ನಾವೂ ಜೊತೆಗಿದ್ದೇವೆ ನಾವಿದ್ದೇವೆ; ಆದರೆ….

513

ಶಿವಮೊಗ್ಗ: ಪ್ರಧಾನಿ ಮೋದಿ ಘೋಷಿಸಿದಂತೆ ಇಂದಿನಿಂದ ಮೂರನೇ ಹಂತದಲ್ಲಿ ಕೊರೋನ ವೈರಸ್ ವಿರುದ್ಧ ದೇಶ ಹೋರಾಟಕ್ಕಿಳಿದಿದೆ. ಆದರೆ ಪಿಪಿಇ ಕಿಟ್‌ನ ಮೂಲಕ ಜನರ ಆರೋಗ್ಯ ತಪಾಸಣೆ ನಡೆಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.
ನಗರದ ಪ್ರೆಸ್‌ಟ್ರಸ್ಟ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕೇವಲ ಲಾಕ್‌ಡೌನ್ ವಿಸ್ತರಣೆ ಕುರಿತಂತೆ ಸಿಎಂಗಳ ಸಂವಾದದಲ್ಲಿ ಕೊರೋನ ಬಗ್ಗೆ ಮಾತನಾಡುತ್ತಾರೆ. ಆದರೆ ಪಿಪಿಇ ಕಿಟ್‌ಗಳ ಖರೀದಿಯನ್ನ ಹಾಗೂ ಎಷ್ಟು ಜನರಿಗೆ ವಿತರಿಸಬೇಕು ಎಂಬ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಚೀನಾದಿಂದ ಖರೀದಿಸಿದ ಕಿಟ್ ಗಳಲ್ಲಿ ನಷ್ಟವುಂಟಾಗಿದೆ. ಕೆಲ ಬಿಜೆಪಿ ನಾಯಕರು ಕಿಟ್‌ನಲ್ಲಿ ಹಗರಣ ಮಾಡಿರುವ ಆರೋಪ ಕೇಳಿಬರುತ್ತಿದೆ ಇದರ ಬಗ್ಗೆ ಪ್ರಧಾನಿ ಮೋದಿ ಬಾಯಿಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸಹ ದಿನಸಿಯನ್ನ ಕೇವಲ ಗೋಧಿ ಮತ್ತು ಅಕ್ಕಿಗೆ ಸೀಮಿತ ಮಾಡಿಕೊಂಡಿದೆ. ಹೀಗೆ ಮಾಡಿದರೆ ಬಡವರ ಮತ್ತು ಮದ್ಯಮ ವರ್ಗದ ಜನರ ಜೀವನ ಸಾಗದು. ಹಾಗಾಗಿ ಸಾಕಷ್ಟು ಪ್ರಮಾಣದ ಸಕ್ಕರೆ, ಎಣ್ಣೆ, ಉದ್ದಿನಬೇಳೆ ಮೊದಲಾದ ದಿನಸಿಗಳನ್ನ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಬೇಕಿದೆ ಎಂದರು.
ಆಶಾ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯನ್ನ ಕಾಂಗ್ರೆಸ್ ಖಂಡಿಸುತ್ತದೆ ಎಂದ ಅವರು, ಆಶಾ ಕಾರ್ಯಕರ್ತೆಯರು, ಬಿಸಿ ಊಟದ ಕಾರ್ಯಕರ್ತರು ಮೊದಲಾದ ಕೊರೋನ ವಾರಿಯರ್ಸ್‌ರ ಮೇಲೆ ನೆಡೆಯುವ ಹಲ್ಲೆಯನ್ನ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕೆಲ ಸರ್ಕಾರಿ ನೌಕರರಿಗೆ ಸಂಬಳ ಆಗಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಈ ನೂನ್ಯತೆಗಳನ್ನ ಸರ್ಕಾರ ಸರಿಪಡಿಸಿಕೊಂಡು ನಿಗದಿತ ಸಮಯದಲ್ಲಿ ಅವರಿಗೆ ಸಂಬಳ ನೀಡಬೇಕೆಂದರು. ಕೊರೋನ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಪಕ್ಷ ಸರ್ಕಾರದ ಜೊತೆ ಇದೆ. ಆದರೆ ಕಂಡು ಬರುತ್ತಿರುವ ನೂನ್ಯತೆಗಳನ್ನ ಸರ್ಕಾರ ಸರಿಪಡಿಸಬೇಕೆಂದು ಒತ್ತಾಯಿಸಿದರು.