ಗ್ರಾ.ಪಂ. ಚುನಾವಣೆಯಲ್ಲಿ ಶೇ.೬೦ರಷ್ಟು ಸ್ಥಾನ ಪಡೆದ ಬಿಜೆಪಿ ಗ್ರಾಮ ಮಟ್ಟದಲ್ಲಿ ಬಿಜೆಪಿ ನೆಲೆಯೂರಿದೆ: ಸಚಿವ ಈಶ್ವರಪ್ಪ

391

ಶಿವಮೊಗ್ಗ: ಗ್ರಾ.ಪಂ. ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚು ಮಂದಿ ಗೆದ್ದಿದ್ದಾರೆ. ಬರೀ ನಗರ ಮಟ್ಟ ದಲ್ಲಿ ಮಾತ್ರ ಬಿಜೆಪಿ ಇದೆ ಎನ್ನುತ್ತಿದ್ದ ಕಾಲ ದೂರವಾಗಿ ಗ್ರಾಮ ಮಟ್ಟದಲ್ಲೂ ಬಿಜೆಪಿ ನೆಲೆಯೂರಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಚುನಾವಣೆಯ ಫಲಿತಾಂಶ ಬಿಜೆಪಿಗೆ ಆತ್ಮಸ್ಥೈರ್ಯ ತಂದಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಈ ಬಾರಿ ವ್ಯವಸ್ಥಿತವಾಗಿ ಚುನಾವಣೆ ನಡೆಸಿ ಶೇ.೬೦ಕ್ಕಿಂತಲೂ ಹೆಚ್ಚು ಗ್ರಾ.ಪಂ. ಸದಸ್ಯರನ್ನು ನಾವು ಹೊಂದಿ ದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯಲು ಇದು ಸಹಕಾರಿ ಎಂದರು.
ಗೋ ಮಾಂಸ ತಿನ್ನುವವರನ್ನು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ವರನ್ನು, ಹನುಮ ಜಯಂತಿ ದಿನ ಕೋಳಿ ಮಾಂಸ ತಿನ್ನುತ್ತೇನೆ ಎಂದು ಉದ್ದಟತನದಿಂದ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ದ ಗ್ರಾ.ಪಂ. ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿ ನಮ್ಮದು, ಗೋವುಗಳಿಗೆ ಪೂಜೆ ಮಾಡುತ್ತೇವೆ. ಹನುಮ ಜಯಂತಿ ಮಾಡುತ್ತೇವೆ. ಇಂತಹ ಸಂಸ್ಕೃತಿಗೆ ವಿರುದ್ದವಾಗಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಾರೆ. ಅವರು ಏನು ಬೇಕಾದರೂ ತಿನ್ನಲಿ ಆದರೆ ಸಾರ್ವಜನಿಕವಾಗಿ ಹನುಮ ಜಯಂತಿ ದಿನ ನಾನು ನಾಟಿ ಕೋಳಿ ತಿನ್ನುತ್ತೇನೆ ನನ್ನನ್ಯಾರು ಕೇಳುತ್ತಾರೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಎಸ್‌ಡಿಪಿಐ ಸೇರಿದಂತೆ ಕೆಲವು ಮುಸ್ಲಿಂ ಸಂಘಟನೆಗಳು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಿವೆ. ಇವರ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದು ಮತ್ತು ಇಂತಹ ಸಂಘಟನೆಗಳ ನಿಷೇಧಕ್ಕೂ ಕೂಡ ಚಿಂತನೆ ನಡೆಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಜ.೨ ಮತ್ತು ೩ರಂದು ರಾಜ್ಯ ಬಿಜೆಪಿ ವಿಶೇಷ ಸಭೆ ನಡೆಯಲಿದೆ. ಇದು ರಾಜಕೀಯ ಮಹತ್ವ ಪಡೆದುಕೊಳ್ಳಲಿದೆ ಎಂದರು.
ಶಿವಮೊಗ್ಗದಲ್ಲಿ ರೂಪಾಂತರಿ ಕೊರೋನಾ ೪ ಜನರಿಗೆ ಬಂದಿರುವುದು ಖಚಿತವಾಗಿದೆ. ಆದರೆ ಅದು ಈಗ ನಿಯಂತ್ರಣದಲ್ಲಿದೆ. ಬ್ರಿಟನ್‌ನಿಂದ ೨೩ ಜನ ಬಂದಿದ್ದರು. ಅವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜನರು ಗಾಬರಿಯಾಗುವ ಅವಶ್ಯಕತೆ ಇಲ್ಲ. ರೂಪಾಂತರಿ ಕೊರೋನಾದಿಂದ ಸಾವು ಹೆಚ್ಚಾಗಿ ಕಾಡುವುದಿಲ್ಲ. ಆದರೆ ಎಚ್ಚರಿಕೆ ಅಗತ್ಯ ಎಂದರು.
ಹಿಂದುಗಳಿಗೆ ಯುಗಾದಿ ಹೊಸ ವರ್ಷ. ಆದರೆ ಹೊಸ ವರ್ಷವನ್ನು ಯುವ ಜನಾಂಗ ಅತ್ಯಂತ ಎಚ್ಚರಿಕೆ ಯಿಂದ ಆಚರಿಸಲಿ. ಜವಾಬ್ದಾರಿ ಅರಿಯದೇ ಹುಚ್ಚುಚ್ಚಾಗಿ ಮಾಡಿದರೆ ಪೊಲೀಸ್ ಠಾಣೆ ಸೇರುವುದು ಖಚಿತ ಎಂದರು.
ಜನವರಿ ೧ ರಿಂದ ೧೦ ಮತ್ತು ೧೨ ನೇ ತರಗತಿಗಳು ಆರಂಭವಾಗುವುದು ಖಚಿತವಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವರು ಒಳ್ಳೆಯ ನಿರ್ಧಾರವನ್ನೇ ತೆಗೆದು ಕೊಂಡಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡುವ ಕಾಂiiಕ್ರಮಕ್ಕೂ ಕೂಡ ಯೋಜನೆ ರೂಪಿಸಲಾಗಿದೆ ಎಂದರು.
ಗ್ರಾ.ಪಂ. ಚುನಾವಣೆಯಲ್ಲಿ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸಮಬಲ ವಿದೆ. ಬಿಜೆಪಿ ಇಂತಹ ಸಮಬಲದ ಪಂಚಾಯಿತಿಗಳಲ್ಲೂ ಅವರ ಮನವೊಲಿಸಿ ಬಿಜೆಪಿ ಬೆಂಬಲಿತ ಗ್ರಾಪಂಗಳನ್ನಾಗಿ ಮಾಡಲಾಗುವುದು ಎಂದರು.