ಗ್ರಾಪಂ ಎಲೆಕ್ಷನ್‌ಗೆ ಕಾಂಗ್ರೆಸ್ ರೆಡಿ ಗಲಭೆಯಲ್ಲೂ ಬಿಜೆಪಿ ರಾಜಕೀಯ

362

ಶಿವಮೊಗ್ಗ: ಗ್ರಾ.ಪಂ. ಚುನಾವಣೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಳೆದ ಮೂರು ತಿಂಗಳಿಂದಲೇ ಸಿದ್ದತೆ ನಡೆಸಿದ್ದು, ಈಗಾಗಲೇ ಮೇಲ್ವಿಚಾ ರಣಾ ಸಮಿತಿಗಳನ್ನು ನೇಮಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಗ್ರಾ.ಪಂ. ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಟೆಯಾಗಿ ತೆಗೆದು ಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯತೆ ಹಾಗೂ ಕಾಂಗ್ರೆಸ್ ಅಧಿಕಾರವಧಿಯಲ್ಲಿನ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಲಿದೆ ಎಂದರು.
ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ, ವಿಧಾನಸಭಾ ಕ್ಷೇತ್ರದ ಮಟ್ಟದ ವೀಕ್ಷಕರ ಸಮಿತಿ, ಬ್ಲಾಕ್ ಮಟ್ಟದ ವೀಕ್ಷಕರ ಸಮಿತಿ, ತಾಲ್ಲೂಕುಗಳ ಗ್ರಾಮಾಂತರ ಮಟ್ಟದ ಮೇಲ್ವಿಚಾರಣಾ ಸಮಿತಿ ಗಳನ್ನು ರಚಿಸಲಾಗಿದೆ. ಈ ಸಮಿತಿಗಳಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.
ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಆರ್. ಪ್ರಸನ್ನಕುಮಾರ್, ಮಂಜುನಾಥ ಭಂಡಾರಿ, ಬೇಳೂರು ಗೋಪಾಲಕೃಷ್ಣ, ಸಂಗಮೇಶ್ವರ್, ಹೆಚ್.ಎಂ. ಚಂದ್ರಶೇಖರಪ್ಪ, ಕೆ.ಬಿ. ಪ್ರಸನ್ನಕುಮಾರ್ ಇನ್ನಿತರ ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಶಿವಮೊಗ್ಗದ ಅಭಿವೃದ್ದಿಯನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ. ಕೇವಲ ಘೋಷಣೆಗಳು ಮಾತ್ರ ಇವೆ. ಸ್ಮಾರ್ಟ್‌ಸಿಟಿ ಲೋಪಗಳಂತೂ ಹೇಳತೀರದಾಗಿದೆ. ಇದರ ಹೆಸರಲ್ಲಿ ಹಣ ಲೂಟಿಯಾಗುತ್ತಿದೆ. ಸ್ಥಳೀಯ ಚುನಾವಣೆಗಳಲ್ಲೂ ಸಹ ಗೆದ್ದ ಅಭ್ಯರ್ಥಿಗಳನ್ನು ಖರೀದಿ ಮಾಡುವ ಹೀನಕೆಲಸಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ. ಸಿಎಂ ತವರು ಕ್ಷೇತ್ರ ಎಂದು ಹೇಳಲು ನಾಚಿಕೆಯಾಗುತ್ತದೆ ಎಂದು ಟೀಕಿಸಿದರು.
ಗಲಭೆಯಲ್ಲಿ ರಾಜಕೀಯ
ಶಿವಮೊಗ್ಗದಲ್ಲಿ ನಡೆದಿರುವುದು ಕೋಮು ಗಲಭೆಯಲ್ಲ. ಸಣ್ಣದರಲ್ಲಿ ಚಿವುಟಿ ಹಾಕಬೇಕಾದ್ದನ್ನು ಬಿಜೆಪಿ ನಾಯಕರು ದೊಡ್ಡದಾಗಿ ಮಾಡಿದ್ದಾರೆ. ಇದರ ಹಿಂದೆ ರಾಜಕೀಯ ಹಸ್ತಕ್ಷೇಪ ವಿದೆ ಎಂದು ಆರೋಪಿಸಿದರು.
ಧೈರ್ಯ ತುಂಬುವ ಕೆಲಸ ಮಾಡಬೇಕಾದ ಬಿಜೆಪಿ ನಾಯಕರ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ. ಶಿವಮೊಗ್ಗ ನಗರವನ್ನು ಮತ್ತಷ್ಟು ಭಯದ ಕೂಪಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದರು. ಆದರೆ ಪೊಲೀಸರು ಗಲಾಟೆಯನ್ನು ಹದ್ದುಬಸ್ತಿಗೆ ತಂದು ಒಳ್ಳೆಯ ಕೆಲಸ ಮಾಡಿದ್ದಾರೆಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಎಲ್. ರಾಮೇಗೌಡ, ಸಿ.ಎಸ್. ಚಂದ್ರಭೂಪಾಲ್, ಬಾಬು, ಚಂದನ್, ಸೌಗಂಧಿಕ, ತಿಮ್ಮಣ್ಣ, ಪ್ರವೀಣ್, ಸುರೇಂದ್ರ ಸೇರಿದಂತೆ ಹಲವರಿದ್ದರು.