ತ್ರಿವಿಧ ದಾಸೋಹಿ ಷ|ಬ್ರ|ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ನೆನಪಿನಲ್ಲಿ…

602

ತ್ರಿವಿಧ (ಧರ್ಮ-ಅನ್ನ-ಜ್ಞಾನ) ದಾಸೋಹಿಗಳೂ, ಹಾಲಸ್ವಾಮಿ ಬೃಹನ್ಮಠದ ೫ನೇ ಪಟ್ಟಾಧಿಕಾರಿ ಗುರುಗಳೂ ಆಗಿರುವ ಇದೇ ಮಠದ ನಾಲ್ಕನೇ ಗುರುಗಳಾದ ಷ|ಬ್ರ|ಶ್ರೀ ವಿಶ್ವರಾಧ್ಯ ಹಾಲಸ್ವಾಮಿಗಳು ಮತ್ತು ಮಾತೆ ಗಿರಿಜಾಂಬಾರವರಿಗೆ ಶ್ರೀಗಳು ದಿನಾಂಕ ಜುಲೈ ೨೦, ೧೯೬೫ರ ಪುಣ್ಯದಿನದಂದು ಪೂರ್ಣ ಚಂದ್ರಸಮಾ ಪುತ್ರರತ್ನವೊಂದು ಮಾತೆಯ ಮಡಿಲಿನ ಸಿರಿಯಾಗಿ ಉದಯಿಸಿತು. ಶಿವಜನ್ಮತಳೆದ ರೂಪಾಂತು ಬಂದಂತಿದ್ದು, ಆ ಮುದ್ದು ಮಗುವಿಗೆ ಪುಟ್ಟಸ್ವಾಮಿ (ಚಿಕ್ಕ ಬಸವ) ಎಂಬ ಸಾರ್ಥಕ ನಾಮ ಮಾಡಲಾಯಿತು. ಅಂದು ತ್ರಿಕಾಲಜ್ಞಾನಿಯೊಬ್ಬರು ಮಗುವನ್ನು ನುಡಿದಂತೆ ಖಂಡಿತವಾಗಿಯೂ ಈ ಮಗು ಮುಂದೆ ಶಿವಯೋಗಿ ಬೆಳಗಿ ಶಿವನ ಮುಡಿಯೇರಿ ಸೋಮಶೇಖರನನ್ನಾಗಿಸಿದಂತೆ ಜಗವೆಂಬ ಜಗದೀಶನ ಮುಡಿಯೇರಿ ಜಗಮದ್ದನಾಗುವನೆಂದು ಜಾತಕ ನುಡಿಯುತ್ತಿದ್ದರೇನೋ, ಆದರೆ ಹಾಗೆ ಬರೆದಿದ್ದರೂ ಈಗ ಆಗಿರುವುದು ಈ ಪ್ರದೇಶದ ಈ ಜನತೆಯ ಪುಣ್ಯ.
ಪುಟ್ಟಸ್ವಾಮಿ ಬಾಲನು ಶುಕ್ಲಪಕ್ಷದ ಚಂದಿರನಂತೆ ಬೆಳೆದು ಮೈಸೂರಿನ ಸೇಂಟ್ ಥಾಮಸ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ (೧ರಿಂದ ೭) ೮ ಮತ್ತು ೯ನೇ ತರಗತಿಗಳನ್ನು ಶಾರದಾ ವಿಲಾಸ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿ, ಎಸ್‌ಎಸ್‌ಎಲ್‌ಸಿಯನ್ನು ೧೯೮೦ರಲ್ಲಿ ಹೊನ್ನಾಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿದರು.
