ಖ್ಯಾತ ಉದ್ಯಮಿ ಕಿಮ್ಮನೆ ಜಯರಾಂ ಕುಟುಂಬದಿಂದ ಆಹಾರ ಕಿಟ್ ಕೊಡುಗೆ…

479

ಶಿವಮೊಗ್ಗ: ಕರೋನಾ ಕಂಟ್ರೋಲ್‌ಗಾಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆದಿದ್ದು, ಈ ವೇಳೆ ಸಂಕಷ್ಟದಲ್ಲಿರುವವರಿಗೆ ನೆರವಾಗಲು, ಉದ್ಯಮಿ ಕಿಮ್ಮನೆ ಜಯರಾಂ ಕುಟುಂಬವು ಶಿವಮೊಗ್ಗ ಮಹಾನಗರ ಪಾಲಿಕೆಗೆ ಸುಮಾರು ೫೦೦ ಫುಡ್ ಕಿಟ್‌ಗಳನ್ನು ಇಂದು ಹಸ್ತಾಂತರಿಸಿತು.
ಉದ್ಯಮಿ-ದಾನಿಗಳಾದ ಕಿಮ್ಮನೆ ಜಯರಾಂ ಅವರ ಪುತ್ರ ರೋನಕ್ ಜಯರಾಂರವರು, ಪಾಲಿಕೆ ಕಚೇರಿ ಆವರಣದಲ್ಲಿ ಫುಡ್ ಕಿಟ್‌ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಆಯುಕ್ತ ಚಿದಾನಂದ ವಟಾರೆ, ಕಾರ್ಪೊರೇಟರ್‌ಗಳಾದ ಹೆಚ್.ಸಿ. ಯೋಗೇಶ್, ಶಂಕರ್ ಗನ್ನಿ, ಯುವ ಉದ್ಯಮಿ ರಾಘವೇಂದ್ರ ಹಾಗೂ ಮನುರವರು ಉಪಸ್ಥಿತರಿದ್ದರು.
ದಿನನಿತ್ಯದ ಬಳಕೆಗೆ ಬೇಕಾದಂತಹ ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ರಸಂ ಪೌಡರ್, ಗೋಧಿ ಸೇರಿದಂತೆ ವಿವಿಧ ಅವಶ್ಯಕ ಸಾಮಾಗ್ರಿಗಳು ಈ ಫುಡ್‌ಕಿಟ್‌ನಲ್ಲಿದ್ದು, ಇವುಗಳನ್ನು ನಿಜವಾಗಿಯೂ ಅಗತ್ಯವಿರುವವರಿಗೆ ತಲುಪಿಸುವಂತೆ ಪಾಲಿಕೆ ಆಡಳಿತಕ್ಕೆ ಕಿಮ್ಮನೆ ಜಯರಾಂ ಕುಟುಂಬ ಮನವಿ ಮಾಡಿತು.
೧೦ ಲಕ್ಷ ರೂ. ದೇಣಿಗೆ:
ಖ್ಯಾತ ಉದ್ಯಮಿ- ಕೊಡುಗೈ ದಾನಿಗಳಾದ ಕಿಮ್ಮನೆ ಜಯರಾಂರವರು, ಈಗಾಗಲೇ ಪ್ರಧಾನಮಂತ್ರಿಗಳ ಪಿಎಂ ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಕೋವಿಡ್-೧೯ ಪರಿಹಾರ ನಿಧಿಗೆ ತಲಾ ೫ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆಗೆ ೨೦೦೦ ಮಾಸ್ಕ್ ಮತ್ತು ೫೦೦ ಸ್ಯಾನಿಟೈಸರ್‌ಗಳನ್ನು ಕೊಡುಗೆಯಾಗಿ ನೀಡುವ ಮೂಲಕ, ಕೊರೋನಾ ವಿರುದ್ದದ ಹೋರಾಟಕ್ಕೆ ತಮ್ಮ ಕೈ ಜೋಡಿಸಿದ್ದಾರೆ.