ಜಿಲ್ಲಾಡಳಿತದಿಂದ ಕೊರೊನಾ ಸೋಂಕು ನಿರ್ವಹಣೆ ಕುರಿತು ಸಭೆ ಡ್ರಗ್ ಕಂಟ್ರೋಲರ್ ಮೆಡಿಕಲ್ ಶಾಪ್ಗಳ ಪರಿಶೀಲನೆ ನಡೆಸಲು ಸೂಚನೆ

599

ದಾವಣಗೆರೆ :

ಡ್ರಗ್ ಕಂಟ್ರೋಲರ್ ತಮ್ಮ ತಂಡದೊಂದಿಗೆ ಇಂದಿನಿಂದಲೇ ನಗರದ ಹಾಗೂ ತಾಲ್ಲೂಕುಗಳಲ್ಲಿರುವ ಮೆಡಿಕಲ್ ಶಾಪ್‌ಗಳಿಗೆ ಹೋಗಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ದಾಸ್ತಾನು ಪರಿಶೀಲಿಸಿ, ತಾತ್ಕಾಲಿಕ ಕೊರತೆಯ ಕಾರಣ ತಿಳಿದು ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಕೊರೊನಾ ಸೋಂಕು ನಿಯಂತ್ರಣ ಕುರಿತು ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡ್ರಗ್ ಕಂಟ್ರೋಲರ್ ಪರಿಶೀಲನೆ : ಇಂದಿನಿಂದಲೇ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್‌ರವರು ತಮ್ಮ ಅಧೀನದ ಸಿಬ್ಬಂದಿಗಳ ಜೊತೆ ನಗರ ಮತ್ತು ತಾಲ್ಲೂಕುಗಳ ವ್ಯಾಪ್ತಿಯನ್ನು ಹಂಚಿಕೊಂಡು ಮೆಡಿಕಲ್ ಶಾಪ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದರು. ಮಾಸ್ಕ್ ಮತ್ತು ಸ್ಯಾನಿಟೈಸರ್‌ನ ತಾತ್ಕಾಲಿಕ ಕೊರತೆ ನೀಗಬೇಕು. ಈ ನಿಟ್ಟಿನಲ್ಲಿ ನಿಗಾ ವಹಿಸಬೇಕೆಂದರು,

೧೦ ಚೆಕ್‌ಪೋಸ್ಟ್ : ಇತರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ವಾಹನಗಳ ತಪಾಸಣೆಗಾಗಿ ಜಿಲ್ಲೆಯಲ್ಲಿ ಒಟ್ಟು ೧೦ ಚೆಕ್‌ಪೋಸ್ಟ್‌ಗಳನ್ನು ತೆರೆದು ಪೊಲೀಸ್ ಇಲಾಖೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ.

೧೦ ಚೆಕ್‌ಪೋಸ್ಟ್‌ಗಳ ವಿವರ : ಬಾಡಾಕ್ರಾಸ್ ದಾವಣಗೆರೆ ನಗರ ಸರಹದ್ದು. ಶಾಮನೂರು ಬಳಿ ದಾವಣಗೆರೆ ನಗರ ಸರಹದ್ದು. ಲಕ್ಕಮುತ್ತೇನಹಳ್ಳಿ, ದಾವಣಗೆರೆ ತಾಲ್ಲೂಕು. ಹೆಚ್.ಬಸಾಪುರ, ದಾವಣಗೆರೆ ತಾಲ್ಲೂಕು. ಕುಮಾರಪಟ್ಟಣಂ ಹಲಸಬಾಳು ಹತ್ತಿರ. ಹರಿಹರ ತಾಲ್ಲೂಕು, ಕುರುಬರಹಳ್ಳಿ ಹರಿಹರ ತಾಲ್ಲೂಕು. ಚೀಲೂರು (ಟಿ.ಜೆ.ಹಳ್ಳಿ ಕ್ರಾಸ್) ಹೊನ್ನಾಳಿ ತಾಲ್ಲೂಕು, ಸವಳಂಗ ವೃತ್ತ, ಹೊನ್ನಾಳಿ ತಾಲ್ಲೂಕು. ಮಾದಾಪುರ ಚನ್ನಗಿರಿ ತಾಲ್ಲೂಕು. ದೊಣ್ಣೆಹಳ್ಳಿ ಜಗಳೂರು ತಾಲ್ಲೂಕು.

ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ಫ್ಯಾಕ್ಟರಿ, ಇತರೆ ಸಂಸ್ಥೆಗಳಿಗೆ ಆರೋಗ್ಯ ಇಲಾಖೆಯ ನಿಯೋಜಿತ ಅಧಿಕಾರಿಗಳು ನಿಯಮಿತವಾಗಿ ಭೇಟಿ ಮಾಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗುತ್ತಿದೆ.

ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ ಹರಿಹರದಲ್ಲಿ ೨೦, ಜಗಳೂರಿನಲ್ಲಿ ೧೪ ಮತ್ತು ಹೊನ್ನಾಳಿಯಲ್ಲಿ ೦೩ ಸ್ಯಾನಿಟೈಸರ್‌ಯುಕ್ತ ಕೈತೊಳೆಯುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ದಾವಣಗೆರೆ ನಗರದಲ್ಲಿ ೨ ಕೈತೊಳೆಯುವ ಕೇಂದ್ರ ಆರಂಭಿಸಿದ್ದು ಇನ್ನು ಉಳಿದಂತೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಎರಡು ಕಡೆ ಇಂದಿರಾ ಕ್ಯಾಂಟಿನ್ : ಜಿಲ್ಲಾ ಚಿಗಟೇರಿ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಈ ಎರಡು ಕಡೆ ಕ್ಯಾಂಟಿನ್ ಅವಶ್ಯಕತೆ ಇರುವ ಹಿನ್ನೆಲೆ ಇಂದಿರಾ ಕ್ಯಾಂಟಿನ್ ಸೇವೆ ನೀಡಲಾಗುತ್ತಿದ್ದು, ರೋಗಿಗಳ ಸಂಬಂಧಿಕರಿಗೆ ಟೋಕನ್ ವ್ಯವಸ್ಥೆ ಮಾಡಲಾಗುವುದು.

ಇಂದು ನಾಳೆ ಸೀಲ್-ಪೋಸ್ಟರ್ ಕೆಲಸ ಆಗಬೇಕು : ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ವಿದೇಶಕ್ಕೆ ಹೋಗಿ ಬಂದ ಅವಲೋಕನಾ ಅವಧಿಯಲ್ಲಿರುವ ಎಲ್ಲ ಪ್ರಯಾಣಿಕರ ಕೈಗೆ ಸೀಲ್ ಹಾಕುವ ಮತ್ತು ಅವರ ಮನೆ ಮುಂದೆ ಈ ಬಗ್ಗೆ ಪೋಸ್ಟರ್ ಹಚ್ಚುವ ಕೆಲಸವನ್ನು ಇಂದು ಮತ್ತು ನಾಳೆಯೊಳಗೆ ಮುಗಿಸಬೇಕೆಂದು ಸೂಚಿಸಿದರು.

ಬಾರ್‌ಗಳು ಸೀಲ್ : ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಂತರಾಯ ಮಾತನಾಡಿ, ಮಾರ್ಚ್ ೩೧ ರವರೆಗೆ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಈಗಾಗಲೇ ಬಂದ್ ಮಾಡಿ ಅವುಗಳನ್ನು ಸೀಲ್ ಮಾಡಲಾಗಿದೆ.

