ಪತ್ರಕರ್ತರು ಆರೋಗ್ಯದ ಕುರಿತು ಎಚ್ಚರಿಕೆಯಿಂದಿರಿ: ಪ್ರಸನ್ನಕುಮಾರ್

445

ಶಿವಮೊಗ್ಗ: ಪತ್ರಕರ್ತರಿಗಾಗಿ ಬಿಡುಗಡೆ ಮಾಡಿರುವ ಬೆಂಗಳೂರು ಮಣಿಪಾಲ್ ಹಾಸ್ಪಿಟಲ್‌ನ ಆರೋಗ್ಯ ಕಾರ್ಡನ್ನು ಇಂದು ವಾರ್ತಾ ಇಲಾಖೆ ಮಿನಿ ಥಿಯೇಟರ್‌ನಲ್ಲಿ ಆಯೋಜಿಸ ಲಾಗಿದ್ದ ಸರಳ ಸಮಾರಂಭದಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಮಣಿಪಾಲ್ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಕೊರೋನಾ ಎಲ್ಲೆಡೆ ಭೀತಿ ತಂದಿದೆ. ಇಂತಹ ವಾತಾವರಣ ದಲ್ಲಿ ಪತ್ರಕರ್ತರು ಕೆಲಸ ಮಾಡಬೇಕಾಗಿದೆ. ಅನಿವಾರ್ಯವಾಗಿ ಅವರು ಎಲ್ಲ ಕಡೆ ವರದಿಗಾಗಿ ಓಡಾಡಬೇಕು. ಅವರ ಆರೋಗ್ಯ ಚೆನ್ನಾಗಿರಬೇಕು ಎಂದರು.
ಮಣಿಪಾಲ್ ಆಸ್ಪತ್ರೆಯವರು ಪತ್ರಕರ್ತರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಬಿಡುಗಡೆ ಮಾಡಿರುವ ಆರೋಗ್ಯ ಕಾರ್ಡ್ ತುಂಬಾ ಮಹತ್ವ ವಾಗಿದ್ದು, ಇದಕ್ಕಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ಅಭಿನಂದನೆಗಳು ಎಂದರು.
ವಿಶೇಷವಾಗಿ ಪತ್ರಕರ್ತರು ಎಚ್ಚರಿಕೆಯಿಂದ ಇರಬೇಕು. ಇಂದು ಆರೋಗ್ಯವೇ ಭಾಗ್ಯ ಎಂಬ ಪರಿಸ್ಥಿತಿ ಇದೆ. ಪತ್ರಕರ್ತರಿಗೆ ಇದಕ್ಕಾಗಿ ಇರುವ ಸೌಲಭ್ಯಗಳು ತುಂಬಾ ಕಡಿಮೆ. ನಿವೃತ್ತಿಯಾದ ಮೇಲಂತೂ ಸೌಲಭ್ಯಗಳು ಸಿಗುವುದೇ ಇಲ್ಲ. ಸರ್ಕಾರ ಪತ್ರಕರ್ತರ ಕಲ್ಯಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಬೆಂಗಳೂರು ಮಣಿಪಾಲ್ ಆಸ್ಪತ್ರೆಯಿಂದ ಆನ್‌ಲೈನ್ ಮೂಲಕ ಡಾ.ರಂಜನ್ ಶೆಟ್ಟಿ, ಕೊರೋನಾಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕೊರೋನಾದ ಬಗ್ಗೆ ಹೆದರಿಕೆ ಬೇಡ, ಆದರೆ ಎಚ್ಚರಿಕೆಯಂತೂ ಖಂಡಿತಾ ಬೇಕು. ಶೇ.೯೦ರಷ್ಟು ಜನರಿಗೆ ಇದರಿಂದ ಯಾವುದೇ ತೊಂದರೆ ಯಾಗುವುದಿಲ್ಲ. ಇನ್ನುಳಿದ ಶೇ.೧೦ರಷ್ಟರಲ್ಲಿಯು ಕೂಡ ಮರಣದ ಪ್ರಮಾಣ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು, ಕಾಯಿಲೆ ಲಕ್ಷಣ ಕಂಡುಬಂದರೆ ಬೇಗನೆ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಸಮಯೋಚಿತ ಮತ್ತು ಸಮರ್ಪಕ ಚಿಕಿತ್ಸೆಯಿಂದ ಜೀವ ಉಳಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತ ಮೆಟ್ರೋ ಆಸ್ಪತ್ರೆಯ ಡಾ.ಪೃಥ್ವಿ, ವಾರ್ತಾಧಿಕಾರಿ ಶಫಿ ಸಾದುದ್ದೀನ್, ಡಾ.ಶಿವಶಂಕರ್, ಮಣಿಪಾಲ್ ಆಸ್ಪತ್ರೆ ಸಂಚಾಲಕ ಅರುಣ್, ಡಾ.ಅಮೃತ್, ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.