ಭದ್ರಾವತಿಯ ಸರ್ ಎಂ.ವಿ. ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿದರು. (೧೯೮೫) ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತ ಡಿಪ್ಲೊಮಾ ಅಭ್ಯಾಸ ಮಾಡಿದ ಇವರು, ಶಿವಮೊಗ್ಗದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿಗೆ ಸೇರಿ ವ್ಯಾಸಂಗವನ್ನು ಮೊಟಕುಗೊಳಿಸಿ ಶ್ರೀಮಠದ ಉಸ್ತುವಾರಿಕೆ ಮಾಡಿದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ನಾನು ಹೊನ್ನಾಳಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಶ್ರೀಗಳು ತಮ್ಮ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವುದನ್ನು ಕಣ್ಣಾರೆ ನೋಡಿ ಆನಂದಿಸಿದ್ದೆನು.
೧೯೯೨-೯೬ರವರೆಗೆ ನಾಲ್ಕು ವರ್ಷಗಳವರೆಗೆ ಶ್ರೀಮಠದ ಉಸ್ತುವಾರಿಕೆ ನಿರ್ವಹಿಸಿ ೨೧-೨೨ ಜನವರಿ ೧೯೯೬ರಂದು ಶ್ರೀಮಠದ ಪಟ್ಟಾಧಿಕಾರವನ್ನು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಷ|ಬ್ರ|ಶ್ರೀ ಚಂದ್ರಶೇಖರ ಶಿವಾಚಾರ್ಯರ ಸನ್ನಿಧಿಯಲ್ಲಿ ವಿದ್ಯುಕ್ತವಾಗಿ ಪಡೆದರು. ಪೂರ್ವಾಶ್ರಮದ ಪುಟ್ಟಸ್ವಾಮಿ (ಚನ್ನಬಸವ) ಇವರು ಶ್ರೀ|ಷ|ಬ್ರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳೆಂಬ ಅಭಿನಾಮದಿಂದ ಸನ್ಯಾಸ ದೀಕ್ಷೆ ತೊಟ್ಟು ೫ನೇ ಗುರುಗಳಾಗಿ ರಾಂಪುರ ಬೃಹನ್ಮಠದೊಂದಿಗೆ ಶಾಖಾ ಮಠಗಳಾದ ಚನ್ನಗಿರಿ ತಾಲೂಕು ಬಸವಾಪಟ್ಟಣದ ಗವಿಮಠ ಮತ್ತು ಹೊಳಲ್ಕೆರೆ ತಾಲೂಕು ಗುಂಡೇರಿ ಹಾಲಸ್ವಾಮಿ ಮಠಗಳ ಅಧಿಕಾರ ಹೊಂದಿದರು.
ಶ್ರೀಮಠದಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿನ ಗುರುಗಳ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಪ್ರತಿ ಅಮವಾಸ್ಯೆ-ಹುಣ್ಣಿಮೆಗಳಲ್ಲಿ ಭಕ್ತರ ಸಂಕಷ್ಟಗಳನ್ನು ಆಲಿಸಿ ಆಶೀರ್ವದಿಸುವರು, ತಪೋನುಷ್ಠಾನ, ಮುಳ್ಳುಗದ್ದುಗೆ ರಥೋತ್ಸವ ಪ್ರಮುಖವಾದ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠಕ್ಕೆ ಸುಮಾರು ೮೬ ಹಾಲಸ್ವಾಮಿಗಳ ಗದ್ದುಗೆ ಮಠಗಳು ಹಾಗೂ ಹೊರ ರಾಜ್ಯಗಳಲ್ಲಿ ಇರುವದಾಗಿದ್ದು, ಎಲ್ಲ ಮಠಗಳಲ್ಲಿ ಜಾತಿ-ಭೇದವಿಲ್ಲದೆ ಜನರು ಗದ್ದುಗೆಗೆ ನಡೆದುಕೊಳ್ಳುವುದಾಗಿ ತಿಳಿಸುತ್ತಾರೆ.
ರಾಂಪುರ ಮತ್ತು ಬಸವಾಪಟ್ಟಣಗಳಲ್ಲಿ ಶ್ರೀಮಠದಿಂದ ಗಂಧ ಕಳಿಸಿದ ಮೇಲೆ ಉರಸ್ ಆಚರಿಸುವ ಶಾಸ್ತ್ರ ನಡೆದು ಬಂದಿದೆ.
