ಪ್ರವಾಸಿ ತಾಣವಾಗಿ ರಾಗಿಗುಡ್ಡ: ತಜ್ಞರಿಂದ ಸ್ಥಳ ಪರಿಶೀಲನೆ

370

ಶಿವಮೊಗ್ಗ: ರಾಗಿಗುಡ್ಡವನ್ನು ಪ್ರವಾಸಿ ತಾಣವನ್ನಾಗಿಸಲು ಸರ್ಕಾರ ಮುಂದಾಗಿದ್ದು, ರಾಗಿಗುಡ್ಡದ ಸುತ್ತಲೂ ಜೈವಿಕ ವನದ ನಿರ್ಮಾಣ ಹಾಗೂ ತುಂಗಾ ಮೇಲ್ದಂಡೆಯ ಯೋಜನೆಯ ಕಾಲುವೆಯ ಎರಡೂ ಭಾಗಗಳಲ್ಲಿ ಸುಮಾರು ೧೦ ಕಿ.ಮೀ. ವಿಸ್ತೀರ್ಣದಲ್ಲಿ ಗಿಡಗಳನ್ನು ನೆಡುವುದು, ಫೆನ್ಸಿಂಗ್ ಹಾಗೂ ವಾಕಿಂಗ್ ಪಾಥ್ ಮತ್ತು ಸೈಕಲ್ ಪಾಥ್ ನಿರ್ಮಾಣ , ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿ ಯಿಂದ ಅಭಿವೃದ್ಧಿ ಕಾರ್ಯಗಳು, ಕಾಲುವೆಗೆ ಹ್ಯಾಂಗಿಂಗ್ ಬ್ರಿಡ್ಜ್ ನಿರ್ಮಾಣವಾಗಲಿದೆ.
ಇದಕ್ಕಾಗಿ ಇಂದು ರಾಗಿಗುಡ್ಡ ಹಾಗೂ ತುಂಗಾ ಮೇಲ್ದಂಡೆಯ ಕಾಲುವೆಯ ಸ್ಥಳ ಪರಿಶೀಲನೆಗೆ ತಜ್ಞರ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ಡ್ರೋನ್ ಮೂಲಕ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಪೂರಕ ವಾದ ಅಂಶಗಳನ್ನು ಗುರುತಿಸಿತು.
ಈ ಸಂದರ್ಭದಲ್ಲಿ ನಗರದ ಉತ್ತಿಷ್ಠ ಭಾರತ ಮಲೆನಾಡು ಸಿಹಿಮೊಗ್ಗೆ ಕ್ರಿಕೆಟ್ ಅಕಾಡೆಮಿ ಮತ್ತು ಪರಿಸರ ಆಸಕ್ತ ತಂಡಗಳು ತಜ್ಞರಿಗೆ ಸಾಥ್ ನೀಡಿದವು. ಮೊದಲ ಹಂತ ದಲ್ಲಿ ರಾಗಿಗುಡ್ಡದಲ್ಲಿ ಸುಮಾರು ೩ ಕೋಟಿ ರೂ. ವೆಚ್ಚದಲ್ಲಿ ಜೈವಿಕ ವನ ನಿರ್ಮಾಣ ಮತ್ತು ಗುಡ್ಡದ ಮೇಲೆ ಸೂರ್ಯಾಸ್ಥ ವೀಕ್ಷಣೆ, ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಇದೊಂದು ಆಕ್ಸಿಜನ್ ವಲಯ ವಾಗಬೇಕೆನ್ನುವ ಪರಿಸರಾಸಕ್ತರ ಬೇಡಿಕೆಗೆ ರಾಜ್ಯ ಸರ್ಕಾರ ವಿಶೇಷ ವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಆಸಕ್ತಿ ವಹಿಸಿದ್ದು, ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೆ.ಇ.ಕಾಂತೇಶ್, ಪರಿಸರ ತಜ್ಞರಾದ ಬಿ.ಎಂ. ಕುಮಾರಸ್ವಾಮಿ, ಪ್ರೊ. ಶ್ರೀಪತಿ, ಪ್ರೊ. ಚಂದ್ರಶೇಖರ್, ಡಿ.ಎಫ್.ಓ ಶಂಕರ್, ನೀರಾವರಿ ನಿಗಮದ ಅಧಿಕಾರಿಗಳು, ಎಡಬ್ಲ್ಯೂಇ ಪ್ರವೀಣ್, ನವ್ಯಶ್ರೀ ನಾಗೇಶ್, ಪ್ರಕಾಶ್, ಬಾಲಕೃಷ್ಣ ನಾಯ್ಡು, ಹಾಗೂ ಉತ್ತಿಷ್ಠ ಭಾರತ ಮಲೆನಾಡು ಸಿಹಿಮೊಗ್ಗೆ ಕ್ರಿಕೆಟ್ ಅಕಾಡೆಮಿಯ ಸದಸ್ಯರು ಪರಿಸರಾಸಕ್ತರು ಉಪಸ್ಥಿತರಿದ್ದರು.