ಪುಟ್ಟ ಕಂದಮ್ಮಳನ್ನು ತಾಯಿ ಮಡಿಲು ಸೇರಿಸಿದ ಕರೋನಾ ವಾರಿಯರ್ಸ್…

483

ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜರಿಗೊಳಿಸಿರುವ ಲಾಕ್ ಡೌನ್‌ನಿಂದಾಗಿ ಕಳೆದೊಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಹೃದ್ರೋಗ ಸಮಸ್ಯೆಯಿರುವ ಐದು ವರ್ಷದ ಪುಟ್ಟ ಬಾಲಕಿಯನ್ನು ನಗರ ಜಿಲ್ಲಾಡಳಿತ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆದೊಯ್ದು ಮಾನವೀಯತೆ ಮರೆದಿದೆ.
ಬಾಲಕಿಯ ತಾಯಿ ನಳಿನಿ ಆಶಾ ಕಾರ್ಯಕರ್ತೆಯಾಗಿದ್ದು, ಶಿವಮೊಗ್ಗದಲ್ಲಿ ಕೊವಿಡ್ ೧೯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಈಕೆಯ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಐದು ವರ್ಷದ ದರ್ಶಿನಿಯನ್ನು ಕೊರೋನಾ ವಾರಿಯರ್ಸ್ ಗಳಾದ ಮಯೂರ್ ಮತ್ತು ಭರತ್ ಅವರ ಮೂಲಕ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರ ಹೊಂದಿದ್ದ ದರ್ಶನಿ ಲಾಕ್ ಡೌನ್‌ಗೂ ಒಂದು ವಾರ ಮುಂಚೆ ಬೆಂಗಳೂರಿನ ನಳಿನಿ ಅವರ ಸಹೋದರಿ ಮನೆಗೆ ಬಂದಿದಳು. ಕಳೆದೊಂದು ತಿಂಗಳಿಂದ ಮಗಳನ್ನು ಕರೆಸಿಕೊಳ್ಳಲು ತಾಯಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಒಂದೆಡೆ ಕೋವಿಡ್ ೧೯ ಚಟುವಟಿಕೆಯಲ್ಲಿ ತೊಡಗಿಗೊಂಡಿದ್ದರಿಂದ ಸ್ವತಃ ಬರಲು ಸಾಧ್ಯವಾಗಿರಲಿಲ್ಲ.
ಹೃದಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ದರ್ಶಿನಿ ತಮ್ಮ ಹೆತ್ತವರನ್ನು ಸೇರಬೇಕು ಎಂದು ನಿರಂತರವಾಗಿ ಅಳುತ್ತಿದ್ದಳು. ಈಕೆಯ ಅಳು ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವುದಾಗಿ ವೈದ್ಯರು ಸಹ ಎಚ್ಚರಿಕೆ ನೀಡಿದ್ದರು.
ಜಿಲ್ಲಾಧಿಕಾರಿ ಅವರು ತಕ್ಷಣವೇ ಕೊರೋನಾ ವಾರಿಯರರ್ಸ್ ಮುಖ್ಯಸ್ಥರಾದ ಕ್ಯಾಪ್ಟನ್ ಮಣಿವಣ್ಣನ್ ಅವರ ಮೂಲಕ ವಾರ್ತಾ ಇಲಾಖೆಯಡಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ಸೈನಿಕರಾದ ಮಯೂರ್ ಮತ್ತು ಭರತ್ ಅವರ ಜತೆ ಬಾಲಕಿಯನ್ನು ಶಿವಮೊಗ್ಗದ ಅವರ ಮನೆಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.