ನಿಪ್ಪಾಣಿ ತಾಲೂಕು ಹಿರೇಅಪ್ಪಚ್ಚವಾಡಿ ಹಾಲಸ್ವಾಮಿ ಗದ್ದುಗೆಯ ಮೇಲ್ಛಾವಣಿಯನ್ನು ಬ್ರಾಹ್ಮಣರು ಮತ್ತು ಪೂಜಾ ಕಾರ್ಯಗಳನ್ನು ಕುರುಬರು ಮಾಡುವುದಾಗಿ ವಿವರಿಸಿದರು.
ರಾಂಪುರದಲ್ಲಿ ಶ್ರೀಮಠದಿಂದ ನಡೆಯುತ್ತಿರುವ ನವಸುಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಶಿಕ್ಷಣ ಮತ್ತು ಉಚಿತ ವಸತಿ ನೀಡುತ್ತಿರುವ ಶ್ರೀಗಳು, ನಿತ್ಯಾನ್ನ ದಾಸೋಹವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಶ್ರೀಗಳು ಬಡ ವಿದ್ಯಾರ್ಥಿಗಳಿಗೆ ಗುಡಿ-ದೇಗುಲಗಳಿಗೆ ಬಡವರ ವಿವಾಹಕ್ಕೆ ಧನ ಸಹಾಯ ಮಾಡುತ್ತಿದ್ದರು. ಸುಮಾರು ನಲ್ವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲ್ಯಾಣ ಮಂಟಪ ಕಟ್ಟಡ ನಿರ್ಮಾಣವಾಗಿದ್ದು, ಮೇಲಂತ್ತು ವಿವಾಹಾದಿ ಮಂಗಳ ಕಾರ್ಯ ಮತ್ತು ಧಾರ್ಮಿಕ ಸಭೆ ಸಮಾರಂಭಗಳಿಗೆ ಪ್ರಶಕ್ತವಾಗಿದ್ದು, ಕೆಳಭಾಗ ಪ್ರಸಾದ ನಿಲಯವಾಗಿರುತ್ತದೆ.
ಶ್ರೀಮಠದಲ್ಲಿ ಗೋಶಾಲೆ ಇದ್ದು, ಗೋ ಶಾಲೆಯಲ್ಲಿ ಸುಮಾರು ೨೦ ಗೋವುಗಳು ಇರುತ್ತವೆ.
ಮಧುಮೇಹ, ಅಸ್ತಮಾ, ಗ್ಯಾಸ್‌ಟ್ರಬಲ್, ಜಲೋಧರ, ಮಕ್ಕಳ ಫಲ, ಹಾವು ಮತ್ತು ಹುಚ್ಚು ನಾಯಿ ಕಡಿತಕ್ಕೆ ಮುಂತಾದ ಕಾಯಿಲೆಗಳಿಗೆ ಗಿಡಮೂಲಿಕೆಗಳನ್ನು ನೀಡಿ ಸಾವಿರಾರು ಭಕ್ತರ ಸಂಕಷ್ಟಗಳನ್ನು ಪರಿಹರಿಸಿದ್ದಾರೆ. ಶ್ರೀಮಠದಲ್ಲಿಯೇ ಔಷಧಿಗಳನ್ನು ಕೊಡುವ ವ್ಯವಸ್ಥೆ ಮಾಡಿದ್ದಾರೆ.
ಸುತ್ತಲ ಗ್ರಾಮಗಳ ಕೌಂಟುಂಬಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳೊಂದಿಗೆ ಬರುವ ಜನರ ನ್ಯಾಯ ತೀರ್ಮಾನಗಳನ್ನು ಮಾಡುತ್ತಿದ್ದರು.
