ಗಾಂಧಿ ಬಜಾರ್‌ಗೆ ಎಂಟ್ರಿ ಕೊಟ್ಟ ಡಿಸಿ-ಎಸ್‌ಪಿ: ಮುಂದೇನಾಯ್ತು…?

535

ಶಿವಮೊಗ್ಗ: ಕೊರೋನಾ ಆರ್ಭಟದ ಆರಂಭದಿಂದಲೂ ಶಿವಮೊಗ್ಗ ಜಿಲ್ಲೆಯು ಗ್ರೀನ್ ಜೋನ್‌ನಲ್ಲಿದ್ದು, ಇದೀಗ ಜಿಲ್ಲೆಯಲ್ಲಿ ಕೆಲ ಚಟುವಟಿಕೆಗಳಿಗೆ ಸ್ವಲ್ಪಮಟ್ಟಿನ ಸಡಿಲಿಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆಯವರೆಗೆ ಗಾಂಧಿ ಬಜಾರ್‌ನಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ವಿನಾಯ್ತಿ ನೀಡಲಾಗಿತ್ತು. ಆದರೆ ಕೊರೋನ ವೈರಸ್‌ನ ಲಾಕ್ ಡೌನ್ ಉಲ್ಲಂಘನೆ ಆಗದಂತೆ ನೋಡಿಕೊಂಡು ವಿನಾಯಿತಿಯ ಬಳಕೆ ಮಾಡಿಕೊಳ್ಳಲು ತಿಳಿಸಲಾಗಿತ್ತು.
ಆದರೆ ಕೆಲವರು ಸ್ವಲ್ಪ ಸಡಿಲಿಕೆಯಾದರೂ ಅದನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ಅಂತೆಯೇ ಗಾಂಧಿ ಬಜರ್‌ನಲ್ಲಿ ಕೆಲ ಅಂಗಡಿಗಳನ್ನ ನಿನ್ನೆಯಿಂದ ಓಪನ್ ಮಾಡಿಕೊಳ್ಳಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಜನ ರಸ್ತೆಗಿಳಿದು ಅವಶ್ಯಕ ಇರುವವರು-ಇಲ್ಲದವರು ರಾಜಾರೋಷವಾಗಿ ಓಡಾಡಲು ಆರಂಭಿಸಿದ್ದರು. ಇದನ್ನ ಅರಿತ ಪೊಲೀಸರು ಮಧ್ಯಾಹ್ನದವರೆಗೆ ಮಾತ್ರ ತೆರೆಯಲು ಅವಕಾಶ ನೀಡಿ ನಂತರ ವ್ಯಾಪಾರ ಸ್ಥಗಿತಗೊಳಿಸಲು ಸೂಚಿಸಿದರು. ಈ ನಡುವಳಿಕೆ ಅಲ್ಲಿನ ನಾಗರೀಕರಲ್ಲಿ ಸ್ವಲ್ಪಮಟ್ಟಿನ ಗೊಂದಲಕ್ಕೆ ಕಾರಣವಾಗಿತ್ತು.
ಈ ಎಲ್ಲಾ ಗೊಂದಲಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಇಂದು ತೆರೆ ಎಳೆದಿದ್ದಾರೆ. ಇಂದು ಮಧ್ಯಾಹ್ನ ಡಿಸಿ ಕೆ.ಬಿ.ಶಿವಕುಮಾರ್ ಮತ್ತು ಎಸ್ಪಿ ಕೆ.ಎಂ.ಶಾಂತರಾಜುರವರನ್ನೊಳಗೊಂಡ ತಂಡ ಬಜರ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ವರ್ತಕರೊಂದಿಗೆ ಮಾತನಾಡಿ ಕೊರೋನ ಹಿನ್ನಲೆಯಲ್ಲಿ ಘೋಷಣೆಗೊಂಡ ಸೆಕ್ಷನ್ ೧೪೪ನ್ನ ಯಾರು ಉಲ್ಲಂಘಿಸದಂತೆ ತಿಳಿ ಹೇಳಿದ್ದಾರೆ.
