ದಾವಣಗೆರೆ: ಕೋವಿಡ್-೧೯ ಪರೀಕ್ಷಾ ಕೇಂದ್ರ ಆರಂಭ

518

ದಾವಣಗೆರೆ: ಇಲ್ಲಿನ ಎಸ್‌ಎಸ್‌ಐಎಂಎಸ್ ಅಂಡ್ ಆರ್‌ಸಿಯಲ್ಲಿ ಇಂದಿನಿಂದ ಕೋವಿಡ್ -೧೯ ಪರೀಕ್ಷಾ ಕೇಂದ್ರವನ್ನು (ಲ್ಯಾಬ್) ಆರಂಭಿಸಲಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ|ಸುಧಾಕರ್ ಅವರು ಟೇಪ್ ಕತ್ತರಿಸುವ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು.
ನಂತರ ಕಾಲೇಜಿನ ಸಭಾಂಗಣ ದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ದಾವಣಗೆರೆಯಲ್ಲಿ ಪರೀಕ್ಷಾ ಕೇಂದ್ರ (ಲ್ಯಾಬ್)ವನ್ನು ಆರಂಭಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈ ಕೇಂದ್ರ ಆರಂಭಿಸಲು ಸುಸಜ್ಜಿತವಾದ ಲ್ಯಾಬ್ ಅವಶ್ಯಕತೆಯಿತ್ತು. ದಾವಣಗೆರೆಯ ಎಸ್‌ಎಸ್‌ಐಎಂಎಸ್ ಅಂಡ್ ಆರ್‌ಸಿಯ ಡಾ| ಶಾಮನೂರು ಶಿವಶಂಕರಪ್ಪನವರು ಮತ್ತು ಛೇರ್ಮನ್ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಲ್ಯಾಬ್ ಆರಂಭಕ್ಕೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಇಂದು ದಾವಣಗೆರೆಯಲ್ಲಿ ಲ್ಯಾಬ್ ಆರಂಭಿಸಲಾಗಿದೆ ಎಂದರು.
ರಾಜ್ಯದ ೬೦ ವೈದ್ಯಕೀಯ ಕಾಲೇಜುಗಳ ಪೈಕಿ ಇಂದು ಆರಂಭವಾಗಿರುವ ಲ್ಯಾಬ್ ಸೇರಿ ಒಟ್ಟು ೩೩ ಲ್ಯಾಬ್ ಆರಂಭಗೊಂಡಂತಾಗಿದ್ದು, ದಾವಣಗೆರೆಯಲ್ಲಿ ಜೆಜೆಎಂಸಿ ಹಾಗೂ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಸಹ ಲ್ಯಾಭ್ ಆರಂಭಕ್ಕೆ ಪ್ರಯತ್ನಿಸಲಾಗುವುದು ಎಂದ ಸಚಿವರು, ಪ್ರತಿದಿನ ೫ ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ೧೦ ಸಾವಿರ ಪರೀಕ್ಷೆಗಳನ್ನು ನಡೆಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ದಾವಣಗೆರೆಯ ಎಸ್‌ಎಸ್‌ಐಎಂಎಸ್ ಅಂಡ್ ಆರ್‌ಸಿಯಲ್ಲಿ ಇಂದಿನಿಂದ ಕೋವಿಡ್ -೧೯ ಪರೀಕ್ಷಾ ಕೇಂದ್ರವನ್ನು (ಲ್ಯಾಬ್) ಆರಂಭಕ್ಕೆ ಆಸಕ್ತಿದಾಯಕವಾಗಿ ಕಾರ್ಯನಿರ್ವಹಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎನ್.ಕೆ. ಕಾಳಪ್ಪನವರ್, ಪ್ರಾಂಶುಪಾಲ ಡಾ| ಬಿ.ಎಸ್.ಪ್ರಸಾದ್ ಹಾಗೂ ಎಲ್ಲಾ ಸಿಬ್ಭಂದಿವರ್ಗದವರನ್ನು ಸಚಿವರು ಅಭಿನಂದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಮಾತನಾಡಿ ಲ್ಯಾಬ್ ಆರಂಭದಿಂದ ದಾವಣಗೆರೆಯಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಲು ಅನುಕೂಲವಾಗಲಿದೆ. ಶೀಘ್ರದಲ್ಲೇ ಇನ್ನೊಂದು ಲ್ಯಾಬ್‌ನ್ನು ದಾವಣಗೆರೆಯಲ್ಲಿ ಆರಂಭಿಸಲಾಗುವುದು ಎಂದರು.
ಶಾಸಕರು, ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ|| ಲಿಂಗಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಯರ್ ಅಜಯಕುಮಾರ್, ಡೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಜೆ.ಎನ್.ಶ್ರೀನಿವಾಸ್, ಚಮನ್ ಸಾಬ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|| ಎನ್.ಕೆ. ಕಾಳಪ್ಪನವರ್, ಪ್ರಾಂಶುಪಾಲರಾದ ಡಾ|| ಬಿ.ಎಸ್.ಪ್ರಸಾದ್, ಉಪ ಪ್ರಾಂಶುಪಾಲರಾದ ಡಾ|| ಅರುಣಕುಮಾರ್, ರವಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಮತ್ತಿತರರಿದ್ದರು.