ಶ್ರೀಮಠದ ಆವರಣದಲ್ಲಿರುವ ಸದ್ಗುರು ಶಿವಯೋಗಿ ಹಾಲಸ್ವಾಮಿಜಿ ಶ್ರೀಮಠ ಗದ್ದುಗೆಗಳು ಅತ್ಯಂತ ಪ್ರಭಾವಶಾಲಿ, ಶಕ್ತಿಶಾಲಿ ಆಗಿರುತ್ತವೆ. ಪೀಡೆ, ದುಷ್ಟಶಕ್ತಿ, ಉನ್ಮಾದಗಳಿಂದ ಪೀಡಿತರಾದವರಿಗೆ ಇಲ್ಲಿ ಪರಿಹಾರ ಶತಸಿದ್ಧ. ಶ್ರೀಗಳಿಗೆ ಈ ವಿಷಯದಲ್ಲಿ ಮೊರೆಹೋದವರಿಗೆ ಅಜ್ಜಮ್ಮನನ್ನು ಹೊರಡಿಸಲು ಶ್ರೀಗಳು ಅಪ್ಪಣೆ ಕೊಡಿಸಿದರೆ ಅಜ್ಜಮ್ಮನನ್ನು ಹೊರಡಿಸಿದಾಗ ಹೇಳಿಕೆಗಳು ಉಂಟಾಗುತ್ತವೆ. ಹೇಳಿಕೆಗಳ ಪ್ರಕಾರ ನಡೆದುಕೊಂಡರೆ ಪರಿಹಾರ ಲಭಿಸುತ್ತದೆ.
ಶ್ರೀ ಹಾಲಸ್ವಾಮಿ ಗ್ರಾಮಾಂತರ ಕೈಗಾರಿಕಾ ತರಬೇತಿ ಕೇಂದ್ರವು ರಾಂಪುರದಲ್ಲಿ ಸ್ಥಾಪನೆ ಆಗಿ ಇಲ್ಲಿ ಡಿಟಿಡಿ ಕೋರ್ಸ್‌ಗಳು ನಡೆಯುತ್ತಿವೆ.
ಶ್ರೀಗಳ ಸನ್ನಿಧಾನದಲ್ಲಿ ವಿವಿಧೆಡೆ ದೇವಸ್ಥಾನಗಳ ಜೀರ್ಣೋದ್ದಾರ, ದೈವೀಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರಬದ್ಧವಾಗಿ ಸಾಂಗವಾಗುತ್ತದೆ.
ಶ್ರೀಗಳ ಎಲ್ಲಾ ಕಾರ್ಯಗಳು ಹಾಲಸ್ವಾಮಿಗಳ ಗುದ್ದುಗೆಯ ಪ್ರಭಾವದಿಂದ ನಡೆಯುತ್ತದೆ ಎಂಬುದು ಶ್ರೀಗಳ ಅನಿಸಿಕೆ.
ಚೇತನ ಶಕ್ತಿ:
ಶಿವಕಳೆಯ ಕಾಯಕ ನಿಷ್ಠೆಯ ಚೇತನವನ್ನು ಹೊಂದಿ, ತ್ಯಾಗಮಯ ಜೀವನಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಭಕ್ತರ ಅಭಿಲಾಷೆಯ ಈಡೇರಿಕೆಗಾಗಿ ಅಹರ್ನಿಶಿಯಾಗಿ ಸ್ಪಂದಿಸುವ ಶ್ರೀಗಳ ಕತೃತ್ವಶಕ್ತಿಯು ಶ್ಲಾಘನಿಯ.
