ಡಿಕೆಶಿ ವಿರುದ್ಧ ಈಶ್ವರಪ್ಪ ಆಡಿದ ಮಾತು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ: ಕೆಬಿಪಿ

510

ಶಿವಮೊಗ್ಗ: ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪನವರು ಆಡಿದ ಮಾತುಗಳು ಅವರ ಘನತೆಗೆ ತಕ್ಕುದಲ್ಲ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಟೀಕಿಸಿದ್ದಾರೆ.
ನಗರದ ಪ್ರೆಸ್‌ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಬಿಪಿ, ನರೇಗಾ ಕಾಮಗಾರಿ ಚುರುಕುಗೊಳ್ಳಬೇಕು ಎಂದು ಹೇಳಿಕೆ ನೀಡಿರುವ ಡಿಕೆಶಿ ವಿರುದ್ಧ ಸಚಿವ ಈಶ್ವರಪ್ಪನವರು ವೈಯಕ್ತಿಕ ಕಾರಣಗಳನ್ನ ನೀಡಿರುವುದು ಸರಿಯಾದ ಮಾರ್ಗದಲ್ಲಿ ಇಲ್ಲ ಎಂದು ಟಾಂಗ್ ನೀಡಿದರು.
ನರೇಗಾ ಕಾಮಗಾರಿಗಳಿಗೆ ಹೆಚ್ಚಿನ ಚಾಲನೆ ನೀಡಬೇಕು. ಸರ್ಕಾರ ಎಲ್ಲೋ ಮಲಗಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷರ ವಿರುದ್ದ ಸಚಿವರು ಡಿಕೆ ಶಿವಕುಮಾರ್ ಎಲ್ಲಿ ಎಲ್ಲಿ ಮಲಗಿದ್ದಾರೆ ನನಗೆ ಗೊತ್ತಿದೆ ಎಂಬ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಅವರ ಮನಸ್ಥಿತಿ ಎಂತಹದ್ದು ಎಂದು ತಿಳಿಯುತ್ತದೆ ಎಂದು ಕಿಡಿಕಾರಿದ್ದಾರೆ.
ಆಚಾರ್ಯರ ಭವನ ಯಾವಾಗ?
ತಮ್ಮ ಅವಧಿಯಲ್ಲಿ ನಗರದಲ್ಲಿ ಚಾಲನೆ ನೀಡಿದ್ದ ಆಚಾರ್ಯತ್ರಯರ ಭವನವನ್ನು ಪೂರ್ಣಗೊಳಿಸುವುದಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದ ಸಚಿವ ಈಶ್ವರಪ್ಪ ಅವರು ಚುನಾವಣೆ ಕಳೆದು ಎರಡು ವರ್ಷವಾದರೂ ಕಾಮಗಾರಿ ಪುನರ್ ಆರಂಭಿಸಿಲ್ಲ. ಇಂದು ಶಂಕರಾಚಾರ್ಯ ಹಾಗೂ ರಮಾನುಜಚಾರ್ಯರ ಜಯಂತಿ ಇದೆ. ಈ ಸಂದರ್ಭದಲ್ಲಿ ಆಚಾರ್ಯರೇತ್ರರ ಭವನ ಆಗಿದ್ದರೆ ಬ್ರಾಹ್ಮಣ ಸಮುದಾಯಕ್ಕೆ ನೆಮ್ಮದಿ ಸಿಗುತ್ತಿತ್ತು ಎಂದ ಮಾಜಿ ಶಾಸಕ ಪ್ರಸನ್ನಕುಮಾರ್, ಸಚಿವರು ಕೇವಲ ಭಾಷಣದ ಮೂಲಕವೇ ಎಲ್ಲವನ್ನೂ ನಿರ್ಮಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.