ಪಿಂಚಣಿ ಬಾಕಿಗೆ ಆಗ್ರಹಿಸಿ ಪ್ರತಿಭಟನೆ

471

ಶಿವಮೊಗ್ಗ: ವಿವಿಧ ಪಿಂಚಣಿ ದಾರರಿಗೆ ತಕ್ಷಣ ಬಾಕಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೃದ್ದಾಪ್ಯ, ವಿಧವೆ, ಅಂಗವಿಕಲ ವೇತನ, ಮನಸ್ವಿನಿ ಮೈತ್ರಿ, ಸಂಧ್ಯಾ ಸುರಕ್ಷಾ ಹೀಗೆ ಅನೇಕ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಪಡೆಯುತ್ತಿರುವ ಪಿಂಚಣಿದಾರರಿಗೆ ಕಳೆದ ೭-೮ ತಿಂಗಳುಗಳಿಂದ ಪಿಂಚಣಿ ಹಣ ಸಂದಾಯವಾಗಿಲ್ಲ ಇದರಿಂದ ಪಿಂಚಣಿದಾರರು ಜೀವನ ನಡೆಸುವುದು ದುಸ್ತರವಾಗಿದೆ. ರಾಜ್ಯದಲ್ಲಿ ಸುಮಾರು ೩ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಸ್ಥಗಿತಗೊಂಡಿದೆ ಎಂದು ದೂರಿದರು.
ಪಿಂಚಣಿ ಪಡೆಯಲು ನಾಡಕಛೇರಿ, ತಾಲ್ಲೂಕು ಕಚೇರಿ ಸಂಬಂಧಪಟ್ಟ ಅಧಿಕಾರಿಗಳನ್ನು ಗೋಗರೆಯುತ್ತಿರುವುದು ಪ್ರತಿ ದಿವಸ ಕಾಣುತ್ತಿದ್ಧೇವೆ. ಪಿಂಚಣಿದಾರರು ಅಲೆದಾಡಿದರೂ ಸಹ ಪಿಂಚಣಿ ಸಿಗುತ್ತಿಲ್ಲ. ಕೆಲವು ಕಚೇರಿಗಳಲ್ಲಿ ತಂತ್ರಾಂಶ ಅಪ್‌ಡೇಟ್ ಆಗದೆ ದೂರದಿಂದ ಬಂದಂತಹ ಪಿಂಚಣಿದಾರರಿಗೆ ತೀವ್ರ ತೊಂದರೆ ಯಾಗುತ್ತಿದ್ದು ಇದರಿಂದ ತಮ್ಮ ಹಳ್ಳಿಗಳಿಗೆ ಹೋಗಲು ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಪಿಂಚಣಿದಾರರು ತಮ್ಮ ಜೀವನ ನಡೆಸುವುದೇ ಅಸಾಧ್ಯವಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರ ವಾಗಿ ಪರಿಗಣಿಸಿ ಇದರ ಜೊತೆಯಲ್ಲಿ ಈಗಾಗಲೇ ಪಿಂಚಣಿ ಪಾವತಿಸುವ ಕುರಿತು ಆದೇಶ ಪತ್ರ ನೀಡಿ ೨-೩ ವರ್ಷ ಆಗಿದೆ. ಹಾಗಾಗಿ ಪಿಂಚಣಿಗೆ ಸಂಬಂಧಿಸಿದ ಈ ಎರಡೂ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಪಿಂಚಣಿ ಹಣ ನೀಡುವುದರ ಜೊತೆಯಲ್ಲಿ ನೂತನವಾಗಿ ಪಿಂಚಣಿ ಆದೇಶ ಪತ್ರ ನೀಡಿರುವ ಫಲಾನುಭವಿಗಳಿಗೂ ಒಂದೇ ಕಂತಿನಲ್ಲಿ ಹಣ ನೀಡಬೇಕು ಎಂದು ಸರ್ಕಾರಕ್ಕೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಲೀಂಖಾನ್, ಅಲ್ಲಾಭಕ್ಷ್, ಮುಜೀಬ್, ಇಮ್ರಾನ್, ಫೈರೊಜ್ ಖಾನ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶಪ್ಪ ಸೇರಿದಂತೆ ಹಲವರಿದ್ದರು.