ಪ್ರತಿ ವಾರ್ಡಿಗೆ ೧೦೦೦ ಆಹಾರ ಪೊಟ್ಟಣ ವಿತರಣೆಗೆ ನಿರ್ಣಯ

504

ಶಿವಮೊಗ್ಗ: ಕೊರೋನ ವೈರಸ್ ಸೋಂಕಿನಿಂದಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವುದು ಜನಜೀವನದ ಸುಧಾರಣಾ ಕ್ರಮವಾದರೂ ದೈನಂದಿನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಬಡವರು, ಶ್ರಮಿಕರು, ಕಾರ್ಮಿಕರು, ಫುಟ್‌ಪಾತ್ ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರು ಹೊಟ್ಟೆಪಾಡಿಗಾಗಿ ಪರಿತಪಿಸುತ್ತಿದ್ದು ಅವರ ನೆರವಿಗೆ ಧಾವಿಸುವ ಅಗತ್ಯವಿದೆ. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡಿಗೆ ಪಾಲಿಕೆ ವತಿಯಿಂದ ೧೦೦೦ ಆಹಾರದ ಪೊಟ್ಟಣಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಮಹಾನಗರಪಾಲಿಕೆಯು ಇಂದು ಒಮ್ಮತದ ನಿರ್ಣಯ ಕೈಗೊಂಡಿದೆ.
ಇಂದು ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಕೊರೋನ ವೈರಸ್ ನಿಯಂತ್ರಣ ಕಾರ್ಯದಲ್ಲಿ ಮಹಾನಗರಪಾಲಿಕೆ ವತಿಯಿಂದ ಕೈಗೊಳ್ಳಲಾದ ತುರ್ತು ಕ್ರಮಗಳ ಕುರಿತು ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಈ ರೋಗ ನಿಯಂತ್ರಿಸುವ ಕಾರ್ಯದ ಭಾಗವಾಗಿ ಪಾಲಿಕೆ ಅಧಿಕಾರಿ-ಸಿಬ್ಬಂಧಿಗಳು, ವಿಶೇಷವಾಗಿ ಪೌರಕಾರ್ಮಿಕರು ಕಸ ಸಂಗ್ರಹಣೆ, ಔಷಧ ಸಿಂಪರಣೆ, ಇನ್ನು ಮುಂತಾದ ಕಾರ್ಯಗಳಿಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದು ಮಹಾನಗರಪಾಲಿಕೆ ಸದಸ್ಯ ಚನ್ನಬಸಪ್ಪ ಅವರು ಹೇಳಿದರು.
ನಗರದ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕಾರ್ಮಿಕ ಕಲ್ಯಾಣ ನಿಧಿಯಿಂದ ಅಗತ್ಯ ನೆರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯ ಯಾವುದೇ ಒಬ್ಬ ವ್ಯಕ್ತಿಯೂ ಹಸಿವಿನಿಂದ ಸಾವನ್ನಪ್ಪಿದರೆ ಪಾಲಿಕೆ ಹೊಣೆಯಾಗಲಿದೆ ಎಂದು ರಮೇಶ್ ಹೆಗಡೆ ಅವರು ಹೇಳಿದರು.
ನಗರದ ಕಸ ಸಮರ್ಪಕ ವಿಲೇವಾರಿ ಮಾಡಲು ಈಗಿರುವ ಸಿಬ್ಬಂಧಿ ಸಾಕಾಗದು. ಅದಕ್ಕಾಗಿ ಹೆಚ್ಚುವರಿಯಾಗಿ ೨೫ಸಿಬ್ಬಂಧಿಯನ್ನು ನೇಮಿಸಿಕೊಳ್ಳಬೇಕು ಎಂದು ಮಹಾನಗರಪಾಲಿಕೆ ವಿಪಕ್ಷ ನಾಯಕ ಯೋಗೀಶ್ ಹೆಚ್.ಸಿ. ಅವರು ಹೇಳಿದರು.
ಸಭೆಯ ಆರಂಭದಲ್ಲಿ ಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಅವರು ಮಾಹಿತಿ ನೀಡಿ, ಈವರೆಗೆ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಲ್ಲದೇ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೇ ಪಾಲಿಕೆಯ ಪೌರಕಾರ್ಮಿಕರಿಗೆ ಮಾಸ್ಕ್, ಕೈಗವಸು ಮುಂತಾದವುಗಳನ್ನು ವಿತರಿಸಲಾಗಿದೆ. ನಗರದಾದ್ಯಂತ ಸ್ವಚ್ಚತೆಗೆ ಆದ್ಯತೆ ನೀಡಿದ್ದು, ಔಷಧ ಸಿಂಪಡಿಸಲಾಗಿದೆ. ಅಲ್ಲದೆ ಮುಂದಿನ ಮೂರು ತಿಂಗಳಿಗೆ ಬೇಕಾಗುವಷ್ಟು ಔಷಧಗಳನ್ನು ಖರೀರಿಸಲಾಗಿದೆ ಎಂದವರು ನುಡಿದರು.
ಸತತವಾಗಿ ಶ್ರಮಿಸುತ್ತಿರುವ ಪಾಲಿಕೆಯ ಪೌರಕಾರ್ಮಿಕರ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. ವಲಸೆ ಕಾರ್ಮಿಕರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಿ ಪ್ರತಿನಿತ್ಯ ಆಹಾರ ನೀಡಲಾಗುತ್ತಿದೆ. ಸುರಕ್ಷತಾ ಕ್ರಮವಾಗಿ ಜಾತ್ರೆ, ಸಂತೆ, ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮಹಾಪೌರರು ಸೇರಿದಂತೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸಭೆಗಳನ್ನು ಆಯೋಜಿಸಿ ಮಹತ್ವದ ನಿರ್ಣಯಗಳನ್ನು ಕೈಗೊಂಡು ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಮಹಾಪೌರರಾದ ಶ್ರೀಮತಿ ಸುವರ್ಣ ಶಂಕರ್, ಉಪಮೇಯರ್ ಶ್ರೀಮತಿ ಸುರೇಖಾ ಮುರಳೀಧರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಸೇರಿದಂತೆ ಮಹಾನಗರಪಾಲಿಕೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.