ಗೋಸಾಗಾಟ ವಾಹನ ಪಲ್ಟಿ – ೧೦ ಜಾನುವಾರು ಸಾವು….

388

ಶಿವಮೊಗ್ಗ: ಕಳೆದ ಬೆಳಗಿನಜಾವ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಠಾಣಾ ವ್ಯಾಪ್ತಿಯಲ್ಲಿ ದಾನಸಾಲೆ ಎಂಬಲ್ಲಿ ಕ್ಯಾಂಟರ್ ಲಾರಿ ಪಲ್ಟಿ ಹೊಡೆದು ಅದರಲ್ಲಿದ್ದ ೧೦ ಜನುವಾರುಗಳು ಸಾವು ಕಂಡಿದ್ದು, ಉಳಿದ ಜಾನುವಾರುಗಳು ತೀವ್ರ ಗಾಯದೊಂದಿಗೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಾಲಕನಿಗೆ ಗಾಯವಾಗಿ ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರ ವಶದಲ್ಲಿದ್ದಾರೆ. ದಾವಣಗೆರೆಯಿಂದ ಮಂಗಳೂರಿಗೆ ಸಾಗಾಟವಾಗುತ್ತಿದ್ದ ಎಂ-೧೭ ಆ ೬೪೭೧ ವಾಹನವಾಗಿದ್ದು, ಚಾಲಕನ ಹೇಳಿಕೆಯಂತೆ ಈ ದಂಧೆ ಅನೇಕ ವರ್ಷಗಳಿಂದ ನಡೆಯುತ್ತಿದ್ದು ಮಂಗಳೂರಿನ ಮಾಂಸದ ಮಾರುಕಟ್ಟೆಗೆ ಹೋಗುತ್ತಿರುವುದಾಗಿ ತಿಳಿದು ಬಂದಿದೆ.
ಆಯನೂರು- ಹಣಗೆರೆ- ಬೆಜ್ಜವಳ್ಳಿ- ತೀರ್ಥಹಳ್ಳಿ – ಆಗುಂಬೆ ಮಾರ್ಗವಾಗಿ ದಕ್ಷಣ ಕನ್ನಡಕ್ಕೆ ಹೋಗುವ ಇಂತಹ ವಾಹನಕ್ಕೆ ಮಾಳೂರು, ತೀರ್ಥಹಳ್ಳಿ ಮತ್ತು ಆಗುಂಬೆ ಠಾಣೆಯ ಒಂದಿಬ್ಬರು ಸಹಾಯ ನೀಡುತ್ತಿದ್ದು, ಅವರುಗಳ ಮಾಹಿತಿದಾರರಾಗಿ ವಾಹನ ಸುಗಮವಾಗಿ ಹೋಗುವ, ಯಾವುದೇ ಅಡೆತಡೆ ಇಲ್ಲದೇ ಸಾಗಾಟವಾಗಲು ಸಹಕರಿಸುವ ತಂಡದಲ್ಲಿ ಶಾಮೀಲಾಗಿ ದ್ದಾರೆಂದು ತಿಳಿದು ಬಂದಿದೆ.
ಕೆಲವು ದಿನಗಳಿಂದ ಶಿವಮೊಗ್ಗ ಗಲಭೆಯ ಉದ್ದೇಶದಿಂದ ಮಾಳೂರು, ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಗೇಟು ಹಾಕಿದ್ದು, ಜೊತೆಯಲ್ಲಿ ಆಗುಂಬೆಯಲ್ಲಿ ಅರಣ್ಯ ತಪಾಸಣಾ ಗೇಟು ಇದೆ. ಅನೇಕ ಭಾಗಗಳಲ್ಲಿ ಸಿಸಿ ಕ್ಯಾಮಾರ ಇದ್ದು, ಇದೊಂದು ಕೋಟ್ಯಾಂತರ ವಹಿವಾಟು ನಡೆಸುವ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಂಧೆ ಎಂದು ಜನರು ಚರ್ಚಿಸುತ್ತಿದ್ದಾರೆ.
ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾ ರಕ್ಷಣಾಧಿಕಾರಿ ಕೆ. ಎಂ. ಶಾಂತರಾಜುರವರು ಈ ಬಗ್ಗೆ ಸಂಪೂರ್ಣ ತನಿಖೆಗೆ ಒಳಪಡಿಸಿ ಈ ಬಗ್ಗೆ ವಿಶೇಷ ಅಧಿಕಾರಿಗಳ ತಂಡ ರಚಿಸಿ, ಈ ಸಾಗಾಟದ ಮುಖ್ಯಸ್ಥ ಹಾಗೂ ಆತನಿಗೆ ಸಹಕರಿಸುತ್ತಿರುವ ಪೊಲೀಸರು ಹಾಗೂ ಅರಣ್ಯ ಗೇಟ್ ಸಿಬ್ಬಂದಿಗಳು ಶಾಮೀಲಾಗಿದ್ದರೆ ಅವರ ವಿವರ ಕಲೆ ಹಾಕಿ ಸಂಪೂರ್ಣ ವಿವರಗಳ ಹಗರಣ ಬಯಲಿಗೆ ತರಲಿ ಎಂದು ಜನರ ಆಸೆ ಹಾಗೂ ವಿನಂತಿಯಾಗಿದೆ.
ಚಾಲಕ ಈಗ ಪೊಲೀಸರ ವಶದಲ್ಲಿದ್ದು, ಆತನನ್ನು ತನಿಖೆಗೆ ಗುರಿಪಡಿಸಿ ಮಾಹಿತಿ ಪಡೆದು ಇದರ ಹಿಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ನಡೆಯಬೇಕಿದೆ.
ಸ್ಥಳಕ್ಕೆ ಶಾಸಕ ಆರಗ ಭೇಟಿ
ಇಂದು ಮುಂಜಾನೆ ದಾವಣಗೆರೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಗೋವುಗಳನ್ನು ತುಂಬಿದ ವಾಹನ ಬೆಜ್ಜವಳ್ಳಿ ಸಮೀಪ ದಾನಸಾಲೆಯಲ್ಲಿ ಪಲ್ಟಿ ಹೊಡೆದು ೧೦ ಜಾನುವಾರುಗಳು ಸಾವನ್ನಪ್ಪಿದ ಪ್ರಕರಣ ಗಮನಿಸಿದ ಬೆಂಗಳೂರಿನ ಅಧಿವೇಶನದಲ್ಲಿ ಭಾಗವಹಿಸಲು ಮೆಕ್ಕಾಂ ಮಾಡಿದ ಕ್ಷೇತ್ರದ ಶಾಸಕ ಆರಗ ಜನೇಂದ್ರ ತಡಮಾಡದೇ ಬೆಂಗಳೂರಿಂದ ತೀರ್ಥಹಳ್ಳಿಗೆ ಪ್ರಯಾಣಿಸಿ ೧೧ ಗಂಟೆಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಜಿಲ್ಲಾರಕ್ಷಣಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಕಠಿಣ ಕ್ರಮ ಜರುಗಿಸಲು ಕೋರಿದ್ದಾರೆ.