ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ : ಸುಂದರೇಶ್

369

ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಸಂಖ್ಯೆಯಲ್ಲಿ ಗೆದ್ದಿದ್ದಾರೆ ಹಾಗೂ ಗ್ರಾ.ಪಂಗಳಲ್ಲಿ ಬಹುಮತ ಪಡೆಯುವುದರ ಮೂಲಕ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ೨೨೪ ಗ್ರಾ.ಪಂ.ಗಳ ೨೬೦೯ ಸ್ಥಾನಗಳಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷದ ಚಿಹ್ನೆ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದಿಂದ ಪ್ರಾತಿನಿಧಿಕವಾಗಿ ಬೆಂಬಲಿತ ಅಭ್ಯರ್ಥಿ ಗಳು ಸ್ಪರ್ಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.
ಗ್ರಾ.ಪಂ. ಚುನಾವಣೆಗಾಗಿ ಎಲ್ಲಾ ತಾಲೂಕುಗಳಿಗೆ ಪ್ರವಾಸ ಮಾಡಲಾ ಗಿತ್ತು. ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹಕಾರದೊಂದಿಗೆ ಚುನಾವಣೆ ನಡೆಸಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ.
ಜಿಲ್ಲೆಯ ಸಾಗರ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.೫೦ರಷ್ಟು ಬಿಜೆಪಿಯ ಸಮಬಲದಲ್ಲಿ ಕಾಂಗ್ರೆಸ್ ಮುನ್ನಡೆದಿದೆ. ಹೊಸನಗರ ತಾಲ್ಲೂಕಿ ನಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಿಕಾರಿಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಶೇ.೪೫ರಷ್ಟು ಸಾಧನೆ ಮಾಡಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಪ್ರಬಲ ವಾಗಿ ಕಾಂಗ್ರೆಸ್ ಸಂಘಟನೆಗೊಂಡಿದೆ ಎಂದರು. ಸೊರಬ ತಾಲ್ಲೂಕಿನ ಸೊರಬ ಬ್ಲಾಕ್‌ನಲ್ಲಿ ಶೇ.೫೦ರಷ್ಟು ಸಾಧನೆ ಮಾಡಿ ಆನವಟ್ಟಿ ಬ್ಲಾಕ್‌ನಲ್ಲಿ ಬಹುಮತ ಗಳಿಸಿಕೊಂಡಿದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಪಡೆದು ಬಹುತೇಕ ಎಲ್ಲಾ ಗ್ರಾ.ಪಂ. ಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿ ರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಸುಳ್ಳು, ಅವರಿಗೆ ಹೀಗೆ ಹೇಳಿ ಅಭ್ಯಾಸವಿದೆ. ಫಲಿತಾಂಶವೇನು ಸುಳ್ಳಾ ಗುವುದಿಲ್ಲ. ಗೆದ್ದವರು ನಮ್ಮೆದುರಿಗೆ ಇದ್ದಾರೆ, ಪಕ್ಷೇತರರನ್ನು ಸೇರಿಸಿಕೊಂಡು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ. ಯೋಗೀಶ್, ವೇದಾ ವಿಜಯ ಕುಮಾರ್, ಶರತ್, ಸಿ.ಎಸ್. ಚಂದ್ರಭೂಪಾಲ ಮತ್ತಿತರರಿದ್ದರು.