ಬಂಗಾರಪ್ಪ ವಿರುದ್ಧ ಅವಮಾನಕಾರಿ ಹೇಳಿಕೆ: ಕ್ಷಮೆಯಾಚನೆಗೆ ಆಗ್ರಹ

473

ಸೊರಬ: ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಕುಟುಂಬದಿಂದ ವ್ಯೆಯಕ್ತಿಕ ಲಾಭ ಪಡೆದ ಬಿಜೆಪಿ ಮುಖಂಡ ಮಲ್ಲಕಾರ್ಜುನ ದ್ವಾರಹಳ್ಳಿ ಈಗ ರಾಜಕೀಯ ಲಾಭಕ್ಕಾಗಿ ಅವಹೇಳನ ಮಾಡಿರುವುದು ಖಂಡನೀಯ ಎಂದು ಈಡಿಗ ಸಮಾಜದ ಮುಖಂಡ ಎಂ.ಡಿ. ಉಮೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಈಡಿಗ ಸಮಾಜದ ಮುಖಂಡರು ಹಮ್ಮಿಕೊಂಡ ಖಂಡನಾ ಸಭೆಯಲ್ಲಿ ಮಾತನಾಡಿದರು.
ಬಂಗಾರಪ್ಪ ಅವರು ಅಧಿಕಾರ ದಲ್ಲಿzಗ ಅವರ ಚೇಲಗಳಾಗಿ ವ್ಯೆಯಕ್ತಿಕ ಲಾಭ ಪಡೆದುಕೊಂಡ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಅವರು ಇಂದು ನೀರಾವರಿ ಹೆಸರಿನಲ್ಲಿ ಬಂಗಾರಪ್ಪ ಹಾಗೂ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರ ಪತ್ನಿ ಗೀತಾ ಅವರು ಜಿಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಗಮನ ನೀಡಿಲ್ಲ. ಧೀಮಂತ ನಾಯಕ ಬಂಗಾರಪ್ಪ ಅವರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ವೈ.ಜಿ. ಪುಟ್ಟಸ್ವಾಮಿ ಮಾತನಾಡಿ, ಹಿಂದುಳಿದ ವರ್ಗಕ್ಕೆ ಶಕ್ತಿಯಾಗಿ ಶ್ರಮಿಸಿದ ಬಂಗಾರಪ್ಪ ಅವರು ಆಲದ ಮರವಿದ್ದಂತೆ. ಅವರು ಜಾರಿಗೊಳಿಸಿದ ಜನಪರ ಯೋಜನೆ ಗಳು ಇಂದಿಗೂ ಮುಂದುವರೆದಿವೆ. ತಾಲ್ಲೂಕಿನ ಅಭಿವೃದ್ಧಿಗಾಗಿ ಹಾಗೂ ಬಡವರ ಏಳಿಗೆಗಾಗಿ ಕೊನೆಯತನಕ ಶ್ರಮಿಸಿದ ಜನನಾಯಕನ ಬಗ್ಗೆ ಬಿಜೆಪಿ ಮುಖಂಡರು ಟೀಕಿಸಿರುವುದು ಮೂರ್ಖತನದ ಪರಮಾವಧಿಯಿಂದ ಕೂಡಿದೆ. ಕೂಡಲೇ ತಮ್ಮ ತಪ್ಪು ಅರಿತು ಬೇಷರತ್ ಕ್ಷಮೆಯಾಚಿಸಬೇಕು ಎಂದರು.
ಬರದವಳ್ಳಿ ಸೋಮಶೇಖರ್ ಮಾತನಾಡಿ, ಬಂಗಾರಪ್ಪ ಅವರು ಈ ನಾಡಿನ ಎಲ್ಲ ವರ್ಗದ ಮನೆ ಮನದಲ್ಲಿ ನೆಲೆಸಿದ್ದು, ಅವರ ಮೇಲೆ ಅವಹೇಳನಾಕಾರಿಯಾಗಿ ಮಾತನಾಡಿ ರುವ ಬಿಜೆಪಿ ಮುಖಂಡರ ವರ್ತನೆ ಖಂಡನೀಯ. ಬಂಗಾರಪ್ಪ ಅವರ ಅಭಿಮಾನಿಗಳು ರಾಜ್ಯದಾದ್ಯಂತ ಹೇಳಿಕೆ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿದ್ದು ತಕ್ಷಣವೇ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಈಡಿಗ ಸಮಾಜದ ಮುಖಂಡ ರಾದ ನಾಗರಾಜ ಚಿಕ್ಕಸವಿ, ಆನಂದಪ್ಪ ಕುಪ್ಪಗಡ್ಡೆ, ಹನುಮಂತಪ್ಪ ಓಟೂರು, ಲಕ್ಷ್ಮಣಪ್ಪ ನಡಹಳ್ಳಿ, ಚಂದ್ರಪ್ಪ ಟಿಜಿಕೊಪ್ಪ, ರಮೇಶ್, ಶಿವಕುಮಾರ್ ಕಡಸೂರು, ಪರಸಪ್ಪ, ಪರಮೇಶ್ ಮಣ್ಣೆತ್ತಿ, ಜನಕಪ್ಪ, ಯಂಕೇನ್ ಹೂವಪ್ಪ ಇದ್ದರು.