ನಿಷೇಧಾಜ್ಞೆ ಮುಂದುವರಿಕೆ

386

ಶಿವಮೊಗ್ಗ: ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಸಧ್ಯಕ್ಕೆ ತಹಬಂದಿಗೆ ಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಡಿ.೭ರ ಬೆಳಿಗ್ಗೆ ವರೆಗೆ ೧೪೪ ಸೆಕ್ಷನ್ ಮುಂದುವರೆಸಲಾಗಿದೆ.
ಅಲ್ಲದೆ ಕೋಟೆ ಠಾಣೆ, ದೊಡ್ಡಪೇಟೆ ಠಾಣೆ ಹಾಗೂ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂವನ್ನು ಡಿ.೭ರ ಬೆಳಿಗ್ಗೆವರೆಗೆ ಮುಂದುವರೆಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ನಗರದ ಜನರಲ್ಲಿ ಉಂಟಾಗಿರುವ ಆತಂಕ ನಿವಾರಿಸುವ ಹಿನ್ನಲೆಯಲ್ಲಿ ಹಾಗೂ ಪ್ರಕ್ಷುಬ್ದ ವಾತಾವರಣ ನಿರ್ಮಿಸಲು ಉದ್ದೇಶಿಸಿರುವವರಿಗೆ ಎಚ್ಚರಿಸಲು ಇಂದು ಜಿಲ್ಲಾ ಪೊಲೀಸ್ ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಮಾಡಲಾಯಿತು.
ಇಂದು ಬೆಳಿಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟು ಅಘೋಷಿತ ಬಂದ್ ರೀತಿ ಕಂಡು ಬಂತು.
ನಗರ ಸಾರಿಗೆ ಹಾಗೂ ವಾಹನ ಸಂಚಾರ ಕಡಿಮೆಯಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ದೂರದ ಊರಿಗೆ ಸಂಚರಿಸಿದವು.
ಹಳೆ ಶಿವಮೊಗ್ಗ ವ್ಯಾಪ್ತಿಯಲ್ಲಿ ಹಾಗೂ ಕೆಲವೆಡೆ ಬೆರಳೆಣಿಕೆ ಅಂಗಡಿ ತೆರೆಯಲ್ಪಟ್ಟಿದ್ದವು. ಮುಖ್ಯರಸ್ತೆಗಳಲ್ಲಿ ತೆರೆಯಲಾಗಿದ್ದ ಅಂಗಡಿಗಳನ್ನು ಪೊಲೀಸರೇ ಮುಚ್ಚಿಸಿದರು.
ನಗರದ ಹೃದಯ ಭಾಗವಾದ ಗಾಂಧಿ ಬಜಾರ್, ನೆಹರು ರಸ್ತೆ, ಬಿ.ಹೆಚ್. ರಸ್ತೆಗಳ ಅಂಗಡಿಗಳು ತೆರೆಯದೆ ಬಿಕೋ ಎನ್ನುತ್ತಿದ್ದವು.
ಇದು ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಬಂದು ಕರೆ ನೀಡಿದ್ದಕ್ಕೆ ಪೂರಕವಾಗಿ ಒಂದು ರೀತಿಯಲ್ಲಿ ಶಿವಮೊಗ್ಗ ನಗರದಲ್ಲಿ ಸಂಪೂರ್ಣ ಬಂದ್ ವಾತಾವರಣವೇ ಇತ್ತು.
ಇಂದು ಹಾಲಿನ ಬೂತ್, ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು, ತರಕಾರಿ ಹಾಗೂ ಹಣ್ಣಿನ ಮಾರಾಟ ಎಂದಿನಂತೆ ಕಾರ್ಯ ನಿರ್ವಹಿಸಿದವು.
ಪೊಲೀಸರು ಇಂದು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದದ್ದು ಕಂಡು ಬಂತು. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮುಂದುವರೆದಿತ್ತು. ನಗರದಾದ್ಯಂತ ಪೊಲೀಸ್ ವಾಹನಗಳ ಗಸ್ತು ಮುಂದುವರೆದಿದ್ದು, ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆ ಮಾಡಲಾಗುತ್ತಿದೆ. ನಗರದ ಗಡಿಯಲ್ಲಿ ವಿಶೇಷ ತಪಾಸಣೆ ಸಹ ನಡೆಯುತ್ತಿದೆ.
ಐಜಿಪಿ ರವಿ ನಗರದಲ್ಲೇ ಮೊಕ್ಕಾಂ ಹೂಡಿದ್ದು, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ಮತ್ತು ಜಿಲ್ಲಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ನಗರವನ್ನು ಶಾಂತಸ್ಥಿತಿಗೆ ತರಲು ಎಲ್ಲಾರೀತಿಯ ಕ್ರಮ ಕೈಗೊಳ್ಳಲಾಗಿದೆ.
ಕರೋನದಿಂದ ತಿಂಗಳುಗಟ್ಟಲೇ ಅಂಗಡಿಗಳನ್ನು ಮುಚ್ಚಿ ವ್ಯಾಪಾರ ನಷ್ಟ ಮಾಡಿಕೊಂಡಿದ್ದ ವರ್ತಕರಿಗೆ ಈಗ ಮತ್ತೆ ನಗರದಲ್ಲಿ ಸೆಕ್ಷನ್ ಜಾರಿ ಮಾಡಿ ಅಂಗಡಿಗಳನ್ನು ಮುಚ್ಚಿಸಿರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.