ಬೆಜ್ಜವಳ್ಳಿ ಬಾರ್ ದರೋಡೆ: ಬಯಲಾದ ಸತ್ಯ…

484

ತೀರ್ಥಹಳ್ಳಿ: ಬೆಜ್ಜವಳ್ಳಿ ಸಪ್ತಗಿರಿ ಬಾರ್‌ನ ಬಾಗಿಲು ಒಡೆದು ಮದ್ಯ ಕಳ್ಳತನವಾಗಿದೆಯೆಂದು ಬಾರ್ ಮಾಲೀಕರು ಏ.೨೫ರಂದು ಮಾಳೂರು ಪೊಲೀಸ್ ಠಾಣೆ ಮತ್ತು ಅಬಕಾರಿ ಇಲಾಖೆಗೆ ದೂರು ಸಲ್ಲಿಸಿದ್ದರು.
ಸದರಿ ಪ್ರಕರಣ ಕುರಿತು ಸಂಶಯ ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್ ಅವರು ತೀರ್ಥಹಳ್ಳಿ ತಹಶೀಲ್ದಾರ್ ಡಾ| ಶ್ರೀಪಾದ್‌ರಿಗೆ ಸ್ಥಳ ಪರಿಶೀಲಿಸಲು ಆದೇಶಿಸಿದ್ದರು.
ಶಿವಮೊಗ್ಗ ಅಬಕಾರಿ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್‌ರವರಿಗೆ ಇದು ಕಳ್ಳತನವಲ್ಲ ಇದೊಂದು ಸಂಚು ಎಂದು ಸಂಶಯ ಬಂದ ಹಿನ್ನಲೆಯಲ್ಲಿ ಸದರಿ ಬಾರ್‌ನಲ್ಲಿ ನೌಕರರಾಗಿದ್ದ ಈಶ್ವರ ಬಿನ್ ಮರಿನಾಯ್ಕ ಮತ್ತು ರಾಘವೇಂದ್ರ ಬಿನ್ ಶಂಕರಪ್ಪ ಎಂಬುವರನ್ನು ತನಿಖೆಗೆ ಒಳಪಡಿಸಿದಾಗ ಸದರಿ ಆರೋಪಿಗಳು ಅಕ್ರಮವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡಲು ನಡೆಸಿದ ಸಂಚು ಎಂದು ತಪ್ಪೊಪ್ಪಿಕೊಂಡಿರುತ್ತಾರೆ.
ಸುಮಾರು ನಾಲ್ಕು ಲಕ್ಷ ರೂಪಾಯಿ ಬೆಲೆಯ ಮದ್ಯವನ್ನು ವಶಪಡಿಸಿಕೊಂಡು ಸದರಿ ಬಾರ್‌ಗೆ ಬೀಗ ಜಡಿದು, ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮಾನ್ಯ ನ್ಯಾಯಾಧೀಶರು ಆರೋಪಗಳನ್ನು ಜೈಲಿಗೆ ಕಳುಹಿಸಿ ಆದೇಶಿಸಿದ್ದಾರೆ.
ಈ ಪ್ರಕರಣದ ತನಿಖೆಯಲ್ಲಿ ಸಹಾಯಕ ಅಧಿಕ್ಷಕ ಸಂತೋಷ ಮತ್ತು ನಿರೀಕ್ಷಕ ವೇಣು ಗೋಪಾಲ ಹಾಗೂ ಸಿಬ್ಬಂದಿ, ಮಾಳೂರು ಪೋಲಿಸರು ಭಾಗವಹಿಸಿದ್ದರು.