ಡಿಸಿ ಎಸ್ಪಿ ಹಾಗೂ ಅಧಿಕಾರಗಳ ತಂಡದಿಂದ ಅನಗತ್ಯ ಸೇವೆಗಳ ಅಂಗಡಿಗಳ ಬಂದ್ : ಮಾತು ಕೇಳದವರಿಗೆ ಲಾಠಿ ರುಚಿ

596

ದಾವಣಗೆರೆ :

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಕರ್ನಾಟಕ ಲಾಕ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ  ಮಹಾಂತೇಶ ಬೀಳಗಿ ಮತ್ತು ಎಸ್‌ಪಿ ಹನುಮಂತರಾಯ ಇವರ ತಂಡ ನಗರದಲ್ಲಿ ಸಂಚರಿಸಿ ಅನಗತ್ಯ ಸೇವೆಗಳನ್ನು ಬಂದ್ ಮಾಡಿಸಿತು.

ಹಾಗೂ ಆದೇಶ ಮೀರಿ ತೆರೆದಿದ್ದ ಒಂದೆರೆಡೆ ಅಂಗಡಿಗಳನ್ನು ಎಚ್ಚರಿಕೆ ನೀಡಿ ಬಂದ್ ಮಾಡಿಸಲಾಯಿತು. ಗೌಡರ ಜಯದೇವಪ್ಪನವರ ಮಕ್ಕಳ ಬಟ್ಟೆ ಅಂಗಡಿಯಲ್ಲಿ ಬಾಗಿಲು ಮುಚ್ಚಿಕೊಂಡು ವ್ಯಾಪಾರ ಮಾಡುತ್ತಿದ್ದು ತಂಡ ಗದರಿಸಿ, ಅಂಗಡಿ ಬಾಗಿಲು ಮುಚ್ಚಿಸಿ ಕಾರ್ಯ ನಿರತ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಯಿತು. ಹಾಗೂ ಬೈಕ್‌ಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಯುವಕರಿಗೆ ಎಸ್‌ಪಿ ಯವರು ಗದರಿಸಿ ತಿಳಿಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ವೇಳೆ ಮಾತನಾಡಿ, ಸಾರ್ವಜನಿಕರಿಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು ಮತ್ತು ದಿನಸಿ ಸೇರಿದಂತೆ ಗೃಹ ಉಪಯೋಗಿ ವಸ್ತುಗಳು ಲಭ್ಯವಿರುತ್ತವೆ. ಸಾರ್ವಜನಿಕ ಸೇವೆಗೆ ಸಿದ್ದ ಎಂಬ ಮನಃಸ್ಥಿತಿ ಇದ್ದರೆ ದಿನದ ೨೪ ಗಂಟೆಯೂ ಅಗತ್ಯ ವಸ್ತುಗಳ ಮಾರಾಟ ಮಾಡಲು ಪ್ರಕಟಣೆ ನೀಡಲಾಗಿದೆ. ಜನರು ಮುಂಚಿತವಾಗಿ ತರಕಾರಿ, ಹಣ್ಣುಗಳನ್ನು, ದಿನಸಿಯನ್ನು ತಂದಿಟ್ಟುಗೊಳ್ಳುವಂತಹ ಭಯ ಮತ್ತು ಆತಂಕಗಳಿಗೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.

ನಗರದಲ್ಲಿ ಅನಗತ್ಯ ಸೇವೆಗಳ ಅಂಗಡಿಗಳು ತೆರೆದಿದ್ದು, ಅಂತಹ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ಇನ್ನೂ ತರಕಾರಿ, ಹಣ್ಣುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಸ್ವತಃ  ನಾವೇ ಕೊಳ್ಳಲು ಹೋಗುತ್ತೇವೆ. ಆ ಸಮಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅವರ ಲೈಸನ್ಸ್ ಬಂದ್ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.

ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯಪ್ಪ ಮಾತನಾಡಿ, ಅನಗತ್ಯ ಸೇವೆಗಳನ್ನು ಬಂದ್ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ ಅನಗತ್ಯ ಸೇವೆಗಳನ್ನು ಬಂದ್ ಮಾಡಿಸಲಾಗುತ್ತಿದೆ. ಕಾನೂನಿಗೆ ವಿರುದ್ದವಾಗಿ ಅಂಗಡಿಗಳನ್ನು ತೆರೆದಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಲಾಕ್‌ಡೌನ್ ವಿಷಯ ಮೊದಲೇ ತಿಳಿಸಿದ್ದರೂ ಅನಗತ್ಯವಾಗಿ ಓಡಾಡುತ್ತಿರುವ ಜನರಿಗೆ ಲಾಠಿ ರುಚಿ ತೋರಿಸಲಾಗುವುದು ಎಂದರು.

ಹೊಂಡದ ಸರ್ಕಲ್, ದುಗ್ಗಮ್ಮನ ದೇವಸ್ಥಾನ, ಬಿಎಸ್‌ಸಿ ಅಂಗಡಿ ರಸ್ತೆ, ಗೌಡರ ಜಯದೇವಪ್ಪನ ಅಂಗಡಿ ಎದುರು, ಎಂ.ಜಿ ರಸ್ತೆ, ಕೆಆರ್ ಮಾರ್ಕೆಟ್ ಡಬ್ಬಲ್ ರಸ್ತೆ, ಹಾಸಬಾವಿ ಸರ್ಕಲ್, ಜಗಳೂರು ಬಸ್ ಸ್ಟ್ಯಾಂಡ್, ರಾಂ & ಕೋ, ಬಿಎಸ್‌ಎನ್‌ಆರ್ ಸರ್ಕಲ್, ಆರ್‌ಟಿಓ ಕಚೇರಿ ಸರ್ಕಲ್, ಭಾಷಾನಗರ ಸರ್ಕಲ್, ಆಜಾದ್‌ನಗರ ಸರ್ಕಲ್, ಕೋಹಿನೂರ್ ಹೋಟೆಲ್, ಅರಳೀಮರ ಸರ್ಕಲ್, ಗಿರಿ ಟಾಕೀಸ್ ಸರ್ಕಲ್‌ಗಳಿಗೆ ತೆರಳಿ ಅನಗತ್ಯ ಸೇವೆಗಳನ್ನು ಬಂದ್ ಮಾಡಿಸಲಾಯಿತು.