ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

452

ಶಿವಮೊಗ್ಗ: ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ನಿಂದಿಸಿ ಅವಮಾನ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕ್ಷುಲ್ಲಕ ಪಾರ್ಕಿಂಗ್ ವಿಚಾರಕ್ಕೆ ಹೋರಾಟಗಾರ ಅಶೋಕ್‌ರನ್ನು ನಿಂದಿಸಿ ಅವಮಾನ ಮಾಡಿರುವುದು ಖಂಡನೀಯ ಎಂದರು.
ಕೊಪ್ಪ ಠಾಣೆಯ ಉಪ ಆರಕ್ಷಕ ನಿರೀಕ್ಷಕ ರವಿ ಮತ್ತು ಪೊಲೀಸ್ ಆರ್. ರಮೇಶ್ ಉದ್ದೇಶಪೂರ್ವಕವಾಗಿ ಕೆ.ಎಲ್. ಅಶೋಕ್ ಅವರನ್ನು ಅವಮಾನ ಮಾಡಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸೆ.೭ ರಂದು ಕೆ.ಎಲ್.ಅಶೋಕ್ ಕುಟುಂಬ ಸಮೇತರಾಗಿ ವೈಯಕ್ತಿಕ ಕಾರಣಕ್ಕೆ ಕೊಪ್ಪಕ್ಕೆ ಭೇಟಿ ನೀಡಿದ್ದಾರೆ. ತಮ್ಮ ವಾಹನವನ್ನು ಸರಿಯಾಗಿ ಪಾರ್ಕ್ ಮಾಡಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಅವಮಾನ ಮಾಡಲಾಗಿದೆ. ಅಶೋಕ್ ಅವರೇ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದು ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ದಂಡ ಕಟ್ಟಲು ಮುಂದಾದರೂ ಅದಕ್ಕೆ ಅವಕಾಶ ಕೊಡದೇ ಠಾಣೆಗೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಪ್ರಮುಖ ರಾದ ಕೆ.ಪಿ.ಶ್ರೀಪಾಲ್, ಅಶೋಕ್ ಯಾದವ್, ಆರ್.ಕುಮಾರ್, ಶಿವ ಕುಮಾರ್, ಹೊನ್ನಾಳಿ ಚಂದ್ರಶೇಖರ್, ವಿಶ್ವನಾಥ ಕಾಶಿ, ಬಾಲಣ್ಣ, ರಾಜೇಂದ್ರ, ಚಿನ್ನಯ್ಯ ಇನ್ನಿತರರು ಭಾಗವಹಿಸಿದ್ದರು.