ನಗರದಲ್ಲಿ ಗಲಭೆಗೆ ಅವಕಾಶವಿಲ್ಲ

366

ಶಿವಮೊಗ್ಗ: ನಗರದಲ್ಲಿ ಶಾಂತಿ ನೆಲೆಸಲು ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಪ್ರತಿಯೊಬ್ಬರೂ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸುದ್ದಿಗೋಷ್ಟಿಯಲ್ಲಿಂದು ಈ ಕುರಿತು ಮಾತನಾಡಿದ ಐಜಿಪಿ ರವಿ ಅವರು, ಡಿ.೩ರ ನಿನ್ನೆ ನಡೆದ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆ ನಂತರ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ಈಗ ತಿಳಿಯಾಗಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು ಶಾಂತಿ ಕಾಪಾಡುವ ಸಲುವಾಗಿ ಇಂತಹ ಕಠಿಣ ಮುನ್ನೆಚ್ಚರಿಕೆ ಅನಿವಾರ್ಯ ಎಂದರು.
ನಿನ್ನೆ ಮಧ್ಯಾಹ್ನ ೩.೩೦ರ ನಂತರ ನಗರದ ಏಳೆಂಟು ಕಡೆಗಳಲ್ಲಿ ಕಲ್ಲು ತೂರಾಟ ಮತ್ತು ಗಲಭೆಯತ್ನದ ಘಟನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ೧೦ ಎಫ್‌ಐಆರ್ ದಾಖಲಾಗಿದ್ದು, ಸುಮಾರು ೬೨ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ನಗರದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಂಡಿದ್ದು ೧೪೮ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಈ ಪ್ರದೇಶಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ನಗರಕ್ಕೆ ಬರುವ ವಾಹನಗಳ ತಪಾಸಣೆ ಮಾಡಲು ೯ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ನಗರದಲ್ಲಿ ಗಸ್ತು ತಿರುಗುವ ವಾಹನಗಳು, ೨೨ ಚಿತಾ ಬೈಕ್, ೧೩ ಪೆಟ್ರೋಲಿಂಗ್ ವಾಹನಗಳು ಸುತ್ತುತ್ತಿವೆ. ಕೆಲ ಕಿರುದಾರಿ ರಸ್ತೆಗಳಲ್ಲಿಯೂ ಪೊಲೀಸ್ ಸಿಬ್ಬಂದಿ ವಿಶೇಷ ಗಸ್ತು ಮಾಡುತ್ತಿದ್ದಾರೆ ಎಂದರು.
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಗಲಭೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಸಾರ್ವಜನಿಕರಿಗೆ ಗಲಭೆ ಬಗ್ಗೆ ಯಾವುದೇ ರೀತಿಯ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕೆಂದು ಅವರು ಮನವಿ ಮಾಡಿದ ಅವರು, ಯಾವುದೇ ವ್ಯಕ್ತಿ ಅಥವಾ ಸಂಘಟನೆ ಸುಳ್ಳು ಸುದ್ದಿ ಅಥವಾ ಪ್ರಚೋದನಾತ್ಮಕ ಸುದ್ದಿಗಳನ್ನು ಹರಡಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಹಲ್ಲೆಗೊಳಗಾದ ನಾಗೇಶ್‌ರನ್ನು ನಾನು ಭೇಟಿಯಾಗಿದ್ದೇನೆ, ಅವರು ಹೇಳುವ ಪ್ರಕಾರ ನಾಲ್ಕೈದು ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಅವರೆಲ್ಲ ಮಾಸ್ಕ್ ಹಾಕಿಕೊಂಡಿದ್ದರಿಂದ ಸರಿಯಾಗಿ ಗೊತ್ತಾಗಲಿಲ್ಲ. ಆದರೆ ಅವರನ್ನು ಎದುರಿಗೆ ಕರೆತಂದರೆ ಗುರುತು ಹಿಡಿಯುವುದಾಗಿ ಹೇಳಿದ್ದಾರೆ. ಈ ಹಲ್ಲೆಗೆ ಕಾರಣ ಏನು, ಇದು ಕೋಮು ಗಲಭೆಯೇ ಎಂದು ನಾವು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕ್ಷುಬ್ದ ವಾಗಿಲ್ಲದ ನಗರದ ಇತರೆ ಭಾಗಗಳಲ್ಲೂ ಅಂಗಡಿಗಳನ್ನು ಮುಚ್ಚಿಸಿರುವ ಪ್ರಶ್ನೆಗೆ, ಮೊದಲು ನಗರದಲ್ಲಿ ಶಾಂತಿ ನೆಲೆಸಲಿ ನಂತರ ಇತರೆ ವಿಷಯಗಳನ್ನು ನೋಡೋಣ ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿವಕುಮಾರ್ ಮಾತನಾಡಿ, ನಗರದಲ್ಲಿ ಶಾಂತಿ ನೆಲೆಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಸಾರ್ವ ಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ನೆಲೆಸಲು ಸಹಕರಿಸುವಂತೆ ಕೋರಿದರು.
ನಗರದಲ್ಲಿ ಮೂಲಭೂತ ಸೌಕರ್ಯಕ್ಕೆ ತೊಂದರೆಯಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲು, ಔಷಧಿ ಇತ್ಯಾದಿಗಳಿಗೆ ತೊಂದರೆಯಿಲ್ಲ. ಎಲ್ಲಾದರೂ ತೊಂದರೆಯಾಗಿದ್ದಲ್ಲಿ ಸರಿ ಮಾಡಲಾಗುವುದು ಎಂದರು.
ಕರ್ಫ್ಯೂ: ಪ್ರಸ್ತುತ ನಗದಲ್ಲಿ ೧೪೪ ಸೆಕ್ಷನ್ ಜಾರಿಯಿದ್ದು, ಕೋಟೆ ಠಾಣೆ, ದೊಡ್ಡಪೇಟೆ ಠಾಣೆ ಹಾಗೂ ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ೧೦ ಗಂಟೆವರೆಗೆ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ಉಪಸ್ಥಿತರಿದ್ದರು.