ ಗಳಿಗೆ ಚೇತರಿಕೆ ಕೊಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ ೪ರಂದು ಕೆಲವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಿದೆ. ಸದ್ಯಕ್ಕೆ ಹೊಟೇಲ್, ಮಾಲ್‌ಗಳನ್ನು ಪ್ರಾರಂಭಿಸುವ ಉದ್ದೇಶವಿಲ್ಲ. ಆದರೆ, ಹೊಟೇಲ್‌ಗಳಲ್ಲಿ ಕೇವಲ ಪಾರ್ಸಲ್ ಸೇವೆಗಷ್ಟೇ ಅನುಮತಿ ಇದೆ ಎಂದರು.
ಮೇ೪ ರಂದು ಅನುಕೂಲಕರ ವಾತಾವರಣ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಹೇಳಿದರು.
ಭಾರತದಲ್ಲಿ ಲಾಕ್ ಡೌನ್-೩ ಸಾಧ್ಯತೆ:
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕೇಂದ್ರ ಸರ್ಕಾರವು ಮತ್ತೊಂದು ಸುತ್ತಿನ ಲಾಕ್ ಡೌನ್ ಘೋಷಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಹಲವು ಕ್ರಮಗಳನ್ನ ಕೈಗೊಂಡಿದೆ. ಎರಡನೇ ಹಂತದ ಲಾಕ್ ಡೌನ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ೩ನೇ ಹಂತದಲ್ಲಿ ಲಾಕ್ ಡೌನ್ ಮುಂದುವರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದ್ದು, ಮೇ ೪ ರಿಂದ ಹೊಸ ಮಾರ್ಗಸೂಚಿ ಜರಿಗೆ ತರುತ್ತಿದ್ದೇವೆ. ಎಲ್ಲ ರಾಜ್ಯಗಳು ಅದನ್ನು ಕಟ್ಟು ನಿಟ್ಟಾಗಿ ಜರಿ ಮಾಡಬೇಕು. ಆದರೆ ಈ ಬಾರಿ ಹೆಚ್ಚಿನ ವಿನಾಯಿತಿಗಳು ಇರಲಿವೆ ಎಂದು ಗೃಹ ಇಲಾಖೆ ರಾಜ್ಯಗಳಿಗೆ ಹೇಳಿದೆ ಎನ್ನಲಾಗಿದೆ.