ಅದರಂತೆ ಕೃಷಿಗೆ ಸಂಬಂಧ ಪಟ್ಟ ಅಂಗಡಿಗಳನ್ನ ಬೆಳಿಗ್ಗೆ ೬-೧೦ ರವರೆಗೆ ನಡೆಸುವುದಾಗಿ, ದಿನಸಿ ಅಂಗಡಿಯನ್ನ ೧೦ ರಿಂದ ಮದ್ಯಾಹ್ನ ೧ ಗಂಟೆಯವರೆಗೆ ನಡೆಸುವಂತೆ ಹಾಗೂ ಚಿನ್ನಬೆಳ್ಳಿ ಹಾಗೂ ವಾಚ್ ಅಂಗಡಿಯವರಿಗೆ ವ್ಯಾಪಾರ ಮಾಡದಂತೆ ಸೂಚಿಸಲಾಗಿದೆ.
ಡಿಸಿ-ಎಸ್ಪಿ ಕಂಡ ವ್ಯಾಪಾರಸ್ಥರು ಮಾಡಿದ್ದೇನು?
ವೀಕ್ಷಣೆಗೆಂದು ಬಂದ ಡಿಸಿ ಮತ್ತು ಎಸ್ಪಿಯವರನ್ನ ಕಂಡ ಕೆಲ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಶೆಟರ್‌ಗಳನ್ನ ಎಳೆಯಲು ಮುಂದಾಗಿದ್ದು ಕಾಕತಾಳೀಯವಾಗಿ ಕಂಡುಬಂದಿತ್ತು. ಬಜರ್‌ನಲ್ಲಿ ಅವಕಾಶ ಮಾಡಿಕೊಟ್ಟ ಅಂಗಡಿಗಳನ್ನ ನಿನ್ನೆ ಡಿವೈಎಸ್ಪಿ ರವರ ನೇತೃತ್ವದಲ್ಲಿ ಸಭೆ ನಡೆಸಿ ದಿನಸಿ ಅಂಗಡಿಗಳನ್ನ, ಕೃಷಿ ಅಂಗಡಿಗಳನ್ನ ತರಕಾರಿ ಅಂಗಡಿಗಳನ್ನ ೧ ಗಂಟೆಯ ಒಳಗೆ ಬಂದ್ ಮಾಡುವುದಾಗಿ ಸಭೆ ನಿರ್ಧರಿಸಿತ್ತು.
ಅದರಂತೆ ಇಂದು ಅಧಿಕಾರಿಗಳು ಭೇಟಿ ನೀಡಿದ ಹಿನ್ನಲೆಯಲ್ಲಿ ಸರಿಸುಮಾರು ೧೨-೩೦ರ ಆಜುಬಾಜುವಿನಲ್ಲಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳನ್ನ ಕಂಡ ವ್ಯಾಪಾರಸ್ಥರು ಬಂದ್ ಮಾಡಿಸಲು ಬಂದಿರಬೇಕು ಎಂದು ಭಾವಿಸಿ ತಮ್ಮ ತಮ್ಮ ಅಂಗಡಿಗಳ ಶೆಟರ್‌ಗಳನ್ನ ಎಳೆಯಲು ಆರಂಭಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನಾವು ಬಂದ್ ಮಾಡಲು ಬಂದಿಲ್ಲ. ಆದರೆ ಸೆಕ್ಷನ್ ೧೪೪ರ ನಿಯಮವನ್ನ ಪಾಲಿಸಲಾಗುತ್ತಿದೆಯೇ ಎಂಬ ವೀಕ್ಷಣೆ ಮಾಡಲು ಬಂದಿದ್ದೇವೆ ಎಂದು ವರ್ತಕರಲ್ಲಿ ಧೈರ್ಯ ತುಂಬಿದರು.