ಉದ್ಧಾಮೇನ ಹೀ ಸಿದ್ಧಾಂತಿ ಕಾರ್ಯಣಿ ಸಮನೋರಥೈ;
ನಹಿ ಸಿಂಹಸ್ಯ ಸುಪ್ತವೋ ಪ್ರಠಿಶಂತಿ ಮುಖೆ ಮೃಗಾಃ||
ಎಂಬಲ್ಲಿ ಬರೀ ಬದ್ಧತೆಯಿದ್ದರೆ ಸಾಲದು. ಅದು ತಿರುಕನ ಕನಸಾಗತ್ತದೆ. ಯಶಸ್ಸಿಗೆ ಜ್ಞಾನಕ್ರಿಯಾ ಇಚ್ಛಾಶಕ್ತಿಗಳು ಪ್ರಬಲವಾಗಿರಬೇಕು. ಶ್ರೀಗಳು ಕಲ್ಯಾಣ ಮಂಟಪ, ಸಭಾ ಭವನ, ಗೋಶಾಲೆ ಕಟ್ಟಿಸಿದ್ದಾರೆ. ಆರಂಭತೆ ಅಲ್ಪ ಮೇಪಾಜ್ಞ ಕಾಮಂ ವೂಗ್ರಾ ಭವಂತಿ ಚ
ಮಹಾರಂಭಾ| ತ್ರತದಿಯಃ ತ್ಠಿ ತಿಚ ನಿರಾಕುಲಾ|
ಅಲ್ಪಬುದ್ಧಿಯುಳ್ಳವನು ಯಾವ ಕಾರ್ಯ ಆರಂಭಿಸಿದರೂ ವ್ಯಾಕುಲತೆಗಳಿಂದ ಬಳಲುತ್ತಾನೆ. ಆದರೆ ಪ್ರಾಜ್ಞರು ಗುರುತರ ಕಾರ್ಯಗಳು ನಿಭಾಯಿಸುತ್ತಿದ್ದರೂ ಸದಾ ಶಾಂತ, ನಿರಾಂತಕ ಮನಸ್ಸಿನಿಂದ ಕೂಡಿರುತ್ತಾರೆ. ಶ್ರೀಗಳು ಶಿವಲಿಂಗ ಮಹಾಪೂಜೆ, ಧಾರ್ಮಿಕ ಭಾವೈಕ್ಯ ಸಭೆ, ಸಮಾರಂಭಗಳಲ್ಲಿ ಹಗಲಿರುಳು ಪ್ರಯಾಣಿಸಿ ದಣಿದಿದ್ದರೂ ಪಾಲ್ಗೊಳ್ಳಲು ಸದಾ ಪ್ರಸನ್ನ ಚಿತ್ತ, ಶಾಂತ ಹಸನ್ಮುಖಿ ಮುದ್ರೆಯುಳ್ಳವರಾಗಿರುತ್ತಿದ್ದರು. ಜಾಗೃತ, ಸ್ವತ್ನ, ಸುಷಪ್ತಿಯಲ್ಲಿಯೂ ಸನ್ನಿಧಿಯ ಚೆತನ ಶಕ್ತಿ ಕಾರ್ಯನಿರತವಾಗಿರುತ್ತದೆ. ದೇಹ ಮನಸ್ಸುಗಳನ್ನು ಸ್ವಯಂ ದುಡಿಸಿ, ದುಡಿಸಿಕೊಳ್ಳುವ ಶಕ್ತಿ ಪೂಜ್ಯರಿಗೆ ಕರಗತವಾಗಿದೆ.
ದಿವ್ಯಚೇತನವಾದ ಶ್ರೀಗಳ ತಪಃಕೃಷಿ, ಧ್ಯಾನ ಕೃಷಿ, ಜ್ಞಾನ ಕೃಷಿ, ಸಾಹಿತ್ಯ ಕೃಷಿ, ಇವೆಲ್ಲವೂ ಜನತೆಗಾಗಿ, ಜಗದ ಒಳಿತಿಗಾಗಿ ಇರುವಂಥವು.