ಕೆಲವು ಸೇವೆಗಳಿಗೆ ವಿನಾಯಿತಿ : ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಗಿಲ್ ಅಂತಹ ಫ್ಯಾಕ್ಟರಿಗಳು, ಸಾಬೂನು ಕಾರ್ಖಾನೆ, ಬೇಕರಿಗಳು, ಬೇಕರಿ ಉತ್ಪನ್ನಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ಹಾಗೂ ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳು, ಪೆಟ್ರೋಲ್ ಬಂಕುಗಳು, ಗ್ಯಾಸ್, ಎಲ್‌ಪಿಜಿ, ತೈಲ ಏಜೆನ್ಸಿಗಳು ಮತ್ತು ಅದಕ್ಕೆ ಸಂಬಂಧಿಸಿದ ಉಗ್ರಾಣಗಳು ಹಾಗೂ ಹಿಟ್ಟಿನ ಗಿರಣಿಗಳು ಇದ್ದು, ಈ ಸೇವೆಗಳನ್ನು ನಿಷೇಧಿಸಿರುವುದಿಲ್ಲ ಎಂದರು.

ಎಟಿಎಂ ಸ್ಯಾನಿಟೈಸರ್ ಕಡ್ಡಾಯ : ಎಟಿಎಂಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇಡುವುದು ಕಡ್ಡಾಯವಾಗಿದ್ದು, ನಾನೇ ಸ್ವತಃ ಇಂದು ಪರಿಶೀಲನೆ ನಡೆಸಿದ ವೇಳೆ ಅನೇಕ ಕಡೆಗಳಲ್ಲಿ ಸ್ಯಾನಿಟೈಸರ್ ಇಟ್ಟಿಲ್ಲ. ಸ್ಯಾನಿಟೈಸರ್‌ಗಳನ್ನು ಇಂದಿನಿಂದಲೇ ಇಡದೇ ಹೋದರೆ ನೋಟಿಸ್ ನೀಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ರಿಗೆ ಸೂಚನೆ ನೀಡಿದರು.

ಎಚ್ಚರಿಕೆಯಿಂದ ಕೆಲಸ ಮಾಡೋಣ : ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು, ಪಿಡಿಓಗಳು, ಅಂಗನವಾಡಿ ಕಾರ್ಯಕರ್ತೆಯರು, ಅವಲೋಕನಾ ಅವಧಿಯಲ್ಲಿರುವ ಯಾವುದೇ ವ್ಯಕ್ತಿಯನ್ನು ಭೇಟಿ ನೀಡುವ ಸಮಯದಲ್ಲಿ ಅಗತ್ಯ ಸುರಕ್ಷಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ವೈಯಕ್ತಿಕ ಅಂತರ ಕಾಯ್ದುಕೊಳ್ಳಬೇಕೆಂದರು.

ಹಕ್ಕಿಜ್ವರ : ಹರಿಹರ ತಾಲ್ಲೂಕಿನ ಬನ್ನಿಕೋಡಿನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಮತ್ತು ಪಕ್ಷಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸುವ ಕೆಲಸ ಮುಗಿದಿದೆ ಎಂದು ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ದೃಢೀಕರಣ ನೀಡಿದ್ದಾರೆ.

      ಬನ್ನಿಕೋಡಿನಿಂದ ೧೦ ಕಿ.ಮೀ ವ್ಯಾಪ್ತಿಯ ಸರ್ವೇಕ್ಷಣಾ ವಲಯದಲ್ಲಿ ನಾಳೆಯಿಂದಲೇ ಡಿಸ್‌ಇನ್‌ಫೆಕ್ಷನ್ ಕೆಲಸ ಆರಂಭಗೊಳ್ಳಲಿದೆ. ಹಾಗೂ ಇನ್ನು ೩ ತಿಂಗಳವರೆಗೆ ಪ್ರತಿ ೧೫ ದಿನಗಳಿಗೊಮ್ಮೆ ಈ ವಲಯದಿಂದ ಸ್ಯಾಂಪಲ್ ತೆಗೆದು ಭೂಪಾಲ್‌ಗೆ ಪರೀಕ್ಷೆಗೆಂದು ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.