ಸಾರ್ವಜನಿಕರಿಗೆ ಕೆಲ ಸಲಹೆಗಳು:
ಗಾಂಧಿ ಬಜರ್‌ನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಡಿಸಿ ಮತ್ತು ಎಸ್ಪಿ, ಸರಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರಾ? ಕರೋನಾ ನಿಯಮಗಳನ್ನು ಪಾಲಿಸ್ತಾ ಇದ್ದಾರಾ ಅನ್ನೋ ಕುರಿತು ಪರಿಶೀಲನೆ ನಡೆಸಿದರು. ಕೆಲ ಸಲಹೆ ಸೂಚನೆಗಳನ್ನು ಸಹ ಈ ಸಂದರ್ಭದಲ್ಲಿ ನೀಡಿದ ಅವರು, ಅಗತ್ಯ ಮುಂಜಗ್ರತೆ ವಹಿಸಿಕೊಂಡು ವಹಿವಾಟು ನಡೆಸುವಂತೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಿಲ್ ನೀಡದೇ ವ್ಯಾಪಾರ: ಕ್ರಮಕ್ಕೆ ಸೂಚನೆ
ಸ್ಟೇಷನರಿ, ದಿನಸಿ ಹಾಗೂ ಇತರೆ ಎಲ್ಲಾ ಹೋಲ್ ಸೇಲ್ ವ್ಯಾಪಾರವನ್ನ ಮಾಡುವ ರಿಷಬ್ ಅಂಗಡಿಗೆ ಭೇಟಿ ನೀಡಿದ ಎಸ್ಪಿ ಹಾಗೂ ಡಿಸಿ ನೀವು ಮಾಡುವ ವ್ಯಾಪಾರಕ್ಕೆ ಬಿಲ್ ನೀಡಲಾಗುತ್ತಿದೆಯಾ ಎಂದು ಕೇಳಿದ್ದಾರೆ. ಇದಕ್ಕೆ ಇಲ್ಲವೆಂದ ಹೇಳಿದ್ದಕ್ಕೆ ಕಮರ್ಷಿಯಲ್ ಟ್ಯಾಕ್ಸ್ ನವರನ್ನ ಸ್ಥಳದಲ್ಲಿಯೇ ಕರೆಸಿದ ಜಿಲ್ಲಾಧಿಕಾರಿಗಳು ಕಾನೂನಿನ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ದೊಡ್ಡಪೇಟೆ ಸಿಪಿಐ ವಸಂತ್ ಕುಮಾರ್ ಮೊದಲಾದ ಪೊಲೀಸ್ ಅಧಿಕಾರಿಗಳು ಡಿಸಿ ಮತ್ತು ಎಸ್ಪಿಯವರ ಜೊತೆ ಭೇಟಿ ನೀಡಿದ ಸಂದರ್ಭದಲ್ಲಿದ್ದರು.
ಮಾನವೀಯತೆ ಮೆರೆದ ಅಧಿಕಾರಿಗಳು:
ಗಾಂಧಿ ಬಜರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನಕುಲುಕವ ದೃಶ್ಯವೊಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಎಸ್ಪಿ ಕೆ.ಎಂ.ಶಾಂತರಾಜುರವರಿಗೆ ಎದುರಾಗಿದೆ. ಬಜರ್ ಮುಖ್ಯರಸ್ತೆಯಲ್ಲಿರುವ ಎಸ್ ಬಿ ಐ ಬ್ಯಾಂಕ್‌ಗೆ ಬಂದಿದ್ದ ರಂಗನಾಥ್ ಕುಮಾರ್(೬೨) ರಸ್ತೆಯಲ್ಲೇ ಆಯಾಸವಾಗಿ ಕುಸಿದಿದ್ದರು. ಇವರಿಗೆ ಸ್ವಲ್ಪ ಮಟ್ಟಿಗೆ ಫೀಟ್ಸ್ ಸಹ ಬಂದಿತ್ತು.ಈ ಸಂದರ್ಭದಲ್ಲಿ ಖುದ್ದಾಗಿ ಡಿಸಿ ಮತ್ತು ಎಸ್ಪಿ ಅವರು ವೃದ್ಧ ರಂಗನಾಥ್ ಕುಮಾರ್ ಅವರಿಗೆ ಆರೈಕೆ ಮಾಡಿ ಪೊಲೀಸ್ ಇಲಾಖೆಯ ಜೀಪಿನಲ್ಲಿ ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂಲಕ ನಗರದ ಜನತೆಯೊಂದಿಗೆ ಅಧಿಕಾರಿಗಳು ಸದಾ ಇದ್ದಾರೆ ತೋರಿಸಿಕೊಡುವ ಮೂಲಕ ಹೃದಯವಂತಿಗೆ ಮೆರೆದರು.