ಮತ್ತೆ ಖಾಸಗಿ ಕೈಗೆ ಅರಣ್ಯ ಭೂಮಿ : ಒಕ್ಕೂಟದಿಂದ ತೀವ್ರ ಆಕ್ಷೇಪ

465

ಶಿವಮೊಗ್ಗ: ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸುವ ನೆಪದಲ್ಲಿ ಅಲ್ಲಿನ ಅರಣ್ಯ ಭೂಮಿಯನ್ನು ಮತ್ತೆ ಲೀಸ್‌ಗೆ ನೀಡುವ ಮೂಲಕ ಸಿಎಂ ಯಡಿಯೂರಪ್ಪ ಕುಟುಂಬದವರು ಅರಣ್ಯ ಭೂಮಿಯನ್ನು ಕೂಡ ಖಾಸಗೀಕರಣ ಮಾಡುವ ಹುನ್ನಾರಕ್ಕೆ ಕೈಹಾಕಿದ್ದಾರೆ ಎಂದು ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ತೀವ್ರವಾಗಿ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ಎಂಪಿಎಂ ಕಾಗದ ಕಾರ್ಖಾನೆಗೆ ೪೦ ವರ್ಷಗಳ ಕಾಲ ಸುಮಾರು ೮೦ ಸಾವಿರ ಎಕರೆ ಭೂಮಿಯನ್ನು ಲೀಸ್‌ಗೆ ನೀಡಿತ್ತು. ಈಗ ಅದರ ಅವಧಿ ಮುಗಿದಿದೆ. ಕಾರ್ಖಾನೆ ಮುಚ್ಚಿದೆ. ಆಗ ಒಂದು ಪಕ್ಷ ಕಾರ್ಖಾನೆ ತೆರೆದರೂ ಕೂಡ ಲೀಸ್‌ಗೆ ನೀಡಿದ್ದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಕೊಡಬೇಕು ಎಂದು ಲೀಸ್ ನಲ್ಲಿ ಸರ್ಕಾರವೇ ಷರತ್ತು ಹಾಕಿತ್ತು. ಆದರೆ ಈ ಷರತ್ತನ್ನು ಬಿಜೆಪಿ ಸರ್ಕಾರ ಮುರಿದು ಹಾಕಿದೆ ಎಂದರು.
ಮುಖ್ಯಮಂತ್ರಿ, ಸಂಸದರು ಮುಂತಾದ ಕೆಲವೇ ಕೆಲವು ರಾಜಕಾರಣಿಗಳು ಎಂಪಿಎಂ ಅರಣ್ಯ ಭೂಮಿಯ ಲೀಸ್ ಮುಂದುವರೆಸುವ ಬಗ್ಗೆ ಯಾವ ಅರಣ್ಯ ಅಧಿಕಾರಿ ಜೊತೆಯೂ ಮಾತನಾಡದೆ, ಸಂಪುಟದಲ್ಲಿ ಚರ್ಚೆ ಮಾಡದೆ, ಸ್ಥಳೀಯರ ಜನಾಭಿಪ್ರಾಯ ಕೇಳದೇ, ವಿರೋಧದ ನಡುವೆಯೂ ಮತ್ತೆ ೪೦ ವರ್ಷಕ್ಕೆ ಗುತ್ತಿಗೆ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ಒಕ್ಕೂಟ ಆರೋಪಿಸಿದೆ.
ಒಕ್ಕೂಟದ ಮುಖಂಡ ಹಾಗೂ ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಕದ್ದು ಮುಚ್ಚಿ ಈ ಒಪ್ಪಂದ ಮಾಡಲಾ ಗಿದೆ. ವಿರೋಧ ಪಕ್ಷಗಳ ಮಾತನ್ನೂ ಕೇಳಿಲ್ಲ. ಬೇನಾಮಿ ಹೆಸರಿನಲ್ಲಿ ಕಾರ್ಖಾನೆಯನ್ನು ತಾವೇ ಆರಂಭ ಮಾಡುವ ಮತ್ತು ಅರಣ್ಯ ಭೂಮಿ ಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ, ರಿಯಲ್ ಎಸ್ಟೇಟ್ ದಂಧೆಗೂ ಕೈಹಾಕುವ ಹುನ್ನಾರ ಇದರಲ್ಲಿ ಅಡಗಿದೆ. ಇದೊಂದು ಮಲೆನಾಡಿಗರಿಗೆ ಮಾಡುವ ದ್ರೋಹವೇ ಆಗಿದೆ ಎಂದರು.
ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ನೈಸರ್ಗಿಕ ಕಾಡು ಕೂಡ ಅಕೇಶಿಯಾ ಬೆಳೆಯುವುದರಿಂದ ಹಾಳಾಗುತ್ತದೆ. ಇದು ತೆರೆಮರೆಯ ಒಪ್ಪಂದವಾಗಿದೆ. ನೀರು, ಕೃಷಿ, ವಿಮಾನ, ರೈಲು, ದೂರವಾಣಿ ಎಲ್ಲವೂ ಖಾಸಗೀಕರಣ ಆಗುತ್ತಿವೆ. ಈಗ ಅರಣ್ಯ ಭೂಮಿಯ ಸರದಿ. ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ ಎಲ್ಲ ಸರ್ಕಾರಗಳು ಆಯಾ ಕಾಲಕ್ಕೆ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ದ್ರೋಹ ಮಾಡುತ್ತಲೇ ಬಂದಿವೆ ಎಂದು ಆರೋಪಿಸಿದರು.
ಅಖಿಲೇಶ್ ಚಿಪ್ಪಳಿ ಮಾತನಾಡಿ, ಈಗ ಲೀಸ್‌ಗೆ ಕೊಟ್ಟಿರುವ ಅರಣ್ಯ ಭೂಮಿಯಲ್ಲಿ ವರ್ಷಕ್ಕೆ ೯ ಕೋಟಿ ಲಾಭ ಬರುತ್ತದೆ. ೧ ಲಕ್ಷ ಎಕರೆಯಲ್ಲಿ ಏಕಜಾತಿಯ ನೆಡುತೋಪುಗಳನ್ನು ಬೆಳೆಸಿದರೆ ಪರಿಸರ ಅದೆಷ್ಟು ಹಾಳಾಗುತ್ತದೆ ಎಂದು ಊಹಿಸಬಹುದು ಎಂದರು.
ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಜನದ್ರೋಹಿ, ನಾಡದ್ರೋಹಿ ಕೆಲಸಗಳಿಂದ ರಾಜ್ಯಕ್ಕೆ ಶುದ್ದ ಪರಿಸರವೇ ಸಿಗದಂತಾಗುತ್ತದೆ. ಇಡೀ ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಯನ್ನೆ ಜಹಗೀರು ಮಾಡಲು ಹೊರಟಿದ್ದಾರೆ ಎಂದರು.
ನಮ್ಮೂರಿಗೆ ಅಕೇಶಿಯಾ ಬೇಡ ಎಂದು ಒತ್ತಾಯಿಸಿ ಸರ್ಕಾರದ ತೀರ್ಮಾನಗಳನ್ನು ಖಂಡಿಸಿ ಜ.೭ ರಂದು ಬೆಳಿಗ್ಗೆ ೧೦.೩೦ಕ್ಕೆ ಅರಣ್ಯಾಧಿಕಾರಿಗಳ ಕಚೇರಿಗೆ (ಸಿಸಿಎಫ್) ಮುತ್ತಿಗೆ ಹಾಕಲಾಗುವುದು ಎಂದು ಒಕ್ಕೂಟ ತಿಳಿಸಿದೆ. ಒಕ್ಕೂಟದ ಪ್ರಮುಖ ರಾದ ಶೇಖರ್ ಗೌಳೇರ್, ಜಿ.ಡಿ. ಮಂಜುನಾಥ್, ಎಂ.ಗುರುಮೂರ್ತಿ, ಚಾರ್ವಕ ರಾಘು ಇನ್ನಿತರರಿದ್ದರು.