ಭವಿಷ್ಯನಿಧಿ: ಜಿಲ್ಲೆಯಲ್ಲಿ 2.50ಕೋಟಿ ರೂ. ಮಂಜೂರು

500

ಶಿವಮೊಗ್ಗ: ಕೋವಿಡ್ 19 ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಸದಸ್ಯರು ತಮ್ಮ ಖಾತೆಯಿಂದ ಮುಂಗಡ ಪಡೆಯಲು ಅವಕಾಶ ಕಲ್ಪಿಸಿ, ಜಾರಿಗೊಳಿಸಿದ್ದ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ 1120 ಮಂದಿ ಸೌಲಭ್ಯ ಪಡೆದಿದ್ದು, ಒಟ್ಟು 2.50 ಕೋಟಿ ರೂ. ಪಡೆದಿದ್ದಾರೆ.
ಕೋವಿಡ್ 19 ರ ಕಾರಣದಿಂದಾಗಿ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಉದ್ಯೋಗದಾತರು ಮತ್ತು ಭವಿಷ್ಯನಿಧಿ ಸದಸ್ಯರ ಅನುಕೂಲಕ್ಕಾಗಿ ಕೆಲವು ಯೋಜನೆಗಳನ್ನು ಜಾರಿಗೊಳಿಸಿದೆ. ಭವಿಷ್ಯನಿಧಿ ಸದಸ್ಯರು ತಮ್ಮ ಖಾತೆಯಲ್ಲಿರುವ ಮೊತ್ತದ ಶೇ.75 ಹಣ ಅಥವಾ ಮೂರು ತಿಂಗಳ ಮೂಲ ವೇತನದ ಮೊತ್ತದಲ್ಲಿ ಯಾವುದು ಕಡಿಮೆಯೋ ಆ ಹಣವನ್ನು ಮುಂಗಡವಾಗಿ ಪಡೆಯಬಹುದಾಗಿದೆ ಮತ್ತು ಈ ಹಣವನ್ನು ಮರುಪಾವತಿಸುವ ಅಗತ್ಯವಿಲ್ಲ. ಈ ಅವಧಿಗೆ ಶಿವಮೊಗ್ಗ ಭವಿಷ್ಯ ನಿಧಿ ಕಛೇರಿ ವ್ಯಾಪ್ತಿಯ 1120 ಸದಸ್ಯರು ಈ ಯೋಜನೆಯ ಲಾಭವನ್ನು ಪಡೆದಿದ್ದು, ಒಟ್ಟು 2.50 ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ವಿ.ಹುಸೇನಪ್ಪ ತಿಳಿಸಿದ್ದಾರೆ.
ಭವಿಷ್ಯ ನಿಧಿ ಯೋಜನೆಯಿಂದ ವಿನಾಯಿತಿ ಪಡೆದ ಇಪಿಎಫ್ ಟ್ರಸ್ಟ್‍ಗಳ ಉದ್ಯೋಗಿಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಶಿವಮೊಗ್ಗದ ಪ್ರಾದೇಶಿಕ ಕಚೇರಿಯ ಅಡಿಯಲ್ಲಿ ಬರುವ ಟ್ರಸ್ಟ್‍ಗಳ 36 ಸದಸ್ಯರ ಒಟ್ಟು 35.74 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ.
ಮಾರ್ಚ್ 2020 ರ ವೇತನವನ್ನು ವಿತರಿಸಿರುವ ಸಂಸ್ಥೆಗಳ ಉದ್ಯೋಗದಾತರಿಗೆ ಬೆಂಬಲ ನೀಡುವ ಉದ್ದೇಶದಿಂದ ಭವಿಷ್ಯನಿಧಿ ಸಂಸ್ಥೆಯು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆದೇಶದ ಮೇರೆಗೆ ಮಾರ್ಚ್ 2020 ರ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ಮತ್ತು ಭವಿಷ್ಯನಿಧಿ ಹಣವನ್ನು ಪಾವತಿಮಾಡುವ ದಿನಾಂಕವನ್ನು ಮೇ15ರವರೆಗೆ ವಿಸ್ತರಿಸಲಾಗಿದೆ.
100 ಕ್ಕಿಂತ ಕಡಿಮೆ ನೌಕರರನ್ನು ಹೊಂದಿರುವ ಮತ್ತು ಅವರಲ್ಲಿ ಶೇ.90 ಉದ್ಯೋಗಿಗಳು 15000 ಕ್ಕಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಲ್ಲಿ, ಅಂತಹ ಉದ್ಯೋಗದಾತರಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ, ಮೂರು ತಿಂಗಳ ಇಪಿಎಫ್ ಮತ್ತು ಇಪಿಎಸ್ ವಂತಿಗೆಯನ್ನು ಸರ್ಕಾರ ಭರಿಸಲಿದೆ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಭವಿಷ್ಯನಿಧಿ ಸಂಸ್ಥೆಯಲ್ಲಿ ನೋಂದಾಯಿಸಲಾದ 1056 ಸಂಸ್ಥೆಗಳು ಈ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಿವೆ ಎಂದು ಅವರು ಹೇಳಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಪಿಂಚಣಿದಾರರ ಕಷ್ಟವನ್ನು ತಗ್ಗಿಸಲು ಮಾರ್ಚ್ 2020 ರ ಪಿಂಚಣಿಯನ್ನು ಮಾರ್ಚ್ ತಿಂಗಳಲ್ಲಿಯೇ ಇಪಿಎಫ್‍ಒ ವಿತರಿಸಿದೆ. 24621 ಪಿಂಚಣಿದಾರರಿಗೆ ಒಟ್ಟು 4.02 ಕೋಟಿ ರೂ.ಗಳನ್ನು 30 ಮಾರ್ಚ್ 2020 ಕ್ಕೆ ವಿತರಿಸಲಾಗಿದೆ.
ಕೋವಿಡ್- 19 ಸಾಂಕ್ರಾಮಿಕ ರೋಗದಿಂದಾಗಿ ಈ ಸವಾಲಿನ ಸಮಯದಲ್ಲಿ ಶಿವಮೊಗ್ಗ ಇಪಿಎಫ್‍ಒ ಕಚೇರಿಯ ಎಲ್ಲಾ ಸಿಬ್ಬಂದಿಗಳು ಶಿವಮೊಗ್ಗ ಮತ್ತು ದಾವಣಗರೆ ಜಿಲ್ಲೆಗಳಾದ್ಯಂತ ಇರುವ ಭವಿಷ್ಯನಿಧಿ ಸದಸ್ಯರ/ ಪಿಂಚಣಿದಾರ ಮತ್ತು ಉದ್ಯೋಗದಾತರ ಸೇವೆಗಾಗಿ ಕಚೇರಿಗೆ ಹಾಜರಿದ್ದು ಒಂದು ತಂಡವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ಸವಲತ್ತುಗಳನ್ನು ಭವಿಷ್ಯನಿಧಿ ಅಡಿಯಲ್ಲಿ ಬರುವ ಸದಸ್ಯರು/ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ವಿ ಹುಸೇನಪ್ಪ ತಿಳಿಸಿದ್ದಾರೆ.
ಭವಿಷ್ಯ ನಿಧಿ ಸಂಸ್ಥೆಯ ಯೋಜನೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಉದ್ಯೋಗದಾತರು / ಉದ್ಯೋಗಿಗಳು EPFO ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಎಂದು ಅವರು ಹೇಳಿದ್ದಾರೆ.