ನೋವನ್ನುಂಡು ಬಳಲಿ ಬೆಂಡಾಗಿ ಬಂದ ಭಕ್ತರಿಗೆ ಸಾಂತ್ವನ ಹೇಳಿ, ಅವರ ನೋವಿನ ನೆಲೆಯನ್ನರಿತು ಚೈತನ್ಯಶೀಲರನ್ನಾಗಿ ಮಾಡಿ ಕರುಣೆಯಿಂದ ಆಶೀರ್ವದಿಸಿ ಮಾರ್ಗದರ್ಶನ ಮಾಡುವ ಪರಮಸನ್ನಿಧಾ ಯಾರಿಗೂ ಭೇದ ಬಯಸದ, ಯಾರಲ್ಲಿಯೂ ಭೇದ ಎಣಿಸದ ಭೇದಾತೀತರಾಗಿ ಹರಸುತ್ತಾರೆ.
ದುರ್ಲಭಂ ಮಾನುಷಂ ಪ್ರಾತ್ಯ ಜನನಂ ಜ್ಞಾನ ಸಾಧನಂ
ಯೇಸ ಜಾನಂತಿ ದೇವೇಶಂ ತೇಷಾ ಮಾತ್ಮ ನಿರರ್ಥನ||
ಎಂಬ ಸಿದ್ಧಾಂತ ಶಿಖಾಮಣಿಯಲ್ಲಿನ ಉಕ್ತಿಯಂತೆ ಪುಣ್ಯ ಸಂಚಯದಿಂದ ಪಾತ್ರವಾದ ಈ ಜನ್ಮ ಶಿವ ಸಮಂಥವಾದ ವಿಷಯ ಅರಿಯದ ವೂರ್ಥವಾಗಿ ಕಳೆದರೆ ಜೀವನ ಪಾವನವಾಗದು. ಆದ್ದರಿಂದ ಉತ್ಕೃಷ್ಟ ಜೀವನಕ್ಕೆ ಮಾನವರು ತಯಾರಾಗಬೇಕೆಂಬುದು ಶ್ರೀಗಳ ಆಕಾಂಕ್ಷೆ. ಅದಕ್ಕಾಗಿ ಸದಾಸಂಚಾರ, ಗುರು ವಚನಾಮೃತ ಸುಧೆಯಲ್ಲಿ ಎಲ್ಲ ಸಾಕಾರಗಳ ಬಗ್ಗೆ ಅಪ್ಪಣೆ ಕೊಡಿಸುತ್ತ, ಭಕ್ತ ಜನತೆಯನ್ನು ಗುರುಮುಖದಿಂದ ಹರಮುಖದೆಡೆದೆ ಸನ್ನಿಧಾನದ ಸಂಕಲ್ಪ ಸದಾ ವಂದನೀಯ.
ಭಕ್ತರ ಅಭಿಷ್ಟೇಯ ಈಡೇರಿಕೆಗೆ ಅಹರ್ನಿಶಿಯಾಗಿ ದುಡಿದು ಭಗವತ್ ಸಂಕಲ್ಪದಂತೆ ಷ|ಬ್ರ|ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅನಾರೋಗ್ಯದಿಂದ ೨೦೨೦ರ ಜುಲೈ ೧೫ರಂದು ಶಿವೈಕ್ಯರಾಗಿದ್ದು, ಅಪಾರ ಭಕ್ತರನ್ನು ದುಃಖದ ಸಾಗರದಲ್ಲಿ ಮುಳುಗಿಸಿದ್ದಾರೆ.
– ಯು.ಎಸ್. ಸಂಗನಾಳ ಮಠ
ವಿಶ್ರಾಂತ ಉಪನ್ಯಾಸಕರು,
ಲೇಖಕರು ಹಾಗೂ ಫ್ರೀಲಾನ್ಸ್ ಪತ್ರಕರ್ತರು
ಜ್ಯೋತಿರ್ಲಿಂಗ, ಶಿವಮೊಗ್ಗ ರಸ್ತೆ ೧ನೇ ತಿರುವು, ಹೈಸ್ಕೂಲ್ ಬಡಾವಣೆ, ಹೊನ್ನಾಳಿ .