ನಗರದ ನಾಗರಿಕರಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಲಾಯಿತು.

542

ಶಿವಮೊಗ್ಗ,ಮಾ.೨೪: ನಗರದ ನಾಗರಿಕರಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಲಾಯಿತು.

ಬೇಸಿಗೆ ಹತ್ತಿರವಾಗುತ್ತಿದೆ. ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಜನರು ವೈರಸ್ ಭೀತಿಯಲ್ಲಿ ತಮ್ಮನ್ನು ತಾವು ಶುಚಿಯಾಗಿಟ್ಟುಕೊಳ್ಳಲು ಹೆಚ್ಚು ನೀರು ಬಳಸುತ್ತಿದ್ದಾರೆ. ಆದ್ದರಿಂದ ನೀರಿನ ಸರಬರಾಜನ್ನು ತಪ್ಪದೇ ಪ್ರತಿನಿತ್ಯವೂ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ನೀರಿನ ಪ್ರಮಾಣವನ್ನು ಗಮನಿಸಿ, ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಮಹಾನಗರಪಾಲಿಕೆ, ನೀರಿನ ವಿಚಾರವಾಗಿ, ಕ್ಲಿನಿಂಗ್ ವಿಚಾರವಾಗಿ ಮುಂಜಾಗ್ರತಾ ಕ್ರಮ ವಹಿಸುವ ಹಿನ್ನಲೆಯಲ್ಲಿ ತುರ್ತುಸಭೆ ಕರೆಯಲು ಮನವಿ ಮಾಡಲಾಗಿದೆ. ಆದರೆ ಮಹಾನಗರಪಾಲಿಕೆ ನಮ್ಮ ಮನವಿಯನ್ನು ನಿರ್ಲಕ್ಷಿಸಿದ್ದರಿಂದ ನಾವು ನೀರಿನ ಸರಬರಾಜಿನ ಬಗ್ಗೆ ಮತ್ತು ಶುಚಿತ್ವದ ಬಗ್ಗೆ ಕರೋನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ ಎಂದು ಮನವಿದಾರರು ತಿಳಿಸಿದ್ದಾರೆ.

ಮಾ.೩೧ರ ವರೆಗೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಪಾಲಿಕೆ ಕಾಮಗಾರಿ, ಸ್ಮಾರ್ಟ್‌ಸಿಟಿ ಕಾಮಗಾರಿ, ಪಿಡಬ್ಲ್ಯೂಡಿ, ನೀರಾವರಿ ಇಲಾಖೆಯ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಈ ಕಾಮಗಾರಿಗಳಿಂದ ಧೂಳು ಹೆಚ್ಚಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ಕೆಮ್ಮು, ಶೀತ, ತಲೆನೋವಿನಂತಹ ಕಾಯಿಲೆಗಳು ಬಂದರೆ ನಾಗರೀಕರು ಆತಂಕಕ್ಕೆ ಒಳಗಾಗುತ್ತಾರೆ. ಮೊದಲೇ ಕರೊನಾ ಭಯ ಬೇರೆ. ಹಾಗಾಗಿ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ನೀರು ಸರಬರಾಜು ನಿರಂತರವಾಗಿರಬೇಕು. ಕರೊನಾ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ನೀಡುವ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಆರ್.ಸಿ. ನಾಯಕ್, ಶಾಮೀರ್‌ಖಾನ್, ಮೆಹಕ್ ಷರೀಫ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್ ಸೇರಿದಂತೆ ಹಲವರಿದ್ದರು.